ಭಾರತದ ಅತಿದೊಡ್ಡ ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕಲು ಕರ್ನಾಟಕ ಸರ್ಕಾರ ಯತ್ನ- ರಂದೀಪ್ ಸಿಂಗ್ ಸುರ್ಜೇವಾಲಾ ಆರೋಪ.

ನವದೆಹಲಿ,ನವೆಂಬರ್,13,2021(www.justkannada.in):  ಬಿಟ್ ಕಾಯಿನ್ ಹಗರಣ ಭಾರತದ ಅತಿದೊಡ್ಡ ಬಿಟ್ ಕಾಯಿನ್ ಹಗರಣವಾಗಿದ್ದು ಈ ಹಗರಣವನ್ನ ಮುಚ್ಚಿ ಹಾಕಲು ಕರ್ನಾಟಕ ಸರ್ಕಾರ ಯತ್ನಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ‘ಆಪರೇಷನ್ ಬಿಟ್‌ ಕಾಯಿನ್ ಹಗರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸುವ ಬದಲು ಕರ್ನಾಟಕ ಬಿಜೆಪಿ ಸರ್ಕಾರ ಅದನ್ನ ಮುಚ್ಚಿಹಾಕಲು’ ಯತ್ನಿಸುತ್ತಿದೆ. ಬಿಟ್‌ ಕಾಯಿನ್ ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಸರ್ಕಾರ ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ. ದೇಶದ್ರೋಹಕ್ಕೆ ಸಂಬಂಧಪಟ್ಟಂತಹ ಈ ಹಗರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳಾದ ಎನ್‍ಐಎ, ಸಿಬಿಐ, ಜಾರಿ ನಿರ್ದೇಶನಾಲಯಗಳಿಂದ ತನಿಖೆಯಾಗದಂತೆ ತಡೆಯಲಾಗುತ್ತಿದೆ. ಅಂತಾರಾಷ್ಟ್ರೀಯ ಇಂಟರ್‍ ಪೋಲ್‍ ಗೂ ಮಾಹಿತಿ ನೀಡುತ್ತಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ದೂರಿದರು.

ಹಗರಣದ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಹೇಳಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಹಗರಣದ ಬಗ್ಗೆ ಬಿಜೆಪಿ ಉದ್ದೇಶಪೂರ್ವಕವಾಗಿ ಸತ್ಯ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾದರೆ ಮಾತ್ರ ಸತ್ಯಾಂಶ ಹೊರ ಬರಲು ಸಾಧ್ಯ ಎಂದು  ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

Key words: Karnataka -government -attempts – bitcoin- scam-Randeep Singh Surjewala -accused.