Tuesday, August 18, 2026

BDA Apartments

Home Front Page ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ: ವಿಜಯೇಂದ್ರ ಪರ ಬ್ಯಾಟ್ ಬೀಸಿದ ಸಂಸದ ಯದುವೀರ್

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ: ವಿಜಯೇಂದ್ರ ಪರ ಬ್ಯಾಟ್ ಬೀಸಿದ ಸಂಸದ ಯದುವೀರ್

ಮೈಸೂರು,ಜನವರಿ,31,2025 (www.justkannada.in):  ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಕ್ಷದಲ್ಲಿ ಕೆಲ ನಾಯಕರು ಆಗ್ರಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್,  ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ  ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕೂಡ ಪಕ್ಷವನ್ನು ಗೆಲ್ಲಿಸಿದ್ದಾರೆ. ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕೆಲವರು ಪಕ್ಷದಲ್ಲಿ ವಿರೋಧ ಮಾಡುತ್ತಿದ್ದಾರೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಗಮನಿಸುತ್ತಿದ್ದು, ಬಣ ರಾಜಕೀಯದಿಂದ ಪಕ್ಷಕ್ಕೆ ಹಿನ್ನಡೆಯಾಗತ್ತೆ. ಎಲ್ಲವನ್ನೂ ವರಿಷ್ಠರು ಸರಿ ಮಾಡುವ ಭರವಸೆಯಿದೆ ಎಂದರು.

ಬೆಂಗಳೂರು ಅರಮನೆ ಆಸ್ತಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್,  ಈಗಾಗಲೇ ಈ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ. ಟಿ.ಡಿ.ಆರ್ ಕೊಡದೆ ಸುಗ್ರೀವಾಜ್ಞೆ ಮೂಲಕ ಆಸ್ತಿ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ನಾವು ಕಾನೂನು ಮೂಲಕ ಹೋರಾಟ ಮುಂದುವರೆಸುತ್ತೇವೆ ಎಂದರು.

ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮೈಸೂರಿನಲ್ಲಿ 4 ಜನರ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯದುವೀರ್, ಸರ್ಕಾರ ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣ ಮಾಡಬೇಕು. ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಫೈನಾನ್ಸ್ ನೀಡುವ ಸಂಸ್ಥೆಗಳ ಜೊತೆ ಸಭೆ ಮಾಡಿ ಶೀಘ್ರ ಜನರ ಪರ ನಿಲ್ಲಬೇಕು ಎಂದು ಸಲಹೆ ನೀಡಿದರು.

ಮಹಾರಾಣಿ ಕಾಲೇಜು ಕುಸಿತ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ನಾವು ಪಾರಂಪರಿಕ ಕಟ್ಟಡ ಸಂರಕ್ಷಣೆ ಮಾಡಿ ಎಂದು ಈ ಹಿಂದೆಯೇ ಹೇಳಿದ್ದೇವೆ. 15 ವರ್ಷಗಳ ಹಿಂದೆ ಮಹಾರಾಣಿ ಕಾಲೇಜು ಕಟ್ಟಡ ದುರಸ್ತಿ ಕಾರ್ಯ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅದನ್ನು ಬಿಟ್ಟು ಕಟ್ಟಡ ಕುಸಿದಾಗ ಒಡೆಯುವ ನಿರ್ಧಾರ ಒಳ್ಳೆಯದಲ್ಲ ಈಗಾಗಲೇ ಲ್ಯಾಂಡ್ ಸ್ಟೋನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಎಲ್ಲವನ್ನೂ ದುರಸ್ತಿ ಮಾಡಿ ರಿನೋವೇಶನ್ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವು ಕೂಡ ಕುಸಿಯುತ್ತವೆ. ಸರ್ಕಾರ ಇನ್ನಾದರೂ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಮುಂದಾಗಲಿ ಎಂದರು.

ಕುಂಭಮೇಳದ ಕಾಲ್ತುಳಿತ ಪ್ರಕರಣ, ಉತ್ತರ ಪ್ರದೇಶ ಸರ್ಕಾರ ಉತ್ತಮ ವ್ಯವಸ್ಥೆ ಮಾಡಿದೆ. ಆದರೆ ಜನರು ಹೆಚ್ಚಾದ ಹಿನ್ನಲೆ ಕಾಲ್ತುಳಿತ ಸಂಭವಿಸಿದೆ. ಇದರಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆ ನಡೆಯಬಾರದಿತ್ತು. ಈ ಘಟನೆಯಿಂದ  ನೋವಾಗಿದೆ. ಈಗಾಗಲೇ ಜನರ ರಕ್ಷಣೆ ಸರ್ಕಾರ ಹೆಲ್ಪ್ ಲೈನ್ ಮಾಡಿದೆ ಎಂದು ತಿಳಿಸಿದರು.

ಬನ್ನಿಮಂಟಪ ಎಲ್. ಐ.ಸಿ  ಸರ್ಕಲ್ ಗೆ ಅರ್ಜುನನ ಹೆಸರು

ಬನ್ನಿಮಂಟಪ ಎಲ್. ಐ.ಸಿ  ಸರ್ಕಲ್ ಗೆ ಅರ್ಜುನನ ಹೆಸರಿಡುವಂತೆ ಪಾಲಿಕೆಗೆ ಪತ್ರ ಬರೆದಿದ್ದೇನೆ. ಅಲ್ಲಿ ಅರ್ಜುನನ ಪ್ರತಿಮೆ ಕೂಡ ಮಾಡಬೇಕು ಅನ್ನೋದು ನಮ್ಮ ಆಸೆ. ಮುಂದಿನ ದಿನಗಳಲ್ಲಿ ಆ ಎಲ್ಲಾ ಕೆಲಸವನ್ನು ಮಾಡಬೇಕಿದೆ ಎಂದು ಸಂಸದ ಯದುವೀರ್  ಹೇಳಿದರು.

Key words: BJP state president, change, MP Yaduveer, favour , Vijayendra