ಸಹಕಾರ ಸಂಸ್ಥೆಗಳಿಂದ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 53 ಕೋಟಿ ರೂ. ದೇಣಿಗೆ- ಅಭಿನಂದನೆ ಸಲ್ಲಿಸಿದ ಸಿಎಂ ಬಿಎಸ್  ಯಡಿಯೂರಪ್ಪ…

ಬೆಂಗಳೂರು,ಸೆಪ್ಟಂಬರ್,16,2020(www.justkannada.in):  ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರೂ. 53 ಕೋಟಿಗಳ ದೇಣಿಗೆಯನ್ನು ನೀಡುವ ಮೂಲಕ ಸಹಕಾರ ಸಂಸ್ಥೆಗಳು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಪ್ರಕೃತಿ ವಿಕೋಪ ಹಾಗೂ ಕೋವಿಡ್-19 ಸೋಂಕಿನ ಹಾವಳಿಯಿಂದ ಕಂಗೆಟ್ಟಿರುವ ಜನತೆಗೆ ರಾಜ್ಯದ ಸಹಕಾರ ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿರುವುದು ಅಭಿನಂದನೀಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ.jk-logo-justkannada-logo

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಹಕಾರ ಇಲಾಖೆಯ ವತಿಯಿಂದ ಆಯೋಜಿಸಿರುವ ಕೋವಿಡ್-19ರ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ “ಆರ್ಥಿಕ ಸ್ಪಂದನಾ” ಕಾರ್ಯಕ್ರಮವನ್ನು ಸಿಎಂ ಬಿಎಸ್ ಯಡಿಯೂರಪ್ಪ  ಉದ್ಘಾಟಿಸಿದರು.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್  ಯಡಿಯೂರಪ್ಪ, ಕೋವಿಡ್-19ರ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಇಂದು ವಿತರಣೆ ಮಾಡಿದ್ದೇನೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ತತ್ವ ಜಾಗತಿಕ, ಆರ್ಥಿಕ ವ್ಯವಸ್ಥೆಯಲ್ಲಿ ವಹಿಸಿರುವ ಪಾತ್ರ ಅನನ್ಯವಾದದ್ದು. ಬೃಹತ್ತಾದ ಮತ್ತು ಮಹತ್ವದ ಸಹಕಾರ ಚಳವಳಿಯನ್ನು ರೂಪಿಸಿದ ರಾಷ್ಟ್ರ ನಮ್ಮದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯದಂತೆ ಭಾರತ ದೇಶದಲ್ಲಿ ಸಹಕಾರ ಕ್ಷೇತ್ರವು ಹೆಮ್ಮರವಾಗಿ ಬೆಳೆದಿದೆ. ಸಹಕಾರ ಚಳವಳಿ ಆರ್ಥಿಕವಾಗಿ ಹಿಂದುಳಿದವರ, ಕೆಳವರ್ಗದ ಜನರ ಮತ್ತು ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಗುಣಗಾನ ಮಾಡಿದರು.

ಹಾಗೆಯೇ ಪ್ರಕೃತಿ ವಿಕೋಪ ಹಾಗೂ ಕೋವಿಡ್-19 ಸೋಂಕಿನ ಹಾವಳಿಯಿಂದ ಕಂಗೆಟ್ಟಿರುವ ಜನತೆಗೆ  ರಾಜ್ಯದ ಸಹಕಾರ ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿರುವುದು ಅಭಿನಂದನೀಯ.  ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರೂ. 53 ಕೋಟಿಗಳ ದೇಣಿಗೆಯನ್ನು ನೀಡುವ ಮೂಲಕ ಸಹಕಾರ ಸಂಸ್ಥೆಗಳು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ ಎಂದು ಸಿಎಂ ನುಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಇಡೀ ದೇಶದಲ್ಲಿಯೇ ಮೊದಲು ಮುಂದಾದ ರಾಜ್ಯ ಕರ್ನಾಟಕ. ಲಾಕ್‍ ಡೌನ್ ಪರಿಣಾಮವಾಗಿ, ಎಲ್ಲ ವರ್ಗದ ಜನತೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ 2,272 ಕೋಟಿ ರೂ.ಗಳ ಮೂರು ಹಂತದ ಪ್ಯಾಕೇಜನ್ನು ಘೋಷಿಸಿತು.  42,524 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ತಲಾ ರೂ. 3,000/- ಗಳಂತೆ ಒಟ್ಟು 12.75 ಕೋಟಿ ರೂ.ಗಳನ್ನು ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗಿದೆ.  ಕೃಷಿ ಹಾಗೂ ಕೃಷಿಯೇತರ ವಲಯಕ್ಕೆ ಒಟ್ಟಾರೆಯಾಗಿ 39,300 ಕೋಟಿ ರೂ.ಗಳ ಸಾಲ ಸೌಲಭ್ಯವನ್ನು ರಾಜ್ಯದ ಸಹಕಾರ ಸಂಸ್ಥೆಗಳ ಮೂಲಕ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದರು.

ಪ್ರಧಾನ ಮಂತ್ರಿಗಳ “ಆತ್ಮನಿರ್ಭರ ಭಾರತ” ಪ್ಯಾಕೇಜ್ ಅಡಿಯಲ್ಲಿ ಸಹಕಾರ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯೋಜನೆ ಘೋಷಣೆ ಮಾಡಲಾಗಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು 4,525 ಕೋಟಿ ರೂ. ಮೊತ್ತವನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮುಗಳ ನಿರ್ಮಾಣ, ಕೊಯ್ಲು ನಂತರದ ಸಂಸ್ಕರಣೆ, ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ವ್ಯವಸ್ಥೆ ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಉಪಯೋಗಿ ಸೇವಾ ಕೇಂದ್ರಗಳಾಗಿ” ಪರಿವರ್ತನೆಗೊಳ್ಳಲಿವೆ.53-crore-chief-ministers-covid-relief-fund-cooperatives-cm-bs-yeddyurappa

ಈ ಯೋಜನೆಯಡಿ 1,549 ಸಹಕಾರ ಸಂಘಗಳು ಲಾಭ ಪಡೆಯಲಿದ್ದು, ಇದುವರೆಗೆ 215 ಪ್ಯಾಕ್ಸ್‍ಗಳನ್ನು ಸೇರ್ಪಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ತಮ್ಮ ನೇರ ಸಂವಾದ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಉಗನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡರೊಂದಿಗೆ ನೇರ ಸಂವಾದ ನಡೆಸಿ ಸಂಘದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.  ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ, ರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು “Special Liquidity Facility” ಅಡಿಯಲ್ಲಿ ರೂ. 1,700 ಕೋಟಿಗಳನ್ನು ನಬಾರ್ಡ್ ಮೂಲಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಬೆಳೆ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಡಿ 2020-21ನೇ ಸಾಲಿನಲ್ಲಿ ಇಲ್ಲಿಯವರೆಗೆ 11.88 ಲಕ್ಷ ರೈತರಿಗೆ ರೂ. 7,777.41 ಕೋಟಿಗಳ ಸಾಲ ವಿತರಿಸಿದ್ದು, ಬಡ್ಡಿ ಸಹಾಯಧನಕ್ಕಾಗಿ  ರೂ. 992.50 ಕೋಟಿಗಳ ಆಯವ್ಯಯ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಸರ್ಕಾರದಿಂದ   ರೂ. 496.24 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಾಲಮನ್ನಾ ಯೋಜನೆ-2018 ಯೋಜನೆಯಡಿಯಲ್ಲಿ ರಾಜ್ಯದ 16.41 ಲಕ್ಷ ರೈತರಿಗೆ ರೂ. 7,637.32 ಕೋಟಿಗಳು ಬಿಡುಗಡೆಯಾಗಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ರೂ. 5,092.32 ಕೋಟಿ ಬಿಡುಗಡೆ ಮಾಡಲಾಗಿದೆ. ಹೈನುಗಾರಿಕೆ ಮತ್ತು ಮೀನುಗಾರಿಕೆ ಉದ್ದೇಶಕ್ಕೆ ರೂ. 2 ಲಕ್ಷಗಳ ವರೆಗಿನ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯಡಿ ಈವರೆಗೆ ರೂ. 60.30 ಕೋಟಿಗಳ ಸಾಲ ವಿತರಿಸಲಾಗಿದೆ.

ಸಹಕಾರ ಕ್ಷೇತ್ರದಲ್ಲಿ 2.50 ಲಕ್ಷ  ಸ್ತ್ರೀಶಕ್ತಿ / ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದ್ದು, ಇಲ್ಲಿಯವರೆಗೆ 71,657 ಗುಂಪುಗಳಿಗೆ ರೂ. 1,421.83 ಕೋಟಿಗಳ ಸಾಲ ವಿತರಿಸಲಾಗಿದೆ. ‘ಬಡವರ ಬಂಧು’ ಯೋಜನೆಯಡಿಯಲ್ಲಿ ನಗರ ಪ್ರದೇಶಗಳಲ್ಲಿನ ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕಿರುಸಾಲವನ್ನು ಒದಗಿಸಲಾಗುತ್ತಿದ್ದು, ಒಟ್ಟು 20,760 ಫಲಾನುಭವಿಗಳಿಗೆ ರೂ. 14.43 ಕೋಟಿಗಳ ಸಾಲ ವಿತರಿಸಲಾಗಿದೆ.  ಇಂತಹ ಹತ್ತು ಹಲವು ಕಾರ್ಯಕ್ರಮಗಳ ಮೂಲಕ, ರಾಜ್ಯದ ಸಹಕಾರ ಸಂಸ್ಥೆಗಳು ಈ ವರ್ಷ ಸುಮಾರು ರೂ. 39,300 ಕೋಟಿ ರೂಪಾಯಿಗಳ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯದ ಜನತೆಯ ಜೀವನವನ್ನು ಹಸನುಗೊಳಿಸುವ ಸಹಕಾರ ಕ್ಷೇತ್ರ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹಾರೈಸಿದರು.

Key words: 53 crore – Chief Minister’s- Covid Relief Fund –cooperatives-CM BS Yeddyurappa.