ಓದುಗರಿಗೆ ಕೃತಜ್ಞತೆಗಳು….

ಡಿಜಿಟಲ್ ಮಾಧ್ಯಮದಲ್ಲಿ
ಜಸ್ಟ್ ಕನ್ನಡದ ದೃಢ ಹೆಜ್ಜೆಗಳು

ಜಸ್ಟ್ ಕನ್ನಡ…
ಕನ್ನಡದಲ್ಲಿ ಆನ್ಲೈನ್ ಪತ್ರಿಕೋದ್ಯಮ ಚಿಗುರೊಡೆಯುತ್ತಿದ್ದ ಕಾಲಘಟ್ಟದಲ್ಲಿ 2009ರ ಸೆಪ್ಟಂಬರ್ ಮಾಹೆಯಲ್ಲಿ ಮಹತ್ತರ ಕನಸುಗಳೊಂದಿಗೆ ಆರಂಭವಾದ ಜಸ್ಟ್ ಕನ್ನಡ ಆನ್ ಲೈನ್ ಸುದ್ದಿ ತಾಣವು ‘ಕ್ಷಣ ಕ್ಷಣಕ್ಕೂ ಸುದ್ದಿ’ ಎನ್ನುವ ತನ್ನ ಟ್ಯಾಗ್ ಲೈನ್ ಗೆ ಕಟಿಬದ್ಧವಾಗಿ 13 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಕಳೆದ ಕೆಲವು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮ ದೊಡ್ಡ ಮಟ್ಟದಲ್ಲಿ ಸದ್ದು, ಸುದ್ದಿ ಮಾಡುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ಜನರ ಅಂಗೈಯಲ್ಲಿ ಜಗತ್ತನ್ನು ಕಾಣಿಸುವ; ಕುಣಿಸುವ ನವ ನವೀನ ಸಂವಹನ ಸಾಧ್ಯತೆಗಳು ಡಿಜಿಟಲ್ ಮಾಧ್ಯಮದ ಶಕ್ತಿ, ಗುಣ,ವೇಗ ವರ್ಧನೆಗೆ ಪೂರಕ; ಪ್ರೇರಕ ಆಗುತ್ತಿವೆ. ಮುಖ್ಯವಾಹಿನಿ ಮಾಧ್ಯಮ ಲೋಕದಲ್ಲಿ ಘಟಿಸುತ್ತಿರುವ ಸ್ಥಿತ್ಯಂತರಗಳು ಕೂಡ ಡಿಜಿಟಲ್ ಮಾಧ್ಯಮದ ಸಂಖ್ಯಾ ಬಾಹುಳ್ಯಕ್ಕೆ ಕಾರಣವಾಗಿವೆ.

ಮೊದಲೇ ಹೇಳಿದಂತೆ, ಮಾಧ್ಯಮ ಲೋಕದಲ್ಲಿ ಇಂಥದೊಂದು ಸಾಧ್ಯತೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಸಾಂಸ್ಕೃತಿಕ ನಗರಿ ಮೈಸೂರು ಕೇಂದ್ರಿತವಾಗಿ ಆರಂಭವಾಗಿದ್ದು ‘ಜಸ್ಟ್ ಕನ್ನಡ’. ಈಗ ಆನ್ ಲೈನ್ ನಲ್ಲಿ ಸುದ್ದಿ ನೀಡಲು ನೂರಾರು ಜಾಲತಾಣಗಳಿವೆ. ಆದರೆ ಈ ಕೆಲಸವನ್ನು ಜಸ್ಟ್ ಕನ್ನಡ ಆರಂಭಿಸಿದ ದಿನಗಳಲ್ಲಿ ಇದ್ದದ್ದು ಕೇವಲ ಬೆರಳೆಣಿಕೆಯಷ್ಟು ವೆಬ್ ಸೈಟ್ ಗಳು.

ಇಂದಿನ ವರ್ತಮಾನವನ್ನು ಮರುದಿನ ಬೆಳಗ್ಗೆ ಓದುವುದು ಅಭ್ಯಾಸವಾಗಿದ್ದ ಓದುಗರಿಗೆ ಅಂದಂದಿನ ಸುದ್ದಿಗಳನ್ನು ಅಂದೇ, ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ನಡೆಸಿದ ಹಲವು ವಿಭಿನ್ನ ಪ್ರಯೋಗಗಳ ಮೂಲಕ ‘ಜಸ್ಟ್ ಕನ್ನಡ’ ಜನಸಾಮಾನ್ಯ ಓದುಗರನ್ನು,ಜನಪ್ರತಿನಿಧಿಗಳನ್ನು, ಹಲವು ಹಂತದ ಅಧಿಕಾರಿಗಳನ್ನು ಮತ್ತು ದೇಶ -ವಿದೇಶಗಳಲ್ಲಿರುವ ಕನ್ನಡಿಗರನ್ನು ತಲುಪಿತು. ಆರಂಭದಲ್ಲಿ ಓದುಗರೊಬ್ಬರು ನೀಡಿದ ‘ಕ್ಷಣ ಕ್ಷಣಕ್ಕೂ ಸುದ್ದಿ’ ಎಂಬ ಟ್ಯಾಗ್ ಲೈನ್ ಗೆ ನಮ್ಮೆಲ್ಲ ಓದುಗರು ಸಮ್ಮತಿ ಮುದ್ರೆ ಒತ್ತುವಷ್ಟರ ಮಟ್ಟಿಗೆ ‘ಜಸ್ಟ್ ಕನ್ನಡ’ ಚಿರಪರಿಚಿತವಾಗಿದೆ ಎನ್ನುವುದು ನಮ್ಮ ಪಾಲಿನ ಹೆಮ್ಮೆ.

ನಿಜ, ಡಿಜಿಟಲ್ ಮಾಧ್ಯಮ ರಂಗದಲ್ಲೀಗ ದಿನ ದಿನವೂ ಹೊಸ ಹೊಸ ಸುದ್ದಿ ತಾಣಗಳು ಉದಯಿಸುತ್ತಿವೆ. ಪೈಪೋಟಿಯ ಈ ಯುಗದಲ್ಲಿ ಉಳಿವಿಗಾಗಿ ಮಾಧ್ಯಮ ಕ್ಷೇತ್ರದ ‘ಸ್ವಯಂ ಎಲ್ಲೆಗಳನ್ನು ಮೀರುವ, ಸಾಮಾನ್ಯ ಸುದ್ದಿಗೆ ರೋಚಕತೆಯನ್ನು ಬೆರೆಸಿ ಬಿಕರಿಗೆ ಇಡುವ ಸಲ್ಲದ ನಡೆಗಳು ಹೆಚ್ಚುತ್ತಿವೆ. ‘ನಾವು ಇಲ್ಲಿ ಉಳಿಯಬೇಕೆಂದರೆ, ಹೆಚ್ಚು ಜನರನ್ನು ತಲುಪಬೇಕೆಂದರೆ ಇದೆಲ್ಲ ಅನಿವಾರ್ಯ’ ಎನ್ನುವುದು ಅಲಿಖಿತ ನಿಯಮವೇ ಆಗಿ ಹೋಗಿದೆ. ಆದರೆ, ಜಸ್ಟ್ ಕನ್ನಡ ಯಾವತ್ತೂ ಇಂತಹ ತುರ್ತಿಗೆ ಒಡ್ಡಿಕೊಂಡಿಲ್ಲ. ಸುದ್ದಿಯನ್ನು ಸುದ್ದಿಯಾಗಿ ಅಷ್ಟೆ ನೋಡಿದೆ. ಖಚಿತ ಸುದ್ದಿಯನ್ನಷ್ಟೆ ನೀಡಿದೆ ಎನ್ನುವುದು ನಮ್ಮ ಪಾಲಿನ ಮತ್ತೊಂದು ಹೆಮ್ಮೆ.

ವಾಟ್ಸ್ ಆ್ಯಪ್ ನಲ್ಲಿ ನ್ಯೂಸ್ ನೀಡಿದ ಮೊದಲ ಪ್ರಯತ್ನ:
ಆಗಷ್ಟೇ ವಾಟ್ಸ್ ಆ್ಯಪ್ ಮೆಸೆಂಜರ್ ಆ್ಯಪ್ ಶುರುವಾಗಿದ್ದ ಕಾಲ. ಈ ವಾಟ್ಸ್ ಆ್ಯಪ್ ಮೂಲಕವೂ ಜನರಿಗೆ ಸುದ್ದಿ ರವಾನಿಸಬಹುದು ಎಂಬ ಹೊಸ ಆಲೋಚನೆಯೊಂದಿಗೆ ಪ್ರಥಮ ಪ್ರಯೋಗ ಮಾಡಲಾಯಿತು. ಜಸ್ಟ್ ಕನ್ನಡ ವಾಟ್ಸ್ಆ್ಯಪ್ ಗ್ರೂಪ್ ಗಳನ್ನು ಆರಂಭಿಸಿ ಅದಕ್ಕೆ ಜೆಕೆ ಓದುಗರನ್ನು ಸೇರಿಸಿ ಅದರಲ್ಲಿ ನ್ಯೂಸ್ ಲಿಂಕ್ ಗಳನ್ನು ಕಳುಹಿಸುವ ಮೂಲಕ ಅಂದಿನ ಸುದ್ದಿಗಳನ್ನು ವೇಗವಾಗಿ ನೀಡುವ ಪ್ರಯೋಗ ಮಾಡಿದ್ದು ಜಸ್ಟ್ ಕನ್ನಡ ತಂಡ. ಇದು ಕನ್ನಡ ಆನ್ ಲೈನ್ ಪೋರ್ಟಲ್ ಗಳ ಮಟ್ಟಿಗೆ ಪ್ರಥಮ ಪ್ರಯೋಗವೇ ಸರಿ. ಜಸ್ಟ್ ಕನ್ನಡ ವಾಟ್ಸ್ ಆ್ಯಪ್ ಗ್ರೂಪ್ ಗಳ ಮೂಲಕ ಇಂದು ಸಾವಿರಾರು ಓದುಗರು ದೈನಂದಿನ ವಿದ್ಯಮಾನಗಳನ್ನು ತ್ವರಿತವಾಗಿ ಪಡೆಯುತ್ತಿದ್ದಾರೆ. ಈ ಬಗೆಯ ‘ಗುಂಪು-ಗಾರಿಕೆ’ ನಮಗೆ ಖುಷಿ ನೀಡಿದೆ.

ಕಲೆ ಮೂಲಕ ಪೌರ ಸಮಸ್ಯೆ ಬಗೆಹರಿಸುವ ಯತ್ನ :
ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಕಲೆಯನ್ನು ‘ಅಸ್ತ್ರ’ ಮಾಡಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ‘ಬಣ್ಣ-ಹೋರಾಟ’ಕ್ಕೆ ಮೊದಲು ವೇದಿಕೆ ಒದಗಿಸಿದ್ದು ಜಸ್ಟ್ ಕನ್ನಡ. ಮೈಸೂರು ಅರಮನೆ ಬಳಿಯಲ್ಲಿ ಬಿಎನ್ ರಸ್ತೆಗೆ ಹೊಂದಿಕೊಂಡಂತಿದ್ದ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯನ್ನು ಜಸ್ಟ್ ಕನ್ನಡದ ಸಲಹೆಯ ಮೇರೆಗೆ ಬಾದಲ್ ‘ಕೆರೆ’ಯಂತೆ ಚಿತ್ರಿಸಿದರು. ಈ ‘ತ್ರಿ – ಡಿ’ ಚಿತ್ರ ಸುದ್ದಿತಾಣದಲ್ಲಿ ಪ್ರಕಟವಾಗಿ,
ಎಲ್ಲೆಡೆ ಹರಡಿತು. ಇದಾದ ಕೆಲ ಗಂಟೆಯೊಳಗೆ ರಸ್ತೆ ಗುಂಡಿಗೆ ಮುಕ್ತಿ ಸಿಕ್ಕಿತ್ತು. ಕಲೆಯ ಮೂಲಕ ಸುದ್ದಿಸಂಸ್ಥೆಯೊಂದು ನಾಗರಿಕರಿಗೆ ನೆರವಾಗಬಹುದು ಎಂಬ ಸಂದೇಶವನ್ನು ಕಲಾವಿದ ಬಾದಲ್ ಸಹಕಾರದಲ್ಲಿ ಜಸ್ಟ್ ಕನ್ನಡ ಸಾರಿತ್ತು. ಬಳಿಕ ಇಂತಹ ಹತ್ತಾರು ಪ್ರಯೋಗಗಳನ್ನು ಬಾದಲ್, ಮೈಸೂರು, ಬೆಂಗಳೂರಿನ ವಿವಿಧೆಡೆ ಮಾಡಿ ಗಮನ ಸೆಳೆದಿದ್ದಾರೆ.

ಜಾಲತಾಣಗಳ ಮೂಲಕ ಓದುಗರ ಸಂಪರ್ಕ:
ಇದು ಸೋಷಿಯಲ್ ಮೀಡಿಯಾ ಕಾಲ. ಬಹುತೇಕ ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಇಂಟರ್ ನೆಟ್ ಅಗ್ಗವಾಗಿ ಸಿಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಓದುಗರೊಂದಿಗೆ ಬೆರೆಯಲು ಸಾಮಾಜಿಕ ಜಾಲತಾಣಗಳು ಸಮರ್ಥ ಸಾಧನ. ಸ್ಥಳೀಯ ಸಮಸ್ಯೆಗಳು, ಅವಘಡಗಳ ಚಿತ್ರ, ವಿಡಿಯೋ ದೃಶ್ಯಾವಳಿಗಳನ್ನು ಜಸ್ಟ್ ಕನ್ನಡಕ್ಕೆ ಓದುಗರೇ ರವಾನಿಸುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳಿದ್ದರೆ ಅವುಗಳ ಕುರಿತು ವರದಿ ಮಾಡಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಮನವಿ ಮಾಡುತ್ತಾರೆ. ಇಂತಹ ವೇದಿಕೆಯನ್ನು ಜಸ್ಟ್ ಕನ್ನಡ ಒದಗಿಸಿಕೊಟ್ಟಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳೊಂದಿಗೆ ಓದುಗರು ಜೆಕೆ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ವರದಿಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೂ ಅವುಗಳನ್ನು ಗಮನಕ್ಕೆ ತರುತ್ತಾರೆ. ಈ ಮೂಲಕ ವರದಿ ನಿಖರತೆಯನ್ನು ಜಸ್ಟ್ ಕನ್ನಡ ಉಳಿಸಿಕೊಂಡು ಬರುತ್ತಿದೆ.

ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್ ಮೂಲಕ ಸುದ್ದಿ :
ಯೂಟ್ಯೂಬ್, ಟ್ವಿಟ್ಟರ್, ಫೇಸ್ ಬುಕ್ ಮೂಲಕ ನಿತ್ಯ ಸಾವಿರಾರು ಓದುಗರನ್ನು ಜಸ್ಟ್ ಕನ್ನಡ ತಲುಪುತ್ತಿದೆ. ಯೂ ಟ್ಯೂಬ್ ಮೂಲಕ ಮೈವಿವಿ, ಮುಕ್ತ ವಿವಿ, ದಸರಾ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮಗಳ ವಿಡಿಯೋ ಲೈವ್ ಟೆಲಿಕಾಸ್ಟ್, ಟ್ವಿಟ್ಟರ್ ಮೂಲಕ ಸುದ್ದಿ, ಮಾಹಿತಿಯನ್ನು ಜಸ್ಟ್ ಕನ್ನಡ ನೀಡುತ್ತಿದೆ. ಸಿಎಂ, ಸಚಿವರಾದಿಯಾಗಿ ಹಲವಾರು ಅಧಿಕಾರಿಗಳು ಟ್ವಿಟ್ಟರ್ ನಲ್ಲಿ ಜಸ್ಟ್ ಕನ್ನಡ ಟ್ವೀಟ್ ಗಳನ್ನು ರಿಟ್ವೀಟ್ ಮಾಡಿದ್ದಾರೆ. ಫೇಸ್ ಬುಕ್ ಮೂಲಕ ಜಸ್ಟ್ ಕನ್ನಡ ವಿಶ್ವದಾದ್ಯಂತ ಎಲ್ಲೆಡೆ ಇರುವ ಕನ್ನಡಿಗರನ್ನು ತಲುಪುತ್ತಿದೆ.

ಸೆಲೆಬ್ರೆಟಿಗಳೊಂದಿಗೆ ಜೆಕೆ ಓದುಗರ ಚಿಟ್ ಚಾಟ್:
ಜಸ್ಟ್ ಕನ್ನಡ ಓದುಗರನ್ನು ಹಾಗೂ ಸೆಲೆಬ್ರೆಟಿಗಳೊಂದಿಗೆ ಬೆಸೆಯುವ ಪ್ರಯತ್ನವನ್ನೂ ಜೆಕೆ ಮಾಡಿದೆ. ನಿರ್ದೇಶಕ ಪವನ್ ಕುಮಾರ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಜಸ್ಟ್ ಕನ್ನಡ ಓದುಗರೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ.

ವರ್ತಮಾನಗಳು ಅಬ್ಬರಿಸಿ, ಬೊಬ್ಬಿರಿಯುತ್ತಿರುವ ‘ಸ್ಫೋಟ’ಕ ಕಾಲ ಇದು. ಸುದ್ದಿ ಎನ್ನುವುದು ರೋಚಕ ಗೊಳಿಸಿದಷ್ಟೂ ಹೆಚ್ಚು ‘ಬೆಲೆ ಬಾಳುವ’ ಸರಕಿನಂತಾಗಿರುವುದು ಮಾಧ್ಯಮ ಜಗತ್ತಿನ ವಿಶೇಷವೋ, ವಿಪರ್ಯಾಸವೋ ನಿರ್ಣಯಿಸುವುದು ಕಷ್ಟವಾಗಿರುವ ವರ್ತಮಾನದಲ್ಲಿ ನಾವು ಯಾವುದೇ ಆವೇಶ, ಉದ್ವೇಗಕ್ಕೆ ಒಳಗಾಗದೆ, ರೋಚಕತೆಯ ಹಿಂದೆ ಬೀಳದೆ, ಯಾರ ಮುಖವಾಣಿಯಾಗದೆ, ‘ಮುಖ ರಹಿತ’ ತಂತ್ರಗಳಿಗೂ ಬಲಿಯಾಗದೆ ನಮಗೆ ನಾವೇ ವಿಧಿಸಿಕೊಂಡ ಇತಿ-ಮಿತಿಗಳಲ್ಲಿ ಪುಟ್ಟ ಪುಟ್ಟವೇ ಆದರೂ ದೃಢವಾದ ಹೆಜ್ಜೆ ಇಡುತ್ತಾ 13 ವರ್ಷ ಸಾಗಿ ಬಂದಿದ್ದೇವೆ.
ಈ ‘ಜಸ್ಟ್ -ನಡಿಗೆ’ಯ ಜೊತೆ ನಮ್ಮ ಓದುಗರ ಅಪಾರ ಪ್ರೋತ್ಸಾಹದ ನುಡಿಗಳಿವೆ. ಕರ್ನಾಟಕ ಸರ್ಕಾರ ನಮ್ಮ ಪ್ರಯತ್ನವನ್ನು ಗಮನಿಸಿ 2013 ರಲ್ಲೆ ‘ನವ ಮಾಧ್ಯಮ’ಕ್ಕೆ ಬೆಂಬಲವಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಬೆನ್ನು ತಟ್ಟಿತು. ಮಾತ್ರವಲ್ಲ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರಿಸಿ, ಸರ್ಕಾರಿ ಜಾಹೀರಾತು ನೀಡುವ ಮೂಲಕ ನಮ್ಮ ನಡಿಗೆ ನಿರಂತರ ಮುನ್ನಡೆಯಲು ಬಲ ನೀಡಿತು. ನಮ್ಮ ಮತ್ತು ನಮ್ಮಂತ ನವ ಮಾಧ್ಯಮಗಳಿಗೆ ಇನ್ನಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಮಾಧ್ಯಮ ನೀತಿಗಳನ್ನು ರೂಪಿಸುತ್ತದೆ ಎನ್ನುವುದು ನಮ್ಮ ಭರವಸೆ.

ಇಂಥ ಭರವಸೆ, ನಂಬಿಕೆಗಳ ಪಥದಲ್ಲೆ ಇನ್ನಷ್ಟು ದೃಢವಾದ ಹೆಜ್ಜೆ ಇಡಲು, ‘ಕ್ಷಣ ಕ್ಷಣಕ್ಕೂ ಸುದ್ದಿ’ ನೀಡುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ನಾವು ಸಂಕಲ್ಪ ಮಾಡಿದ್ದೇವೆ. ಇದರ ಭಾಗವಾಗಿಯೇ ‘ಜಸ್ಟ್ ಕನ್ನಡ’ ಹೊಸ ಕಚೇರಿಯನ್ನು ಹೊಂದುತ್ತಿದೆ. 2023 ಡಿಸೆಂಬರ್ 14ರ ಗುರುವಾರ ಆರಂಭವಾಗುತ್ತಿರುವ ಈ ಕಚೇರಿ ಜಸ್ಟ್ ಕನ್ನಡದ ಸಂಪರ್ಕ ಜಾಲವನ್ನು, ಓದುಗರೊಂದಿಗಿನ ಸಂಬಂಧ ಬಲವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದೇವೆ. ನಮ್ಮ ಯಶಸ್ಸಿಗೆ ಕಾರಣರಾದ ಓದುಗರಿಗೆ, ಎಲ್ಲಾ ಹಿತೈಷಿಗಳಿಗೆ ಕೃತಜ್ಞತೆಗಳು.