6ನೇ ಅಖಿಲ ಭಾರತ ‘ಹುಲಿ ಗಣತಿ’ ಆರಂಭ

ಮೈಸೂರು,ಜನವರಿ,6,2026 (www.justkannada.in):  ಜನವರಿ 5 ರಿಂದ ಅಂದರೆ ನಿನ್ನೆಯಿಂದ 6ನೇ ಅಖಿಲ ಭಾರತ ಹುಲಿ ಗಣತಿ ಆರ೦ಭವಾಗಿದ್ದು, ಜನವರಿಗೆ 12ರವರಗೆ 8ದಿನಗಳ ಕಾಲ ಹುಲಿ ಗಣತಿ ನಡೆಯಲಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಇಲಾಖೆ ಸಿಬ್ಬಂದಿ ಸೇರಿದಂತೆ ಕೊಡಗಿನ ಅರಣ್ಯ ಕಾಲೇಜಿನ 30 ವಿದ್ಯಾರ್ಥಿಗಳು ಹುಲಿ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಕಚೇರಿ ಎಸಿಎಫ್  ಲಕ್ಷ್ಮಿಕಾಂತ್ ತಿಳಿಸಿದರು.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಎಸಿಎಫ್  ಲಕ್ಷ್ಮಿಕಾಂತ್ , ನಾಗರಹೊಳೆ ಅಭಯಾರಣ್ಯದ 8 ವಲಯದ 91 ಗಸ್ತು ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯದಲ್ಲಿ ಇಲಾಖೆ ಮೂರು ಹಂತದಲ್ಲಿ ಹುಲಿ ಗಣತಿ ಕಾರ್ಯ ನಡೆಸಲಿದೆ. ಜನವರಿ 5ರಿಂದ ರಂದು ಮೊದಲ ದಿನದಲ್ಲಿ ಮಾಂಸಹಾರಿ ಮತ್ತು ದೊಡ್ಡ ಸಸ್ಯಹಾರಿ ಆನೆ ಮತ್ತು ಕಾಡೆಮ್ಮೆ(ಕಾಟಿ) ಓಡಾಟಗಳ ಕುರಿತಾದ ಗುರುತುಗಳು ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು ಮರಕ್ಕೆ ಪರಿಚಿದ ಗುರುತು, ಇದಲ್ಲದೆ ಇತರೆ ವನ್ಯಪ್ರಾಣಿಗಳ ಮಲ ವೈಜಾನಿಕವಾಗಿ ಕಿಟ್‌ ನಲ್ಲಿ ಸಂಗ್ರಹಿಸಿ ದಾಖಲಿಸಲಾಗುವುದು. ಪ್ರತಿ ದಿನ 5 ಕಿ.ಮೀ ಕಾಲ್ನಡಿಗೆಯಲ್ಲಿ ಇಲಾಖೆ ಗುರುತಿಸಿದ ದಾರಿಯಲ್ಲಿ ತೆರಳಿ ಗಣತಿ ಕಾರ್ಯ ನಡೆಯಲಿದೆ ಎಂದರು.

ಅರಣ್ಯದಲ್ಲಿ ಈಗಾಗಲೇ ಹುಲಿ ಚಲನವಲನ ದಾಖಲಿಸಲು 496 ಕ್ಯಾಮೆರಾ ಅಳವಡಿಸಿದ್ದು, ಕ್ಯಾಮೆರಾದಲ್ಲಿ ದಾಖಲಾಗುವ ಪ್ರತಿಯೊಂದು  ಹುಲಿಯನ್ನು ಪ್ರತ್ಯೇಕವಾಗಿ ದಾಖಲಿಸಿಲಾಗುವುದು. ಈ ಪ್ರಕ್ರಿಯೆ ಅರಣ್ಯದಲ್ಲಿ 25 ದಿನಗಳು ನಿರಂತರವಾಗಿ ನಡೆಯಲಿದೆ ಎಂದರು.

ರಾಷ್ಟ್ರೀಯ ಹುಲಿ ಗಣತಿ ಕಾರ್ಯ ಪ್ರತಿ 5 ವರ್ಷಕ್ಕೆ ಒಮ್ಮೆ ರಾಷ್ಟ್ರದಾದ್ಯಂತ ಅಭಯಾರಣ್ಯದಲ್ಲಿ ನಡೆಯಲ್ಲಿದ್ದು, ಅದೇ ರೀತಿ ರಾಜ್ಯದ ನಾಗರಹೊಳೆ, ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಬಿ.ಆರ್. ಹಿಲ್ಸ್ ಗಳಲ್ಲಿಯೂ ನಡೆದಿದೆ. ಅಖಿಲ ಭಾರತ ಹುಲಿ ಗಣತಿಯಂತೆ ರಾಜ್ಯದಲ್ಲಿ 2021-22 ರಲ್ಲಿ 140 ಹುಲಿ ಕಂಡು ಬಂದಿದ್ದು, ಪ್ರತಿ ಚದರ ಕಿ.ಮಿ. ನಲ್ಲಿ 11 ಹುಲಿಗಳಿಗೆ ಆಶ್ರಯ ಸಿಕ್ಕಿತ್ತು ಎಂದರು.

ಹುಲಿ ಗಣತಿಯನ್ನು ಈ ಹಿಂದೆ ಡೇಟಾ ಶೀಟ್‌ನಲ್ಲಿ ಬಳಸಿ ದಾಖಲಿಸಲಾಗಿತ್ತು. ಈ ಸಾಲಿನಲ್ಲಿ ಎಂ-ಸ್ಟೆಪ್ಸ್ (M-STrIPES)ಎನ್ನುವ ಇಕಾಲಾಜಿಕಲ್ ಆ್ಯಪ್ ಬಳಸಲಾಗುತ್ತಿದ್ದು, ಗಣತಿ ಕಾರ್ಯದಲ್ಲಿ ಹೆಚ್ಚಿನ ಮಟ್ಟದ ನಿಖರತೆ ಸಿಗಲಿದೆ. ಗಣತಿ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಆ್ಯಪ್ ಬಳಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ದಾಖಲಾದ ಮಾಹಿತಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Key words: 6th All India Tiger, Census,  begins, Nagarahole