ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರು ಸಕ್ರಿಯ: ಬಿಎಸ್​ವೈ, ಸಿ.ಟಿ .ರವಿ ಹಿಂಬಾಲಕರ ಸಂಖ್ಯೆ ಹೆಚ್ಚಳ, ಡಿಜಿಟಲ್ ಆಡಳಿತಕ್ಕೆ ಆದ್ಯತೆ

ಬೆಂಗಳೂರು:ಸೆ-1: ಇದು ಸಾಮಾಜಿಕ ಜಾಲತಾಣಗಳ ಜಮಾನ. ಪ್ರತಿಭಟನೆ, ಮನವಿ ಸಲ್ಲಿಕೆಗಳಿಂದ ಆಗದ ಕೆಲಸಗಳನ್ನು ಕ್ಷಣಾರ್ಧದಲ್ಲೇ ಮಾಡಿಸುವಷ್ಟು ಪ್ರಭಾವಶಾಲಿ ಈ ಜಾಲತಾಣ. ಇದನ್ನು ಅರಿತ ರಾಜ್ಯ ಸರ್ಕಾರದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಕ್ಷಣ ಕ್ಷಣ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಫಾಲೋವರ್ಸ್​ಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಡಿಜಿಟಲ್ ಆಡಳಿತ ವ್ಯವಸ್ಥೆಗೆ ಟ್ವಿಟರ್ ಅನ್ನು ಪ್ರಮುಖ ಮಾಧ್ಯಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಕರ್ನಾಟಕ ಸರ್ಕಾರ ಬಳಸಿಕೊಳ್ಳುತ್ತಿದೆ. ಪ್ರಸ್ತುತ ಮುಖ್ಯಮಂತ್ರಿಯವರ ಕಚೇರಿ ಟ್ವಿಟರ್​ನಲ್ಲಿ ಸಕ್ರಿಯವಾಗಿದ್ದು, ಕರ್ನಾಟಕದ ಸಾಧನೆಗಳನ್ನು ಬಿಂಬಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರ ವೈಯಕ್ತಿಕ ಖಾತೆ ಮತ್ತು ಅವರ ಖಾಸಗಿ ಕಚೇರಿ ಖಾತೆಯೂ ಚಾಲ್ತಿಯಲ್ಲಿದೆ. ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವಿಟರ್ ಬಳಕೆಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಅವರ ಸಂದೇಶಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪೋಸ್ಟ್ ಆಗುತ್ತಿವೆ. ಸಚಿವ ಸಂಪುಟದ 18 ಸದಸ್ಯರಲ್ಲಿ 14 ಜನರು ಟ್ವಿಟರ್ ಖಾತೆ ಹೊಂದಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಟ್ವಿಟರ್ ಖಾತೆ ತೆರೆದು ಜನರಿಗೆ ಹತ್ತಿರವಾಗಿದ್ದಾರೆ.

ಫಾಲೋವರ್ಸ್​ಗಳ ಏರಿಕೆ: ಯಡಿಯೂರಪ್ಪ ಸಂಪುಟದ ಸಚಿವರು ಟ್ವಿಟರ್ ಖಾತೆಯಲ್ಲಿ ಸಕ್ರಿಯವಾಗುತ್ತಿದ್ದಂತೆ ಅವರ ಫಾಲೋವರ್ಸ್​ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸಚಿವರಾಗುವುದಕ್ಕೂ ಮುನ್ನ ಚಾಲ್ತಿಯಲ್ಲಿಲ್ಲದ ಟ್ವಿಟರ್ ಖಾತೆಗಳಲ್ಲಿ ಪೋಸ್ಟ್​ಗಳು ಅಪ್​ಲೋಡ್ ಆಗುತ್ತಿವೆ. ಇದರ ಪರಿಣಾಮ ಫಾಲೋವರ್ಸ್​ಗಳು ಹೆಚ್ಚಾಗುತ್ತಿದ್ದಾರೆ. ಯಡಿಯೂರಪ್ಪ 4.40 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದ್ದರೆ, ಸಿ.ಟಿ. ರವಿ ಅವರನ್ನು 1.64 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಉಳಿದವರು ಲಕ್ಷಕ್ಕಿಂತ ಕೆಳಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ 68.4 ಸಾವಿರ ಫಾಲೋವರ್ಸ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ (58 ಸಾವಿರ), ಕಂದಾಯ ಸಚಿವ ಆರ್.ಅಶೋಕ್(26.4 ಸಾವಿರ), ಡಿಸಿಎಂ ಡಾ.ಅಶ್ವತ್ಥನಾರಾಯಣ (19.1 ಸಾವಿರ), ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (14.4 ಸಾವಿರ), ಆರೋಗ್ಯ ಸಚಿವ ಶ್ರೀರಾಮುಲು (10.7 ಸಾವಿರ) ನಂತರದ ಸ್ಥಾನದಲ್ಲಿದ್ದಾರೆ.

ಖಾತೆ ತೆರೆಯದ ನಾಲ್ವರು

ಬಿ.ಎಸ್.ಯಡಿಯೂರಪ್ಪ ಸಂಪುಟದ ಡಿಸಿಎಂ ಲಕ್ಷ್ಮಣ ಸವದಿ, ಜೆ.ಪಿ.ಮಾಧುಸ್ವಾಮಿ, ಎಚ್.ನಾಗೇಶ್, ಪ್ರಭು ಚವ್ಹಾಣ್ ಈವರೆಗೆ ಟ್ವಿಟರ್ ಖಾತೆ ಹೊಂದಿಲ್ಲ. ಇವರು ಸಮರ್ಪಕ ಆಡಳಿತ ಮತ್ತು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಲು ನೆರವಾಗುತ್ತಿರುವ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದಿದ್ದಾರೆ. ಪ್ರಭು ಚವ್ಹಾಣ್ ಫೇಸ್​ಬುಕ್​ನಲ್ಲಿ ಇತ್ತೀಚೆಗೆ ಸಕ್ರಿಯರಾಗಿದ್ದಾರೆ.

ಪ್ರಭಾವಿ ಮಾಧ್ಯಮ ಟ್ವಿಟರ್

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲವೀಗ ಪ್ರಭಾವೀ ಮಾಧ್ಯಮವಾಗಿ ಬೆಳೆಯುತ್ತಿದೆ. ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಜ್ಯದ ಮಂತ್ರಿಗಳು, ಅಧಿಕಾರಿಗಳನ್ನು ಸುಲಭವಾಗಿ ತಲುಪುವ ಸಾಧನವಾಗಿ ಬೆಳೆದಿದೆ. ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಮತ್ತು ಸುರೇಶ್ ಪ್ರಭು ಟ್ವಿಟರ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಟ್ವಿಟರ್ ಮೂಲಕ ನೀಡಿದ ದೂರುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಹೆಚ್ಚು ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯ ಕೂಡ ನಾಗರಿಕರ ದೂರಿಗೆ ಸ್ಪಂದಿಸಿ ಕಾರ್ಯಪ್ರವೃತ್ತವಾದ ಸಾಕಷ್ಟು ಉದಾಹರಣೆಗಳಿವೆ.

ಫೇಸ್​ಬುಕ್​ನಲ್ಲೂ ಸಕ್ರಿಯ

ಫೇಸ್​ಬುಕ್​ನಲ್ಲೂ ಸಕ್ರಿಯರಾಗಿರುವ ಬಿಎಸ್​ವೈ, ಜಗದೀಶ್ ಶೆಟ್ಟರ್ ಮತ್ತು ಶ್ರೀರಾಮುಲು ಅವರ ಪೇಜ್​ಗಳನ್ನು ಲೈಕ್ ಮಾಡಿದವರ ಸಂಖ್ಯೆ ಲಕ್ಷ ದಾಟಿದೆ. ಆರ್.ಅಶೋಕ್ ಲಕ್ಷ ಸನಿಹದಲ್ಲಿದ್ದರೆ, ಬಸವರಾಜ್ ಬೊಮ್ಮಾಯಿ ಪೇಜ್ 87 ಸಾವಿರ, ಸಿ.ಟಿ.ರವಿ ಪೇಜ್ 67 ಸಾವಿರ ಮತ್ತು ಶಶಿಕಲಾ ಜೊಲ್ಲೆ ಪೇಜ್ 62 ಸಾವಿರ ಲೈಕ್ ಪಡೆದಿದೆ. ಬಿಎಸ್​ವೈ, ಸಿ.ಟಿ.ರವಿ, ಶ್ರೀರಾಮುಲು ಅವರ ಖಾತೆಗಳಿಗೆ ಮಾತ್ರ ಟ್ವಿಟರ್ ಮತ್ತು ಫೇಸ್​ಬುಕ್​ನಿಂದ ದೃಢೀಕರಣ ಸಿಕ್ಕಿದ್ದರೆ, ಡಾ.ಅಶ್ವತ್ಥನಾರಾಯಣ ಅವರ ಖಾತೆಗೆ ಟ್ವಿಟರ್​ನಿಂದ ಸಿಕ್ಕಿದೆ.
ಕೃಪೆ:ವಿಜಯವಾಣಿ

ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರು ಸಕ್ರಿಯ: ಬಿಎಸ್​ವೈ, ಸಿ.ಟಿ .ರವಿ ಹಿಂಬಾಲಕರ ಸಂಖ್ಯೆ ಹೆಚ್ಚಳ, ಡಿಜಿಟಲ್ ಆಡಳಿತಕ್ಕೆ ಆದ್ಯತೆ
bjp-cm-b-s-yeddiyurappa-social-media-twitter-facebook-bjp-ministers