ಮುಂದುವರಿದ ಒತ್ತುವರಿ ತೆರವು:  30 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಸ್ವತ್ತು ವಶ

ಬೆಂಗಳೂರು,ಜನವರಿ,6,2022(www.justkannada.in):  ಪ್ರತಿಷ್ಠಿತ ಆರ್.ಎಂ.ವಿ 2 ನೇ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳನ್ನು ತೆರವುಗೊಳಿಸಿ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ನಾಗಶೆಟ್ಟಿಹಳ್ಳಿಯ ಆರ್.ಎಂ.ವಿ 2 ನೇ ಹಂತದಲ್ಲಿರುವ ಸರ್ವೆ ನಂಬರ್ 71/3 ರಲ್ಲಿನ 32 ಗುಂಟೆ ಜಾಗ ಬಿಡಿಎಗೆ ಸೇರಿತ್ತು. ಆದರೆ, ಈ ಜಾಗದಲ್ಲಿ ಎನ್ ಟಿ ಐ ಸೊಸೈಟಿಯವರು ಅನಧಿಕೃತವಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿದ್ದರು.

ಸದರಿ ಜಾಗವನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ತೆರವುಗೊಳಿಸಿರಲಿಲ್ಲ. ಬಿಡಿಎ ಕಾರ್ಯಪಾಲಕ ಅಭಿಯಂತರ ಕುಮಾರ್, ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಬಿಡಿಎ ಸಿಬ್ಬಂದಿ ಶೆಡ್ ಗಳನ್ನು ನೆಲಸಮ ಮಾಡಿ ಸದರಿ ಜಾಗವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಪ್ರಸ್ತುತದ ದರ ಸುಮಾರು 30 ಕೋಟಿ ರೂಪಾಯಿಗಳಾಗಿದ್ದು, ಜಾಗಕ್ಕೆ ಕಾಂಪೌಂಡ್ ನಿರ್ಮಿಸಿ ಬಿಡಿಎ ಸ್ವತ್ತು ಎಂದು ಸೂಚನಾ ಫಲಕವನ್ನು ಹಾಕಲಾಗಿದೆ.

Key words: 30 crore –worth- BDA –assets- seized