4 ವಾರಗಳವರೆಗೆ ಚಿತ್ರಮಂದಿರಗಳ 100% ಭರ್ತಿಗೆ ಅವಕಾಶ: ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ

ಪ್ರೇಕ್ಷಕರಲ್ಲಿ ಕೋವಿಡ್ ಸೋಂಕು ಹರಡುವುದು ಕಂಡುಬಂದರೆ ನಿರ್ಧಾರ ಬದಲು

ಬೆಂಗಳೂರು, ಫೆಬ್ರವರಿ 3, ಬುಧವಾರ, 2021: ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಕಾರ್ಮಿಕರ ಹಿತದೃಷ್ಟಿಯಿಂದ ನಾಲ್ಕು ವಾರಗಳವರೆಗೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ 100% ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಹಿರಿಯ ನಟರು, ಫಿಲಂ ಚೇಂಬರ್ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಸಭೆ ನಡೆದಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯು ಕೋವಿಡ್ ನಿಯಂತ್ರಿಸಲು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕು ಎಂದು ಮಾರ್ಗಸೂಚಿ ಹೊರಡಿಸಿತ್ತು. ಕೇಂದ್ರ ಸರ್ಕಾರವು ಶೇ.100 ರಷ್ಟು ಭರ್ತಿ ಮಾಡಲು ಅವಕಾಶ ನೀಡಿದ್ದರೂ, ಕೋವಿಡ್ ಹಿನ್ನೆಲೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿತ್ತು. ಅದರಂತೆ ಮಾರ್ಗಸೂಚಿ ರೂಪಿಸಲಾಗಿತ್ತು ಎಂದು ವಿವರಿಸಿದರು.

ಆದರೆ ಆರೋಗ್ಯ ಇಲಾಖೆಯ ಈ ಮಾರ್ಗಸೂಚಿಯನ್ನು ಚಲನಚಿತ್ರ ರಂಗದವರು ವಿರೋಧಿಸಿದ್ದಾರೆ. ಕಾರ್ಮಿಕರು, ನಿರ್ಮಾಪಕರ ಹಿತದೃಷ್ಟಿಯಿಂದ ಹಾಗೂ ಚಿತ್ರರಂಗದ ಪರಿಸ್ಥಿತಿ ಶೋಚನೀಯವಾಗಿರುವುದರಿಂದ ನಿರ್ಧಾರ ಬದಲಿಸಬೇಕು ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಮ್ಮೊಂದಿಗೆ ಇರಬೇಕು ಎಂದು ಕೂಡ ಚಿತ್ರರಂಗದವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ನಾಲ್ಕು ವಾರಗಳವರೆಗೆ 100% ರಷ್ಟು ಚಿತ್ರಮಂದಿರಗಳಲ್ಲಿ ಆಸನ ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಕಠಿಣವಾದ ಮಾರ್ಗಸೂಚಿ ರೂಪಿಸಲಿದ್ದು, ನಾಳೆಯೇ ಅದನ್ನೂ ಬಿಡುಗಡೆ ಮಾಡಲಾಗುವುದು. ಇದನ್ನು ಚಿತ್ರಮಂದಿರಗಳ ಮಾಲೀಕರು ಅಳವಡಿಸಿಕೊಳ್ಳಬೇಕು. ಜನರು ಕೂಡ ಯಥಾವತ್ತಾಗಿ ಪಾಲಿಸಬೇಕು. ನಾಲ್ಕು ವಾರಗಳಲ್ಲಿ ಪ್ರೇಕ್ಷಕರಿಗೆ ಸೋಂಕು ತಗುಲುವ ಅಥವಾ ಕೋವಿಡ್ ಸೋಂಕು ಹೆಚ್ಚಿದ ಪ್ರಕರಣ ಕಂಡುಬಂದರೆ, ಮತ್ತೆ ನಿರ್ಧಾರ ಬದಲಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಬರಲಿದೆ ಎಂದು ಸ್ಪಷ್ಟಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್, ನಟ ಶಿವರಾಜ್ ಕುಮಾರ್ ಉಪಸ್ಥಿತರಿದ್ದರು.