ಮನೆ ಮಹಡಿಯ ಮೇಲೆ ಹಾದು ಹೋದ ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿ

ಬೆಂಗಳೂರು:ಮೇ-18:(www.justkannada.in) ಮನೆ ಮಹಡಿಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ಶಾಕ್‌ ಹೊಡೆದು 1೩ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮತ್ತಿಕೆರೆ ನೇತಾಜಿ ನಗರದ ಪೈಪ್‌ಲೈನ್‌ ರಸ್ತೆಯಲ್ಲಿ ನಡೆದಿದೆ.

ನಿಖಿಲ್‌ ಗಾಯಗೊಂಡಿರುವ ಬಾಲಕ. ಈತನಿಗೆ ಶೇ.47ರಷ್ಟು ಸುಟ್ಟ ಗಾಯಗಳಾಗಿವೆ. ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಪೈಪ್‌ಲೈನ್‌ ರಸ್ತೆಯ 2ನೇ ಅಡ್ಡರಸ್ತೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಖಿಲ್‌, ತನ್ನ ಸ್ನೇಹಿತರ ಜೊತೆ ಕ್ರಿಕೆಟ್‌ ಆಡುತ್ತಿದ್ದ. ಈ ವೇಳೆ ಚೆಂಡು ಮಹಡಿ ಮೇಲೆ ಬಿದ್ದಿತ್ತು. ಹೀಗಾಗಿ ಅದನ್ನು ತರಲು ನಿಖಿಲ್‌ ಮಹಡಿ ಮೇಲೆ ಹೋಗಿದ್ದ. ಆ ಮನೆ ಮೇಲೆ ಹಲವು ವೈರ್‌ಗಳು ಹಾದು ಹೋಗಿದ್ದು, ಅವುಗಳ ಪೈಕಿ ಒಂದು ವೈರ್‌ನಿಂದ ವಿದ್ಯುತ್‌ ಶಾಕ್‌ ಹೊಡೆದು ಕಿರುಚಿ ಅಲ್ಲಿಯೇ ಬಿದ್ದಿದ್ದಾನೆ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೈಟೆನ್ಷನ್ ವೈಯರ್ ತಗುಲಿ ಸಂಭವಿಸಿರುವ ವಿದ್ಯುತ್ ಅವಘಡಕ್ಕೆ ಕಟ್ಟಡ ಮಾಲೀಕರೇ ನೇರ ಹೊಣೆಗಾರರು ಎಂದು ಬೆಸ್ಕಾಂ ತಿಳಿಸಿದೆ. 66 ಕೆವಿ ಹಾಯ್ದು ಹೋಗಿರುವ ವಿದ್ಯುತ್ ಲೈನ್ ಕೆಳಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಕಟ್ಟಡಕ್ಕೂ ಲೈನ್​ಗೂ ಕನಿಷ್ಠ ನಾಲ್ಕು ಮೀಟರ್ ಅಂತರವಿರಬೇಕು ಎಂಬ ನಿಯಮವಿದೆ. ಆದರೂ ನಿಯಮ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಲಾಗಿದೆ. ಬಂಡಿಯಪ್ಪ ಎಂಬುವಾರಿಗೆ ಸೇರಿದ ಮನೆ ಇದಾಗಿದ್ದು, 2015ರ ಸೆಪ್ಟೆಂಬರ್​ನಲ್ಲಿ ಕೆಪಿಟಿಸಿಎಲ್ ನೋಟೀಸ್ ಜಾರಿ ಮಾಡಿತ್ತು. ಘಟನೆ ನಡೆದ ಸ್ಥಳಕ್ಕೆ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮನೆ ಮಹಡಿಯ ಮೇಲೆ ಹಾದು ಹೋದ ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿ
13-yr-old comes too close to HT wire, electrocuted in Mathikere