ರೈತ ವಿದ್ಯಾನಿಧಿ ಯೋಜನೆ ಮೂಲಕ 11 ಲಕ್ಷ ರೈತರ ಮಕ್ಕಳಿಗೆ 480 ಕೋಟಿ ರೂ. ವಿದ್ಯಾರ್ಥಿ ವೇತನ- ಸಿಎಂ ಬೊಮ್ಮಾಯಿ.

ಧಾರವಾಡ,ಜನವರಿ,31,2023(www.justkannada.in): ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ಮೂಲಕ 11 ಲಕ್ಷ ರೈತರ ಮಕ್ಕಳಿಗೆ 480 ಕೋಟಿ ಕೊಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ರಾಜ್ಯದಲ್ಲಿ ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಈ ಬಗ್ಗೆ ಪರಿಣಿತರ ಜೊತೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ಕೂಡ ನೀಡಲಾಗುವುದು. ರೈತರ ಆದಾಯ ಹೇಗೆ ದ್ವಿಗುಣ ಮಾಡಬೇಕು ಎಲ್ಲವನ್ನು ಚರ್ಚಿಸಿದ್ದೇವೆ ಎಂದರು.

ರೈತ ಶಕ್ತಿ ಯೋಜನೆ ಜಾರಿ ಮಾಡಲಾಗುತ್ತಿದ್ದು, ಕೃಷಿ ಯಂತ್ರೋಪಕರಣ ಬಳಕೆಗೆ ಪ್ರೋತ್ಸಾಹ ಹಾಗೂ ಡಿಸೇಲ್‌ ಗೆ ಸಬ್ಸಿಡಿ ನೀಡುವ ಯೋಜನೆಯಾಗಿದೆ.  ಪ್ರತಿ ಎಕರೆಗೆ 250ರೂಪಾಯಿಯಂತೆ ಗರಿಷ್ಠ 5 ಎಕರೆಗೆ 1250ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. 51.80 ಲಕ್ಷ ರೈತರಿಗೆ 383.15 ಕೋಟಿ ರೂ. ಡಿಸೇಲ್ ಸಬ್ಸಿಡಿ ಈ ಯೋಜನೆ ಮೂಲಕ ನೀಡಲಾಗುತ್ತಿದೆ.

ದೊಡ್ಡ ಪ್ರಮಾಣದಲ್ಲಿ ಬೆಳೆ ತೆಗೆದರೂ ರೈತರ ಬದುಕು ಸುಧಾರಿಸಿಲ್ಲ. ಅದಕ್ಕಾಗಿ ರೈತರ ಮಕ್ಕಳು ವಿದ್ಯಾವಂತರಾಗಬೇಕೆಂದು ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ಮೂಲಕ 11 ಲಕ್ಷ ರೈತರ ಮಕ್ಕಳಿಗೆ 480 ಕೋಟಿ ಕೊಟ್ಟಿದ್ದೇವೆ. ದಾಖಲಾತಿ ಮಾಡಿಸುವ ಎಲ್ಲ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತೇವೆ. ನಾವು ಯಾರಿಂದಲೂ ಅರ್ಜಿ ಪಡೆದಿಲ್ಲ. ನಾವೇ ದಾಖಲೆ ಪಡೆದು ರೈತ ಶಕ್ತಿ ಮತ್ತು ರೈತ ವಿದ್ಯಾನಿಧಿ ಹಣ ಕೊಟ್ಟಿದ್ದೇವೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: 480 crores – 11 lakh- farmers-children -Raitha Vidyanidhi Yojana- CM Bommai