ಪ್ರವಾಹ ಪರಿಹಾರ ಕಾರ್ಯಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಬಿಡುಗಡೆ

ಬೆಂಗಳೂರು:ಆ-10: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇನ್ನೊಂದೆಡೆ ಸರ್ಕಾರವು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಕೇಂದ್ರ ಸರ್ಕಾರ 126 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಠಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 126 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಪ್ರವಾಹದ ಹಿನ್ನೆಲೆಯಲ್ಲಿ ಪರಿಹಾರ ಕೋರಿ ನಿನ್ನೆಯಷ್ಟೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರವು 126 ಕೋಟಿ ರೂ.ಗಳನ್ನು ಪರಿಹಾರ ಧನವಾಗಿ ಬಿಡುಗಡೆ ಮಾಡಿದೆ.

ಬೆಳಗಾವಿ ಜಿಲ್ಲೆಗೆ 25 ಕೋಟಿ ರೂ. ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರವು ಬಾಗಲಕೋಟೆಗೆ 10 ಕೋಟಿ ರೂ. ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ವಿಜಯಪುರ ಜಿಲ್ಲೆಗೆ 5 ಕೋಟಿ ರೂ., ಯಾದಗಿರಿ ಜಿಲ್ಲೆಗೆ 5 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 10 ಕೋಟಿ ರೂ., ಉಡುಪಿ ಜಿಲ್ಲೆಗೆ 5 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಗೆ 5 ಕೋಟಿ ರೂ.ಗಳ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಗೆ 5 ಕೋಟಿ ರೂ., ಕೊಡಗಿಗೆ 5 ಕೋಟಿ ರೂ., ಚಿಕ್ಕಮಗಳೂರಿಗೆ 5 ಕೋಟಿ ರೂ., ಹಾಸನಕ್ಕೆ 5 ಕೋಟಿ ರೂ., ಧಾರವಾಡ ಜಿಲ್ಲೆಗೆ 5 ಕೋಟಿ ರೂ., ಗದಗ ಜಿಲ್ಲೆಗೆ 5 ಕೋಟಿ ರೂ., ಕಲಬುರಗಿಗೆ 5 ಕೋಟಿ ರೂ., ಸೇರಿ ಒಟ್ಟಾರೆ ಪ್ರವಾಹ ಪೀಡಿತ 14 ಜಿಲ್ಲೆಗಳಿಗೆ 100 ಕೋಟಿ ರೂ. ಪರಿಹಾರ ಹಣವನ್ನು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರವು ಬಿಡುಗಡೆ ಮಾಡಿದೆ.

1 ಕೋಟಿ ನೆರವು ಘೋಷಿಸಿದ ರಾಜೀವ್‌ ಚಂದ್ರಶೇಖರ್‌
ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಕುರಿತು ಟ್ವೀಟ್‌ ಮಾಡಿರುವ ಸಂಸದ ರಾಜೀವ್‌ ಚಂದ್ರಶೇಖರ್‌, ನಮ್ಮ ರಾಜ್ಯದಲ್ಲಿ ಪ್ರವಾಹವು ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಸಾವಿರಾರು ಜನರು ಮತ್ತು ಮನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನನ್ನ ರಾಜ್ಯಸಭಾ ನಿಧಿಯಿಂದ ಪ್ರವಾಹ ಪೀಡಿತರಿಗೆ 1 ಕೋಟಿ ರೂ. ಘೋಷಿಸುತ್ತಿದ್ದೇನೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಜನತೆ ಮತ್ತು ಉದ್ಯಮಿಗಳು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೃಪೆ:ವಿಜಯವಾಣಿ

ಪ್ರವಾಹ ಪರಿಹಾರ ಕಾರ್ಯಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಬಿಡುಗಡೆ
100-crore-relesed-by-state-government-for-flood-relief-work-rs-126-crore-from-the-central-government