ಬೆಂಗಳೂರಿನ ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸುವ ಕಾಮಗಾರಿಗಳ ವೆಚ್ಚ ಮೂರು ಪಟ್ಟು ಹೆಚ್ಚಳ

ಬೆಂಗಳೂರು, ಡಿಸೆಂಬರ್ 27, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರದ ೮೪೨ ಕಿ.ಮೀ. ಉದ್ದದ ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸಲು ಯೋಜಿಸಿದ್ದು ಈವರೆಗೆ ಅರ್ಧದಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಇದಕ್ಕಾಗಿ ಈವರೆಗೆ ರೂ.೧,೬೫೮ ಕೋಟಿ ವೆಚ್ಚ ಮಾಡಿದೆ. ಇನ್ನೂ ಅರ್ಧ ಕಾಮಗಾರಿಗಳು ಬಾಕಿ ಉಳಿದಿದ್ದು, ಈ ಕಾಮಗಾರಿಗಳನ್ನು ಈಗ ಪೂರ್ಣಗೊಳಿಸುವ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆಯಂತೆ.

ಗಮನಿಸಿ: ಬಿಬಿಎಂಪಿಯು ಈವರೆವಿಗೂ ಬೆಂಗಳೂರು ನಗರದ ೪೨೮ ಕಿ.ಮೀ. ಉದ್ದದಷ್ಟು ಚರಂಡಿಗಳನ್ನು ದುರಸ್ತಿ ಪಡಿಸಿದೆ. ಇದರಲ್ಲಿ ಚರಂಡಿಗಳ (ರಾಜಕಾಲುವೆಗಳು) ಹೂಳೆತ್ತುವುದು, ಎರಡೂ ಕಡೆ ತಡೆಗೋಡೆ ನಿರ್ಮಾಣವೂ ಸೇರಿದೆ. ಇದಕ್ಕೆ ಒಟ್ಟು ರೂ.೧,೬೫೮ ಕೋಟಿ ವೆಚ್ಚವಾಗಿದೆ. ಇನ್ನುಳಿದ ೪೧೪ ಕಿ.ಮೀ. ಉದ್ದ ರಾಜಕಾಲುವೆಗಳನ್ನು ದುರಸ್ತಿಪಡಿಸಲು ಒಟ್ಟು ವೆಚ್ಚ ತ್ರಿಗುಣಗೊಂಡಿದ್ದು ಈಗ ಅದಕ್ಕೆ ರೂ.೪೬೭೦ ಕೋಟಿ ಬೇಕಾಗುತ್ತದಂತೆ.

ಒಟ್ಟಾರೆ ಬೆಂಗಳೂರು ನಗರದಲ್ಲಿರುವ ೮೪೨ ಕಿ.ಮೀ.ಗಳಷ್ಟು ಉದ್ದ ರಾಜಕಾಲುವೆಗಳ ಮರುವಿನ್ಯಾಸಕ್ಕೆ ತಗುಲುವ ವೆಚ್ಚ ಬರೋಬ್ಬರಿ ರೂ.೬,೩೨೮ ಕೋಟಿಗಳಂತೆ.

ಈ ಅಂಕಿ-ಅಂಶಗಳನ್ನು ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಬಹಿರಂಗಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಹಾಗೂ ಬೆಂಗಳೂರಿನ ಮಾಜಿ ಮಹಾಪೌರರಾದ ಪಿ.ಆರ್. ರಮೇಶ್ ಅವರು ಬೆಳಗಾವಿಯಲ್ಲಿ ನಡೆದಂತಹ ಚಳಿಗಾಲದ ಪರಿಷತ್ ಅಧಿವೇಶನದಲ್ಲಿ ಕೇಳಿದಂತಹ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಸ್ವತಃ ಉತ್ತರಿಸಿದ್ದಾರೆ.

ಬೊಮ್ಮಾಯಿ ಅವರ ಉತ್ತರದ ಪ್ರಕಾರ ಬಿಬಿಎಂಪಿ ಈ ಕಾಮಗಾರಿಗಾಗಿ ರೂ.೨,೦೯೬ ಕೋಟಿ ಪಡೆದಿದೆ. ಇದರಲ್ಲಿ ಬಹುಪಾಲು ರಾಜ್ಯ ಸರ್ಕಾರದ ಪಾಲಿದೆ. ಇದರಲ್ಲಿ ಹೆಬ್ಬಾಳ ಕಣಿವೆ. ವೃಷಭಾವತಿ ಕಣಿವೆ, ಕೋರಮಂಗಳ ಕಣಿವೆ ಮತ್ತು ಚಳ್ಳಘಟ್ಟ ಕಣಿವೆ ಈ ನಾಲ್ಕು ಪ್ರಮುಖ ರಾಜಕಾಲುವೆ ಸಂಪರ್ಕಜಾಲಗಳನ್ನು ಮರುವಿನ್ಯಾಸಪಡಿಸುವ ಕಾಮಗಾರಿಗಳು ಇದರಲ್ಲಿ ಸೇರಿದೆ. ಈ ಪೈಕಿ ಈವರೆಗೂ ರೂ.೧,೬೫೮ ಕೋಟಿ ವೆಚ್ಚ ಮಾಡಲಾಗಿದೆ. ಈ ನಾಲ್ಕು ಕಣಿವೆಗಳಡಿ ಬರುವ ಒಟ್ಟು ರಾಜಕಾಲುವೆಗಳ ಉದ್ದ ೮೪೨ ಕಿ.ಮೀ. ಇದರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಚರಂಡಿಗಳೂ ಸೇರಿವೆ.

ಬಿಬಿಎಂಪಿಯು ಈವರೆವಿಗೂ ೪೨೮ ಕಿ.ಮೀ. ಉದ್ದದಷ್ಟು ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸಿದ್ದು, ಉಳಿದ ೪೧೪ ಕಿ.ಮೀ.ಗಳ ರಾಜಕಾಲುವೆಗಳ ಮರುವಿನ್ಯಾಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ಬಿಬಿಎಂಪಿ ಪ್ರಕಾರ ಹಣಕಾಸಿನ ಲಭ್ಯತೆಯನ್ನು ಗಮನಿಸಿ ಉಳಿದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು, ಇದಕ್ಕೆ ರೂ.೪,೬೭೦ ಕೋಟಿಗಳ ಅಗತ್ಯವಿದೆ,” ಎನ್ನಲಾಗಿದೆ.

ಆದರೆ ರಮೇಶ್ ಅವರಿಗೆ ಮುಖ್ಯಮಂತ್ರಿಗಳ ಈ ಉತ್ತರ ತೃಪ್ತಿ ತರಲಿಲ್ಲ. ಅವರು ತಮ್ಮ ಮಹಾಪೌರರ ಅವಧಿ ೨೦೦೩-೦೪ರಲ್ಲಿ ಅಂತ್ಯಗೊಂಡಿದ್ದು, ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸುವ ಕಾಮಗಾರಿಗೆ ತುಂಬಾ ಹೆಚ್ಚಿನ ಪ್ರಮಾಣದ ಹಣ ವ್ಯಯಿಸಲಾಗಿದೆ ಎಂದರು. “ಬಿಬಿಎಂಪಿಯು ೮೪೨ ಕಿ.ಮೀ.ಗಳ ಪೈಕಿ ಅರ್ಧದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದು ನೋಡಿ ನನಗೆ ದಿಗ್ಬ್ರಮೆಯಾಗಿದೆ. ಇದರಿಂದ ರಾಜಕಾಲುವೆಗಳನ್ನು ಮರುವಿನ್ಯಾಸಪಡಿಸುವ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕರ ಹಣ ಹೇಗೆ ದುರುಪಯೋವಾಗುತ್ತಿದೆ ಎಂದು ತಿಳಿಯುತ್ತದೆ,” ಎಂದರು.

ಕಳೆದ 15 ವರ್ಷಗಳಲ್ಲಿ ರಾಜಕಾಲುವೆಗಳ (ಚರಂಡಿಗಳು) ದುರಸ್ತಿಗೆ ಸಂಬಂಧಿಸಿದಂತೆ ಸರ್ಕಾರ ಖರ್ಚು ಮಾಡಿರುವ ಒಟ್ಟು ವೆಚ್ಚವೆಷ್ಟು ಎನ್ನುವುದಕ್ಕೆ ಸಂಬಂಧಿಸಿದಂತೆ ಒಂದು ಲೆಕ್ಕಪರಿಶೋಧನೆ ನಡೆಸಿ ವರದಿಯನ್ನು ಸಿದ್ಧಪಡಿಸುವಂತೆ ರಮೇಶ್ ಅವರು ಒತ್ತಾಯಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  redesigning -Bangalore’s- rajakaluve- works – cost- tripled.