2 ಲಕ್ಷ ರೂ. ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ.

ಬೆಳಗಾವಿ,ನವೆಂಬರ್,26,2022(www.justkannada.in):   2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ಗುಮಾಸ್ತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆದಿದೆ.

ತಹಶೀಲ್ದಾರ್ ಸೋಮಲಿಂಗ ಮತ್ತು ಗುಮಾಸ್ತ ಪ್ರಸನ್ನ ಲೋಕಾಯುಕ್ತ ಬಲೆಗೆ ಬಿದ್ದವರು. 10 ಎಕರೆ ಜಮೀನಿನ ಖಾತೆ ಬದಲಾವಣೆಗಾಗಿ ಖೋದಾನಾಪುರದ ರಾಜೇಂದ್ರ ಇನಾಮದಾರ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಸೋಮಲಿಂಗ ಹಾಲಗಿ, ರಾಜೇಂದ್ರ ಇನಾಮದಾರ್ ಬಳಿ 5 ಲಕ್ಷ ಲಂಚ ಬೇಡಿಕೆ ಇಟ್ಟಿದ್ದು,  ಹೀಗಾಗಿ ನಿನ್ನೆ ರಾತ್ರಿ ತಹಶೀಲ್ದಾರ್, ಮನೆಯಲ್ಲೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಗುಮಾಸ್ತ ಜಿ. ಪ್ರಸನ್ನ ಮತ್ತು ತಹಶೀಲ್ದಾರ್ ಸೋಮಲಿಂಗ ಹಾಲಗಿಯನ್ನು ಬಂಧಿಸಿದ್ದರು.

ಲೋಕಾಯುಕ್ತ ಎಸ್‌ಪಿ ಯಶೋಧಾ ವಂಟಗೋಡೆ ನೇತೃತ್ವದ ಅಧಿಕಾರಿಗಳು ಮನೆಯಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು 10 ಲಕ್ಷಕ್ಕೂ ಹೆಚ್ಚು ನಗದು ಸೇರಿದಂತೆ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನು ತಹಶೀಲ್ದಾರ್ ಸೋಮಲಿಂಗ ಹಾಲಗಿ ಮತ್ತು ಗುಮಾಸ್ತ ಪ್ರಸನ್ನಗೆ ನವೆಂಬರ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Key words: 2 lakh Rs-bribe-Tahsildar -Clerk –aught- Lokayukta- trap.