Thursday, August 13, 2026

BDA Apartments

Home Front Page ಬಿಜೆಪಿಗೆ ಎರಡೂ ಪಕ್ಷಗಳು ಸಮಾನ ಶತ್ರುಗಳು: ಯಾರೊಂದಿಗೂ ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲ- ಸಚಿವ ಅಶ್ವಥ್...

ಬಿಜೆಪಿಗೆ ಎರಡೂ ಪಕ್ಷಗಳು ಸಮಾನ ಶತ್ರುಗಳು: ಯಾರೊಂದಿಗೂ ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲ- ಸಚಿವ ಅಶ್ವಥ್ ನಾರಾಯಣ್.

ಮೈಸೂರು,ಜನವರಿ,28,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬಿಜೆಪಿಗೆ ಸಮಾನ ಶತ್ರುಗಳು. ಚುನಾವಣೆ ವಿಚಾರದಲ್ಲಿ ಬಿಜೆಪಿ ಯಾರೊಂದಿಗೂ, ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ  ಮೈಸೂರಿನಲ್ಲಿ ತಿರುಗೇಟು ನೀಡಿದ ಸಚಿವ ಅಶ್ವಥ್ ನಾರಾಯಣ್, ಬಿಜೆಪಿಗೆ ಕಾಂಗ್ರೆಸ್ ಜೆಡಿಎಸ್ ಎರಡೂ ಸಮಾನ ಶತ್ರುಗಳು. ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವುದೇ ಬಿಜೆಪಿಯ ಗುರಿ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲದ ಕಾರಣ‌ ಮೋದಿ, ಅಮಿತ್ ಶಾ ರನ್ನು ಪದೇ ಪದೇ ಕರೆ ತರುತ್ತಿದ್ದಾರೆಂಬ ಕಾಂಗ್ರೆಸ್  ಟೀಕೆಗೆ ಟಾಂಗ್ ನೀಡಿದ ಸಚಿವ ಅಶ್ವಥ್ ನಾರಾಯಣ್, ನಮಗೆ ಮೋದಿ ಅಮಿತ್ ಶಾ ರಂತಹವರು ಇರುವುದರಿಂದಲೇ ಕರೆ ತರುತ್ತಿದ್ದೇವೆ. ಮೋದಿ, ಅಮಿತ್ ಶಾರನ್ನು ಸರಿಗಟ್ಟುವ ಸಮರ್ಥ ನಾಯಕರು ಕಾಂಗ್ರೆಸ್ ನಲ್ಲಿಲ್ಲ. ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಗೆ ಮಾಡಲು ಬೇರೆ ಕೆಲಸವಿಲ್ಲ. ಇಬ್ಬರೂ ಪುರುಸೊತ್ತಾಗಿ ಇದ್ದಾರೆ. ಹಾಗಾಗಿ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ಧಾರೆ ಎಂದು ಕಿಡಿಕಾರಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವತ್ ನಾರಾಯಣ್, ವಿವಿಯಲ್ಲಿ ನಡೆದಿರುವ ಅಕ್ರಮದಲ್ಲಿ ನನ್ನದೇನು ಪಾತ್ರವಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್ ಅಶೋಕ್ ನೇಮಕಗೊಂಡ ಬೆನ್ನಲ್ಲೇ ಗೋ ಬ್ಯಾಕ್ ಅಶೋಕ್ ಪೋಸ್ಟರ್ ಅಭಿಯಾನ ವಿಚಾರ ಕುರಿತು ಮಾತನಾಡಿದ ಸಚಿವ ಅಶ‍್ವಥ್ ನಾರಾಯಣ್, ಇದು ನಮ್ಮ ಪಕ್ಷದವರ ಕೆಲಸವಲ್ಲ. ಇದು ವಿರೋಧ ಪಕ್ಷದವರ ಕೃತ್ಯವಾಗಿದೆ ಎನ್ನುವ ಮೂಲಕ ಗೋ ಬ್ಯಾಕ್ ಅಭಿಯಾನಕ್ಕೆ ವಿರೋಧ ಪಕ್ಷಗಳು ಕಾರಣ ಎಂದು ಬೊಟ್ಟು ಮಾಡಿದರು.

Key words: congress-jds- equal -enemies – BJP-Minister- Ashwath Narayan.