ಮೈಸೂರು, ಏಪ್ರಿಲ್,8,2024 (www.justkannada.in): ಇವತ್ತಿನ ಕಾಂಗ್ರೆಸ್ ಕಮ್ಯುನಲ್ ಕಾಂಗ್ರೆಸ್ ಆಗಿ ಬದಲಾವಣೆ ಆಗಿದೆ. ಇಂದಿನ ಕಾಂಗ್ರೆಸ್ ಕರೆಪ್ಸನ್ ನ ಇನ್ನೊಂದು ಮುಖವಾಗಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ, ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಎಂದು ಇಡಿ ದೇಶವೇ ಅನುಸರಿಸುತ್ತಿದೆ. ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 28 ಕ್ಷೇತ್ರ ಗೆಲ್ಲುತ್ತೇವೆ. ನೆರೆಯ ರಾಜ್ಯವಾದ ತಮಿಳುನಾಡಲ್ಲೂ ಕೂಡ ಬಿಜೆಪಿ ಹಾಗೂ ಎನ್ ಡಿಎ ಅಲೆಯನ್ಸ್ ಗೆಲ್ಲುತ್ತದೆ ಎಂದರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಮಾಜಿ ಸಚಿವ ಸಿ.ಟಿ ರವಿ, ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ ಮೋದಿ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ ಎಂದರು.
ರಾಷ್ಟ್ರಕ್ಕೆ ಯಾರ ನೇತೃತ್ವ ಬೇಕು, ಪಕ್ಷದ ನೀತಿ, ಕೂಡ ಚರ್ಚೆ ಆಗಬೇಕು. ಅಧಿಕಾರ ಇದ್ದಾಗ ನಡೆಸಿದ ಅದ್ವಾನ, ಹಗರಣಗಳು ಚರ್ಚೆ ಆಗಬೇಕು. ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಅನ್ನೋದನ್ನೂ ಮರೆತಂತೆ ಕಾಣುತ್ತೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ. ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ ಮೋದಿ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅನ್ಯಾಯ ಮಾಡಿದ್ದಾರೆ ಅನ್ನೋದು ನಿಮ್ಮ ದೃಷ್ಟಿಯಾದರೆ ದೃಷ್ಟಿದೋಷ ನಿವಾರಣೆ ಮಾಡಬೇಕು ಎಂದು ಸಿ.ಟಿ ರವಿ ಲೇವಡಿ ಮಾಡಿದರು.
ರಾಷ್ಟ್ರೀಯ ವಿಚಾರಗಳು ಚರ್ಚೆ ಆಗಬೇಕು. ಮೂಲಭೂತ ಸೌಕರ್ಯ, ಆರ್ಥಿಕ ಅಭಿವೃದ್ಧಿ, ಭಾರತದ ಭವಿಷ್ಯದ ಅಭಿವೃದ್ಧಿ ಚರ್ಚೆ ಆಗಬೇಕು. ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಹಗರಣಗಳಿಗೆ ಕಾರಣಿಭೂತ ರ್ಯಾರು? ಮನಮೋಹನ್ ಸಿಂಗ್ ಇದ್ದಾಗ ಕೊಟ್ಟ ಅನುದಾನ, ಮೋದಿಯವರು ಕೊಟ್ಟ ಅನುದಾನದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದ. ನೀವು ನೀತಿ ಬಗ್ಗೆ ಅಲ್ಲ ಜಾತಿ ಬಗ್ಗೆ ಚರ್ಚೆ ನಡೆಸಲಿಕ್ಕೆ ಮುಂದಾಗಿದ್ದಿರಿ. ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಯನ್ನ ಯಾವ ಮಾನದಲ್ಲಿ ಅಳೆಯಿತ್ತೀರಿ. ದೇವರಾಜ ಅರಸು ಸಾಮಾಜಿಕ ನ್ಯಾಯವನ್ನ ಅಪಮಾನಿಸುವ ರೀತಿ ಮಾತನಾಡುತ್ತೀರಾ. ಅಧಿಕಾರಕ್ಕಾಗಿ ಬಳಸಿಕೊಂಡ ಅಹಿಂದ ಎಲ್ಲಿ ಹೋಯ್ತು ಸಿದ್ದರಾಮಯ್ಯರೇ..? ಎಂದು ಹರಿಹಾಯ್ದರು.
ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಸಿಟಿ ರವಿ, ಒಕ್ಕಲಿಗರು ನೀತಿ ಹಿಂದೆ ಹೋದವರು, ನೀತಿ ಬೆಂಬಲಿಸಿದವರು. ಯಾರನ್ನೋ ಕರೆದುಕೊಂಡು ಬಂದು ಒಕ್ಕಲಿಗೆ ಎಂದರೆ ಒಕ್ಕಲಿಗರು ಸಂಸ್ಕೃತಿ ಇಲ್ಲದವರನ್ನ ಒಪ್ಪಿಕೊಳ್ಳಲ್ಲ. ಕಾರ್ಪೋರೇಷನ್ ಸೋತವರು, ವಿಧಾನಪರಿಷತ್ ನಲ್ಲಿ ಸೋತವರನ್ನ ಪಾರ್ಲಿಮೆಂಟ್ ಗೆ ನಿಲ್ಲಿಸುವ ದುಸ್ಥಿತಿ ಬಂದಿದೆ. ಲೂಸ್ ಟಾಕ್ ಲಕ್ಷ್ಮಣ್. ಇದು ಕಾಂಗ್ರೆಸ್ ನವರೇ ಕೊಟ್ಟಿರುವ ಬಿರುದು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಚುನಾವಣೆಗೂ ಮುಂಚೆ ಸೋಲು ಒಪ್ಪಿಕೊಂಡಿದ್ದಾರೆ. ಕಾರ್ಪೋರೇಷನ್, ವಿಧಾನ ಪರಿಷತ್ತು ಹೀಗೆ ನಾಲ್ಕು ಚುನಾವಣೆಯಲ್ಲಿ ಸೋತವರನ್ನು ಅಭ್ಯರ್ಥಿ ಮಾಡಿದ್ದೀರಿ. ನಿಮಗೆ ಯಾರೂ ಅಭ್ಯರ್ಥಿಯೇ ಇರಲಿಲ್ಲ. ಹೀಗಾಗಿ ಲಕ್ಷ್ಮಣ್ ಅವರನ್ನು ಕರೆತಂದು ನಿಲ್ಲಿಸಿದ್ದೀರಿ. ಅವರನ್ನು ಲೂಸ್ ಟಾಕ್ ಲಕ್ಷ್ಮಣ್ ಅಂತ ಕಾಂಗ್ರೆಸ್ ನವರೇ ಕರೆಯುತ್ತಾರೆ. ಸಂಸ್ಕಾರ ಇಲ್ಲದೇ ಇರುವವರನ್ನು ಕರೆತಂದು ಒಕ್ಕಲಿಗ ಅಂದ್ರೆ ಸಮುದಾಯ ಒಪ್ಪಲ್ಲ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಬಿಜೆಪಿ ಮುಖಂಡರಾದ ಸಂದೇಶ್ ಸ್ವಾಮಿ, ಮೋಹನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
Key words: Congress, communal, CT Ravi