ಓಮಿಕ್ರಾನ್ ಸಮುದಾಯಕ್ಕೆ ಹರಡದಿರುವಂತೆ ನಿಗಾವಹಿಸಲು ಕೇಂದ್ರದಿಂದ ಏಳು ಪ್ರಮುಖ ನಗರಗಳಿಗೆ ಸೂಚನೆ

ನವದೆಹಲಿ, ಡಿಸೆಂಬರ್ 23, 2021 (www.justkannada.in): ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದೇಶದ 15 ರಾಜ್ಯಗಳಲ್ಲಿ ಒಟ್ಟು ೨೨೦ರ ಸಂಖ್ಯೆಯನ್ನು ದಾಟಿರುವ ಹಿನ್ನೆಲೆಯಲ್ಲಿ, ಕೇಂದ್ರವು, ಓಮಿಕ್ರಾನ್ ಸಮುದಾಯಕ್ಕೆ ಹರಡದಿರುವಂತೆ ಬೆಂಗಳೂರು ಒಳಗೊಂಡಂತೆ ದೇಶದ ಎಂಟು ಪ್ರಮುಖ ನಗರಗಳಿಗೆ ಸೂಚನೆ ನೀಡಿದೆ.

ದೆಹಲಿ, ಬೆಂಗಳೂರು, ಭುವನೇಶ್ವರ, ಚೆನ್ನೈ, ಮುಂಬೈ, ಪುಣೆ, ಹೈದ್ರಾಬಾದ್ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಓಮಿಕ್ರಾನ್ ತಳಿ ಹರಡುತ್ತಿದ್ದು ನಿಗಾವಹಿಸುವಂತೆ ತಿಳಿಸಲಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜೀತ್ ಕೆ. ಸಿಂಗ್ ಅವರು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ, “ಈ ಮೇಲ್ಕಂಡ ನಗರಗಳಲ್ಲಿ ಸಂಗ್ರಹಿಸಿರುವ ಎಲ್ಲಾ ಆರ್‌ಟಿ-ಪಿಸಿಆರ್ ಪಾಸಿಟಿವ್ ಮಾದರಿಗಳನ್ನೂ ಸಹ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ನಿಗದಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು,” ಎಂದು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿರುವ ಪ್ರಕಾರ ದೇಶದಲ್ಲಿ ಪ್ರಸ್ತುತ ೨೨೨ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು (೬೫), ಹಾಗೂ ನಂತರದ ಸ್ಥಾನದಲ್ಲಿ ದೆಹಲಿ (೫೪) ಇದೆ.

ಆದರೆ ಅಧಿಕಾರಿಗಳನ್ನು ಕಾಡುತ್ತಿರುವ ವಿಷಯವೇನೆಂದರೆ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕರ್ನಾಟಕ, ಕೇರಳ, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿರುವ 51 ಪ್ರಕರಣಗಳಲ್ಲಿ ಸೋಂಕಿತರಿಗೆ ಯಾವುದೇ ಪ್ರಯಾಣದ ಚರಿತ್ರೆಯೇ ಇಲ್ಲ. ಅಂದರೆ ಇದರರ್ಥ ಭಾರತದಲ್ಲಿ ಓಮಿಕ್ರಾನ್ ಸಮುದಾಯಕ್ಕೆ ಹರಡಿರುವ ಮೊದಲ ಸೂಚನೆಯಾಗಿದ್ದು, ತಜ್ಞರು ಅಂದಾಜಿಸಿರುವಂತೆ ಈ ಸಂಖ್ಯೆ ಸದ್ಯದಲ್ಲೇ ಏರಲಿದೆ.

ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಓಮಿಕ್ರಾನ್‌ ನ ಪರಿಸ್ಥಿತಿಯ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಸಭೆಯೊಂದನ್ನು ನಡೆಸಲಿದ್ದಾರೆ. ಪ್ರಧಾನಿಯವರು ಈ ಸಂಬಂಧ ಕೊನೆಯ ಬಾರಿಗೆ ಸಭೆಯನ್ನು ನವೆಂಬರ್ 27ರಂದು ನಡೆಸಿದ್ದು, ಆಗ ಅಂತಾರಾಷ್ಟ್ರೀಯ ಪ್ರಯಾಣವನ್ನು ತೆರೆಯುವ ಸಂಬಂಧ ಪುನರಾವಲೋಕನ ಮಾಡಲು ನಿರ್ಧರಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ‘ಕಾಳಜಿಯನ್ನುಂಟು ಮಾಡಿರುವ ತಳಿ’ ಎಂದು ಘೋಷಿಸಿದ ಒಂದು ದಿನದ ನಂತರ ಈ ಪುನರಾವಲೋಕನ ಸಭೆಯನ್ನು ನಡೆಸಲಾಗಿತ್ತು.

ದೆಹಲಿಯ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿಯ ನಿರ್ದೇಶಕ, ಸಾರ್ವಜನಿಕ ಆರೋಗ್ಯ ಸಂಶೋಧಕ ರಮಣನ್ ಲಕ್ಷ್ಮಿನಾರಾಯಣ್ ಅವರು ಈ ಸಂಬಂಧ ಮಾತನಾಡಿ, “ಓಮಿಕ್ರಾನ್‌ ನ ಸ್ಥಳೀಯ ಹಬ್ಬುವಿಕೆ ಬಹಳ ಬೇಗ ಆಗುವ ಸಾಧ್ಯತೆ ಇದೆ. ಆದರೆ ಓಮಿಕ್ರಾನ್ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂಬ ಕುರಿತು ಇನ್ನೂ ನಮ್ಮ ಬಳಿ ಸರಿಯಾದ ಸಾಕ್ಷ್ಯಾಧಾರಗಳಿಲ್ಲ. ದಕ್ಷಿಣ ಆಫ್ರಿಕಾದ ಸಾಕ್ಷ್ಯಾಧಾರಗಳು ಸಲಹೆ ನೀಡುವಂತೆ ಓಮಿಕ್ರಾನ್ ಸೋಂಕು ಬಹಳ ವೇಗವಾಗಿ ಹರಡುತ್ತದೆ, ಆದರೆ ಆಸ್ಪತ್ರೆಗೆ ದಾಖಲಾಗಬೇಕಾಗುವ ಸಂಭವ ಹಾಗೂ ಮರಣದ ಪ್ರಮಾಣ ಕಡಿಮೆ,” ಎಂದಿದ್ದಾರೆ.

ಹೆಚ್ಚುತ್ತಿರುವ ಕೋವಿಡ್-೧೯ ಪ್ರಕರಣಗಳು ಹಾಗೂ ಓಮಿಕ್ರಾನ್ ತಳಿಯ ಭೀತಿಯ ಹಿನ್ನೆಲೆಯಲ್ಲಿ ದೆಹಲಿಯ ನೈಸರ್ಗಿಕ ವಿಕೋಪಗಳ ನಿರ್ವಹಣಾ ಪ್ರಾಧಿಕಾರವು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕ್ರಿಸ್‌ ಮಸ್ ಹಾಗೂ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ತಿಳಿಸಿದೆ. ಕ್ರಿಸ್‌ ಮಸ್ ಹಬ್ಬ ಹಾಗೂ ಹೊಸವರ್ಷದ ಆಚರಣೆಗಳು ಆರಂಭವಾಗುವುದಕ್ಕೆ ಮುಂಚಿತವಾಗಿಯೇ ಕೋವಿಡ್-19 ಅತೀ ವೇಗವಾಗಿ ಹರಡುತ್ತಿರುವ ಬಡಾವಣೆಗಳನ್ನು ಗುರುತಿಸಿ, ಜನರು ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಗಳ ಧಾರಣೆ ಹಾಗೂ ಇನ್ನಿತರೆ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾಧಿಕಾರ ಸೂಚಿಸಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರದಂದು ಓಮಿಕ್ರಾನ್ ತಳಿ ಹಿಂದಿನ ಡೆಲ್ಟಾ ತಳಿಗಿಂತ ಮೂರು ಪಟ್ಟು ವೇಗವಾಗಿ ಹರಡುವುದಾಗಿಯೂ ತಿಳಿಸುತ್ತಾ, ಒಂದು ವೇಳೆ ಪಾಸಿಟಿವಿಟಿ ಪ್ರಮಾಣ ಶೇ.೧೦ ದಾಟಿದರೆ ಅಥವಾ ಆಸ್ಪತ್ರೆಗಳಲ್ಲಿ ಶೇ.೪೦ರಷ್ಟು ಹಾಸಿಗೆಗಳು ತುಂಬಿರುವ ಅಂಶ ಕಂಡು ಬಂದರೆ, ತಡಮಾಡದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿಯೂ ರಾಜ್ಯಗಳನ್ನು ಎಚ್ಚರಿಸಿದೆ.

ದೆಹಲಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೨೫ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿದ್ದು ಇದು ಕಳೆದ ಆರು ತಿಂಗಳಲ್ಲಿನ ಅತೀ ಹೆಚ್ಚಿನ ಪ್ರಮಾಣವಾಗಿದೆ. ಈ ಮೂಲಕ ದೆಹಲಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೬೨೪ಕ್ಕೆ ಏರಿಕೆಯಾಗಿದ್ದು, ಇದು ಕಳೆದ ಐದು ತಿಂಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Seven –major- cities – instructed – Center -take care -not -spread – Omicron