ಮೈಸೂರು ನಗರ ಪೋಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್.

ಮೈಸೂರು,ನವೆಂಬರ್, 29,2021(www.justkannada.in): ಕಳ್ಳತನ, ದರೋಡೆ, ಸುಲಿಗೆ ಇಂತಹ ಪ್ರಕರಣಗಳಲ್ಲಿ ಮೈಸೂರು ನಗರ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.

ಮೈಸೂರು ನಗರ ಪೋಲೀಸ್ ಆಯುಕ್ತ ಕಚೇರಿ ಆವರಣದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ವಶಪಡಿಸಿಕೊಳ್ಳಲಾದ ವಸ್ತುಗಳನ್ನ ವಾರಸುದಾರರಿಗೆ ಹಿಂತಿರುಗಿಸಿದರು. ಪ್ರಾಪರ್ಟಿ ರಿರ್ಟನ್ ಬಳಿಕ ಪೊಲಿಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಪೊಲಿಸ್ ಆಯುಕ್ತ ಚಂದ್ರಗುಪ್ತ,. ಅತ್ಯಂತ ಕ್ಲಿಷ್ಟವಾದ ಪ್ರಕರಣಗಳನ್ನ ನಮ್ಮ ಸಿಬ್ಬಂದಿ ಬೇದಿಸಿದ್ದಾರೆ. ಇನ್ನೂ ಹಲವು ಪ್ರಕರಣಗಳು ಸಹ ಬಾಕಿ ಇದೆ. 2020 ರಿಂದ 21 ರವರೆಗೆ ಪತ್ತೆಯಾದ ಸ್ವತ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 676 ಪ್ರಕರಣ ದಾಖಲಾಗಿತ್ತು.  ಈ ಪೈಕಿ 324 ಪ್ರಕರಣಗಳು ಪತ್ತೆ ಆಗಿದೆ. ಈ ವೇಳೆ 7 ಕೋಟಿ ಸ್ವತ್ತುಗಳು ಕಳವಾಗಿದ್ದವು. 5.06 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹಿಂದಿರುಗಿಸಲಾಗುತ್ತಿದೆ.  301 ಆರೋಪಿಗಳು ಬಂಧಿಸಲಾಗಿತ್ತು. ಅವರುಗಳ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.

2020-21 ರಲ್ಲಿ ಸಾಕಷ್ಟು ಜನ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ಥ ವಾಗಿತ್ತು. ಕೋವಿಡ್ ಭೀತಿ ನಡುವೆಯೂ ಪ್ರಕರಣಗಳನ್ನ ನಮ್ಮ ಅಧಿಕಾರಿಗಳು ಭೇದಿಸಿ ತಮ್ಮ ಕಾರ್ಯಕ್ಷಮತೆ ಮೆರೆದಿದ್ದಾರೆ. ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಾವುದೇ ಬೇಜವಾಬ್ದಾರಿಯುತ ತೋರದೆ ಕೆಲಸ ಮಾಡಲಾಗಿದೆ. ಉಳಿದ ಪ್ರಕರಣ ಸಹ ಭೇದಿಸಲು ಕಾರ್ಯಚರಣೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ತಿಳಿಸಿದರು.

6.5 ಕೆ.ಜಿ ಚಿನ್ನ, 8.2 ಕೆ.ಜಿ ಬೆಳ್ಳಿ, 196 ದ್ವಿಚಕ್ರ ವಾಹನ, 6 ಕಾರು, 10 ಇತರೆ ವಾಹನಗಳು, 49 ಮೊಬೈಲ್, 2 ಲ್ಯಾಪ್ ಟಾಪ್, 309 ಕೆ ಜಿ ಗಂಧದ ತುಂಡು, 18.7 ಲಕ್ಷ ನಗದನ್ನು ಹಿಂತಿರುಗಿಸಲಾಗಿದೆ. 4 ದರೋಡೆ, 7 ಸುಲಿಗೆ, 34 ಸರಕಳ್ಳತನ, 47 ಹಗಲು ರಾತ್ರಿ ಕನ್ನ ಕಳವು, 9 ಮನೆಕಳ್ಳತ‌ನ, 5 ಮನೆಗೆಲಸದವರು ಮಾಡಿದ್ದ ಕಳ್ಳತನ, 212 ವಾಹನಗಳ ಕಳ್ಳತನ, 35 ಸಾಮಾನ್ಯ, 5 ಅರಣ್ಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆಯಾಗಿದ್ದವು. ಈ ವೇಳೆ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ವಾಪಸ್ ನೀಡಿಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ  ಚಂದ್ರಗುಪ್ತ ತಿಳಿಸಿದರು. ಡಿಸಿಪಿಗಳಾದ ಗೀತಾ ಪ್ರಸನ್ನ, ಪ್ರದೀಪ್ ಗುಂಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

Key words: Property- Return -Parade – Mysore City Police.