ಜ.30 ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ

ಬೆಂಗಳೂರು,ಜನವರಿ,24,2026 (www.justkannada.in) ಜನವರಿ 30 ರಿಂದ ಫೆಬ್ರವರಿ 6 ರವರೆಗೆ  ’17ನೇ ಬೆಂಗಳೂರು ಅಂತಾರಾಷ್ಟ್ರೀಯ  ಸಿನಿಮೋತ್ಸವ’ ನಡೆಯಲಿದೆ.

ಈ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕಲಾತ್ಮಕ ನಿರ್ದೇಶಕ ಪಿ.ಬಿ.ಮುರಳಿ ಅವರು ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ವಿವರ ನೀಡಿದರು.

ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ದೇಶ  ವಿದೇಶದ ಅತಿಥಿಗಳು ಉಪಸ್ಥಿತರಿರಲಿದ್ದಾರೆ.

ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಧ್ಯೇಯ ವಾಕ್ಯದೊಂದಿಗೆ ಈ ಚಿತ್ರೋತ್ಸವ  ನಡೆಯಲಿದೆ.

ಸಿನಿಮೋತ್ಸವ ಅಂಗವಾಗಿ ಬೆಂಗಳೂರಿನ ರಾಜಾಜಿನಗರದ ಲುಲುಮಾಲ್‌ ನಲ್ಲಿರುವ, ಸಿನಿಪೊಲಿಸ್‌ ನ 11 ಸ್ಕ್ರೀನ್‌ ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ. 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.  ಬ್ರಿಟನ್‌, ಅಮೆರಿಕ, ಜರ್ಮನಿ, ರಷ್ಯಾ, ಫಿಲಿಫೈನ್ಸ್‌, ಪೋಲೆಂಡ್‌ ,ಇಟಲಿ, ಆಸ್ಟ್ರೇಲಿಯಾ,, ಫ್ರಾನ್ಸ್‌, ಕೊರಿಯಾ, ಆಷ್ಟ್ರಿಯಾ, ಬೆಲ್ಜಿಯಂ, ನೆದರ್ಲೆಂಡ್‌, ಫಿನ್‌ಲೆಂಡ್‌, ಇರಾನ್‌, , ಗ್ರೀಸ್‌, ರೊಮಾನಿಯಾ, ಜಪಾನ್‌, ಸ್ಪೇನ್‌, ಇಂಡೋನೇಷಿಯಾ, ಚೀನಾ, ಕಿರ್ಗಿಸ್ತಾನ್ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಲನ ಚಿತ್ರೋತ್ಸವ ನಡೆಯುವ ಪ್ರತಿ ದಿನವೂ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ವಿಚಾರ ಸಂಕಿರಣಗಳು ಜರುಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Key words: 17th Bangalore International Film Festival, January 30, CM Siddaramaiah