ರಂಜ-ಸುರಗಿ-1

Promotion

ರಂಜ-ಸುರಗಿ

ಮೈಸೂರು,ಡಿಸೆಂಬರ್,24,2020(www.justkannada.in): ನನ್ನ ಗೆಳತಿ ಅಂಕಣ ಬರೆಯಲು ಶುರುಮಾಡು ಎಂದು ಪ್ರೋತ್ಸಾಹದ ಸಲಹೆ ನೀಡಿದಾಗ ಮೊದಲು ಮನಸ್ಸಿಗೆ ಬಂದಿದ್ದೇ ನನ್ನ ಬಾಲ್ಯದ ದಿನಗಳು. ಅದೂ ವಿಶೇಷವಾಗಿ  ಪ್ರಕೃತಿಯ ಮಡಿಲಲ್ಲಿ  ಹೂವು-ಹಣ್ಣುಗಳೊಂದಿಗೆ ಕಳೆದ ದಿನಗಳು. ನೋಡಿದ್ದು, ಅನುಭವಿಸಿದ್ದು, ಓದಿದ್ದು, ನನ್ನನ್ನು ತಲ್ಲಣಿಸಿದ್ದು ಎಲ್ಲದರ ಬಗ್ಗೆ ಬರೆಯುವ ಆಸೆ/ಉದ್ದೇಶ ನನ್ನದು. ಒಣಗಿದರೂ ಪರಿಮಳ ಸೂಸುವ ಹೂಗಳು, ಘಮಘಮಿಸುವ ಹೂಗಳು ಹೀಗೆ ಎಲ್ಲಾ ಹೂಗಳ ಬಗ್ಗೆಯೂ ನನಗೆ ಬಹಳ ಕುತೂಹಲ. ನನ್ನ ಬೆಳಗು ಪ್ರಾರಂಭವಾಗುತ್ತಿದ್ದುದೇ ರಂಜದ ಹೂಗಳನ್ನು ಆಯಲು ಹೋಗುವುದರಿಂದ. ರಂಜದ ಹೂವಿಗೆ  ಬಕುಲ, ಚಿರಪುಷ್ಪ, ಮಧುಗಂಧ ಎಂಬ ಹೆಸರಿದೆ. ಇಂಗ್ಲಿಷಿನಲ್ಲಿ ಬುಲೆಟ್ ವುಡ್ ಟ್ರೀ ಎನ್ನುತ್ತಾರೆ. ಈಗೇನು ಬಿಡಿ, ಅಂತರ್ಜಾಲದಲ್ಲಿ ಎಲ್ಲಾ ಮಾಹಿತಿಗಳೂ ನಮ್ಮ ಕೈಬೆರಳಿಗೆ ಸಿಗುತ್ತವೆ. ಒಣಗಿದರೂ ಪರಿಮಳ ಮಾಸದ ಹೂಗಳಿವು. ಹಿತವಾದ ಸುಗಂಧ.  ಮರದಡಿ ಈ ಹೂಗಳು ಬಿದ್ದಿರುತ್ತಿದ್ದವು. ಸಂಜೆಯೇ ಬೀಳುತ್ತಿದ್ದವು. ಒಮ್ಮೊಮ್ಮೆ ನಾವೆಲ್ಲಾ- ನನ್ನ ತಂಗಿ, ಗೆಳತಿಯರು ಸಂಜೆಯೂ ಹೂಗಳನ್ನು ಆರಿಸುತ್ತಿದ್ದೆವು. ಒಂದೊಂದು ಮರಗಳ ಹೂಗಳೂ ವಿಭಿನ್ನ ಆಕಾರ-ಗಾತ್ರದವು. ಶುಭ್ರ ಬಿಳಿಯ ಬಣ್ಣದ ನಕ್ಷತ್ರಾಕಾರದ ದುಂಡಗಿನ ಹೂಗಳು, ಬಿಳಿ ಬಣ್ಣದ ಹೂಗಳಿಗೆ ಕಂದು ಬಣ್ಣದ ಅಂಚು ಇರುವಂತಹದು, ಚೂಪಾದ ಎಸಳುಗಳ ಹೂಗಳು ಅದಕ್ಕೆ ಅಂಚು, ಹೀಗೆ ಒಂದೊಂದು ಮರದ ಹೂವೂ ಭಿನ್ನ-ಭಿನ್ನ ಆಕಾರದವು. ಹೀಗೆ ಆಯ್ದುಕೊಂಡು ಬಂದ ಹೂಗಳನ್ನು ಮಾಲೆ ಮಾಡುವುದು. ಮಾಲೆ ಮಾಡುವುದೆಂದರೆ ತೆಂಗಿನ ಗರಿಗಳ ಅಂಚಿನಿಂದ ತೆಳುವಾದ ನಾರನ್ನು ತೆಗೆದು ಹೂವಿನ ಮಧ್ಯದಲ್ಲಿರುವ ರಂಧ್ರಗಳನ್ನು ನಾರಿಗೆ ತೂರಿಸುವುದು.  ಹೀಗೆ ಮಾಲೆ ಮಾಡುವುದಕ್ಕೆ ‘ಸುರಿಯುವುದು’ ಎನ್ನುತ್ತೇವೆ ನಮ್ಮ ಕಡೆ. ಈ ಹೂಗಳ ಜೊತೆಗಿನ ನನ್ನ ಒಡನಾಟವನ್ನು ಉತ್ಸಾಹದಿಂದ ಗೆಳತಿಯೊಬ್ಬರಿಗೆ ವಿವರಿಸುತ್ತಿದ್ದಾಗ ‘ಸುರಿಯುವುದು’ ಎಂಬ ಪದ ಕೇಳಿ  ಅಲ್ಲೇ ಇದ್ದ ಅವರ ಪತಿ ಇದು ಯಾವ ಪದ ಎಂಬಂತೆ ಅಚ್ಚರಿಯಿಂದ ನೋಡಿದರು. ನನ್ನ ಗೆಳತಿ ‘ಸುರಿಯುವುದು’ ಎಂದರೆ ಪೋಣಿಸುವುದು ಎಂದು ‘ಅನುವಾದ’ ಮಾಡಿ ತಿಳಿಸಿದರು. ಬೇರೆ ಬೇರೆ ಪ್ರದೇಶದಲ್ಲಿ ಭಾಷೆ ಹೇಗೆ  ಬಳಕೆಯಾಗುತ್ತದೆ ಎಂಬುದೂ ಸೋಜಿಗದ ವಿಚಾರವೇ. ಈ ಮಾಲೆಗಳನ್ನು ಮನೆಯವರೆಲ್ಲರೂ ಮುಡಿಯುವುದಲ್ಲದೇ ಪಟಗಳಿಗೆ ಹಾಕುತ್ತಿದ್ದೆವು. ಮುಡಿದ ಹೂವಿನ ಪರಿಮಳ, ಹೂವನ್ನು ತಲೆಯಿಂದ ತೆಗೆದರೂ ತಲೆಗೂದಲಿನಲ್ಲಿ ಯಾವಾಗಲೂ ಉಳಿದಿರುತ್ತಿತ್ತು. ಮರದಲ್ಲಿ ಬಿಡುವ ಹಣ್ಣುಗಳನ್ನೂ ತಿನ್ನಬಹುದಾಗಿತ್ತು. ಈ ಮರದ ಔಷಧೀಯ ಗುಣಗಳು ಮತ್ತು ಉಪಯೋಗದ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ.

ಸುರಗಿ ಹೂವನ್ನು ನೋಡಿದ್ದೇನೆ, ಮುಡಿದಿದ್ದೇನೆ. ಇದು ರಂಜದ ಹೂವಿಗಿಂತ ಹೆಚ್ಚು ಪರಿಮಳ ಸೂಸುವಂತಹದು. ಸಂಪಿಗೆಯಂತೆ ಗಾಢ, ತೀಕ್ಷ್ಣ ಪರಿಮಳ.  ಪರಿಮಳವನ್ನೂ ದಾಖಲಿಸಿ ಹಂಚಿಕೊಳ್ಳುವಂತಿದ್ದರೆ ಎಂದು ಕಾಡಿನಲ್ಲಿ ಓಡಾಡುವಾಗ, ಬತ್ತದ ಗದ್ದೆಯ ಬಳಿ ಪೈರು ಕೊಯಿಲಿಗೆ ಬಂದ ಸಮಯದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದಾಗ, ಅದರ ಗಂಧ- ಘಮ ಗಾಳಿಯಲ್ಲಿ ಮೂಗಿಗೆ ತಾಕಿದಾಗ  ಅನ್ನಿಸಿದೆ. ಚಿಕ್ಕಂದಿನಲ್ಲಿ ಕಾಡಿನಲ್ಲಿ, ಬೆಟ್ಟದಲ್ಲಿ ಅಲೆದೇ ಕಾಲ ಕಳೆದ, ಓದು-ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಳ್ಳದ ಆ ದಿನಗಳ ನೆನಪು ಇನ್ನೂ ಇನ್ನೂ ಹಸಿರಾಗಿದೆ.  ಈ ಹೂವನ್ನು ಸಂಗ್ರಹಿಸಿ ಪೋಣಿಸಿದ ಅನುಭವ ನನಗಿಲ್ಲ. ಅದನ್ನು ಮರ ಹತ್ತಿ ಕೀಳಬೇಕಾಗಿತ್ತು. ಕನ್ನಡದ ಪ್ರಖ್ಯಾತ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಯು.ಆರ್. ಅನಂತಮೂರ್ತಿಯವರ ಆತ್ಮಕಥನದ ಹೆಸರೂ ‘ಸುರಗಿ’ ಎಂದು. ಒಣಗಿದರೂ ಬಹುಕಾಲ ಪರಿಮಳ ಬೀರುವಂತಹ ಹೂವೆಂದೇ ಆ ಹೆಸರು ನೀಡಿರುವುದಾಗಿ ಹೇಳಿದ್ದಾರೆ.

ಪರಿಮಳವಿಲ್ಲದ ಹೂಗಳಾದ ಗೊರಟೆ, ಅಬ್ಬಲ್ಲಿಗೆ (ಕನಕಾಂಬರ) ಹೂಗಳೆಂದರೂ ಬಹಳ ಆಸೆ. ಮನೆಯ ಹತ್ತಿರದ ಬೇಲಿ ಹಾಕಿದ ತೋಟದಲ್ಲಿ ಬಿಳಿ, ಕೆನ್ನೇರಳೆ, ಹಳದಿ, ಕಡುನೀಲಿ, ನೀಲಿ ಮತ್ತು ಬಿಳಿ ಬಣ್ಣದ ಕಾಂಬಿನೇಶನ್ ಇರುವ ವಿವಿಧ ಗೊರಟೆ ಹೂವುಗಳು ಅರಳಿ ನನ್ನನ್ನು ಸೆಳೆಯುತ್ತಿದ್ದವು. ನನಗಾಗ ಹತ್ತು ವರ್ಷ ಇರಬಹುದು.  ನನಗದನ್ನು ಕಿತ್ತುಕೊಂಡು ಬರಬೇಕೆಂದು ಬಹಳ ಆಸೆಯಾಗುತ್ತಿತ್ತು. ಕೀಳುವಂತಿರಲಿಲ್ಲ. ನಮ್ಮ ಮನೆಯ ಬಳಿ ದೇವಸ್ಥಾನವಿತ್ತು. ದೇವಸ್ಥಾನಕ್ಕೆ ಸೌಭಾಗ್ಯಮ್ಮ ಎನ್ನುವವರು ಹೂಮಾಲೆ ಮಾಡಿ ಕೊಡುತ್ತಿದ್ದರು. ಬೆಳಗಿನ ಹೊತ್ತು ಹೂಕಟ್ಟಲು ಅವರಿಗೆ ಪುರುಸೊತ್ತಿರುತ್ತಿರಲಿಲ್ಲ. ನನಗೆ ಹೂಕಟ್ಟಲು ಹೇಳಿದರೆ ಸಂತೋಷದಿಂದ ಹೂಗಳನ್ನು ಕಟ್ಟಿ ಕೊಡುತ್ತಿದ್ದೆ. ಮನೆಯಲ್ಲಿ ಅಮ್ಮ ನನ್ನನ್ನು ಕರೆದರೆ ಅಲ್ಲಿ ನಾನಿರುತ್ತಿರಲಿಲ್ಲ. ಹೂಕಟ್ಟಿದ ನಂತರ ಮನೆಗೆ ಹೋದಾಗ ಅಮ್ಮನಿಂದ ‘ಮನೆಗೆ ಮಾರಿ ಪರರಿಗೆ ಉಪಕಾರಿ’ ಎಂದು ಬೈಸಿಕೊಡಿದ್ದೆ ಒಮ್ಮೆ.

ಶ್ರಾವಣ ಮಾಸ ಅಥವಾ ತುಳುನಾಡಿನವರ ಸೌರಮಾನ ಪದ್ಧತಿಯ ಸೋಣ ತಿಂಗಳಿನಲ್ಲಿ ಮನೆಯಲ್ಲಿ ಹೊಸಿಲು, ಬಾಗಿಲು ಎಲ್ಲಾ ತೊಳೆದು ವಿವಿಧ ಹೂಗಳಿಂದ ಅಲಂಕರಿಸಿ, ರಂಗೋಲಿ ಬರೆದು ಹೊಸಿಲಿಗೆ ಪೂಜೆ ಮಾಡುತ್ತಾರೆ. ಈ ಪೂಜೆಗೆ  ಅಮ್ಮ ನೆಲಮಟ್ಟದಲ್ಲಿ ಅರಳುವ ಪುಟ್ಟ ಪುಟ್ಟ ಹೂಗಳನ್ನು ಕಿತ್ತು ತರಲು ಹೇಳಿದರೆ ನಮಗೆಲ್ಲಾ ಬಹಳ ಸಂಭ್ರಮ. ಸೋಣೆ ಹೂವು, ಮದಿಮಾಳ್ ಪೂ (ಮದುಮಗಳು ಹೂವು), ಪೊದ್ದೊಳು ಪೂ (ಅರಳಿನ ಆಕಾರದ ಹೂ),ಸೀತಾಮುಡಿ, ಜರೀಗಿಡದ ಎಲೆಗಳು ಹೀಗೆ ತರಹಾವರಿ ಹೂಗಳನ್ನು ತರುತ್ತಿದ್ದೆವು. ಸೃಷ್ಟಿಯ ಸೊಬಗನ್ನು ಆಸ್ವಾದಿಸುವ  ಪರಿಯನ್ನು ನಮ್ಮ ಹಿರಿಯರು ಹೀಗೆ ಕಂಡುಕೊಂಡಿದ್ದಾರೆ! ಕೃಷ್ಣಾಷ್ಟಮಿಗೆ ಅಪ್ಪ ಪೂಜೆಗೆ ವಿಷ್ಣುಕ್ರಾಂತಿ (ಹೂಗಳ ಸಮೇತ ಎಲೆ ಸೇರಿದಂತೆ) ತರಲು ಹೇಳುತ್ತಿದ್ದರು  ಗುಡ್ಡ ಅಲೆಯುವ ಅವಕಾಶ ಸಿಕ್ಕಿದರೆ ಯಾರಿಗೆ ಬೇಡ? ಅದನ್ನು ಎಲ್ಲಿದ್ದರೂ ಹುಡುಕಿ ತರುತ್ತಿದ್ದೆವು. ಒಬ್ಬಳೇ ಗುಡ್ಡ ಅಲೆಯಲೂ ಭಯವಿರಲಿಲ್ಲ ಆಗ. ಅಜ್ಜನ ಮನೆಗೆ ಹೋದರೆ ಶುಕ್ರವಾರದ ಪೂಜೆಗೆ ಚಿಕ್ಕಮ್ಮನ ಜೊತೆ ಗುಡ್ಡದಲ್ಲಿನ ಕೇಪಳ (ಗುಡ್ಡ ದಾಸವಾಳ-Ixora) ಹೂಗಳನ್ನು ತರಲು ಹೋಗುತ್ತಿದ್ದುದೂ ಒಂದು ಮರೆಯಲಾಗದ ಅನುಭವ. ಈಗಲೂ ಸಣ್ಣ ಹೂಗಳನ್ನು ಗಮನಿಸುತ್ತೇನೆ. ಕಾಡಿನಲ್ಲಿ ಕಾಣಸಿಗುವ ಗಡಿಯಾರದ ಹೂವು, ಗೌರಿ ಹೂವು, ಹೀಗೆ ಹೇಳುತ್ತಿದ್ದರೆ ಇದಕ್ಕೆ ಕೊನೆಯೇ ಇಲ್ಲವೇನೋ….. ಹೀಗೆ ಹೂಗಳ ಸೊಬಗು…..ಹೂಗಳ ಬಗ್ಗೆ ಬರೆಯುತ್ತಿರುವಾಗ ಕವಯತ್ರಿ ಸವಿತಾ ನಾಗಭೂಷಣ ಇವರ  ‘ಹೂವಿನ ಧ್ಯಾನ’ದ ಈ ಸಾಲುಗಳು ನೆನಪಿಗೆ ಬಂದವು.

“ ಹೂವಿನ ಧ್ಯಾನವೆ ಧ್ಯಾನ

ಅದು ಪರಿಮಳಿಸಿ

ಲೋಕವ ವ್ಯಾಪಿಸುವುದು”

ಕೆ.ಪದ್ಮಾಕ್ಷಿ