ಬಿಟಿಎಸ್-2021: ಮೊದಲ ಬಾರಿಗೆ ಯುಎಇ, ವಿಯಟ್ನಾಂ. ಆಫ್ರಿಕಾ, ಯೂರೋಪಿಯನ್ ಒಕ್ಕೂಟ ಭಾಗಿ- ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು,ನವೆಂಬರ್,12,2021(www.justkannada.in):  ನವೆಂಬರ್ 17ರಿಂದ 19ರವರೆಗೆ ನಗರದಲ್ಲಿ ನಡೆಯಲಿರುವ 24ನೇ ವರ್ಷದ `ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ (ಬಿಟಿಎಸ್-2021) ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಸರಕಾರದ ಜಾಗತಿಕ ನಾವೀನ್ಯತಾ ಮೈತ್ರಿಕೂಟವು (ಜಿಐಎ) ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಮುಂದಡಿ ಇಡಲಾಗಿದೆ ಎಂದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಪ್ರಥಮ ಬಾರಿಗೆ ಅಮೆರಿಕ-ಭಾರತ ವಾಣಿಜ್ಯ ಸಮಿತಿ ಮತ್ತು ವರ್ಚುಯಲ್ ರೂಪದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಾಣಿಜ್ಯ ವಿಚಾರ ವಿನಿಮಯ ಶೃಂಗಸಭೆಯ ಮತ್ತು ಬಿಟಿಎಸ್ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜತೆಗಿನ ಸಹಭಾಗಿತ್ವವು ನಾವೀನ್ಯತೆಯ ಕ್ಷೇತ್ರದಲ್ಲಿ ಮತ್ತಷ್ಟು ಅಂತಾರಾಷ್ಟ್ರೀಯ ಸರಕಾರಕ್ಕೆ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು. ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ.

ಜಾಗತಿಕ ಹೂಡಿಕೆ ಮೈತ್ರಿಕೂಟದ ಭಾಗವಾಗಿ ಆಸ್ಟ್ರೇಲಿಯಾ ನ್ಯೂಸೌತ್ ವೇಲ್ಸ್ ಪ್ರಾಂತ್ಯದ ಉದ್ಯೋಗ, ಹೂಡಿಕೆ ಮತ್ತು ಪ್ರವಾಸೋದ್ಯಮ ಸಚಿವ ಸ್ಟುವರ್ಟ್ ಏಯರ್ಸ್, ಜರ್ಮನಿಯ ನಾರ್ತ್ ರೀನ್-ವೆಸ್ಟ್ ಫಾಲಿಯಾ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ ಮತ್ತು ಡಿಜಿಟಲೀಕರಣ ಸಚಿವ ಪ್ರೊ.ಆಂಡ್ರಿಯಾಸ್ ಪಿಂಕ್ ವರ್ಟ್, ಫಿನ್ಲೆಂಡಿನ ಸಾರಿಗೆ ಮತ್ತು ಸಂಪರ್ಕ ಸಚಿವ ಟಿಮೋ ಹರಕ್ಕಾ ಹಾಗೂ ವಿಯಟ್ನಾಂನ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಮಾಜಿ ಸಚಿವ ನುಯೆನ್ ಕ್ವಾನ್ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

ಇದಲ್ಲದೆ, ಜಾಗತಿಕ ಮಟ್ಟದಲ್ಲಿ ತಮ್ಮ ತಾಂತ್ರಿಕ ಪರಿಣತಿಗೆ ಹೆಸರಾಗಿರುವ ಅಮೆರಿಕದ ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಎಎಫ್) ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರೊ.ಕ್ಲಾಸ್ ಶ್ವಾಬ್, ಭಾರತೀಯ ಮೂಲದ ವಿಜ್ಞಾನಿ ಮತ್ತು ಲೇಖಕ ಡಾ.ಸಿದ್ಧಾರ್ಥ ಮುಖರ್ಜಿ, ಚೆಕ್ ಪಾಯಿಂಟ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಗಿಲ್ ಶ್ವೆಡ್, ಆಪರೇಷನ್ಸ್ ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಕಿಂಡ್ರೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಮತ್ತು ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಸೇರಿದಂತೆ 75ಕ್ಕೂ ಹೆಚ್ಚು ಆಹ್ವಾನಿತರು ವಿಚಾರಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯದ ಹತ್ತಾರು ಧಾರೆಗಳಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಹೊಂದುವುದು ರಾಜ್ಯದ ಉದ್ದೇಶವಾಗಿದ್ದು, ಜಿಐಎ ಇದನ್ನು ನನಸು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯೂರೋಪಿಯನ್ ಒಕ್ಕೂಟದೊಂದಿಗೆ ಇದೇ ಮೊದಲ ಬಾರಿಗೆ ನವೋದ್ಯಮಗಳನ್ನು ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗುತ್ತಿದೆ. ಈ ಮೂಲಕ ರಾಜ್ಯವು ಜಾಗತಿಕ ಮಟ್ಟದಲ್ಲಿ ತನ್ನ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರಲಿಯಾ, ಡೆನ್ಮಾರ್ಕ್, ಫಿನ್ಲೆಂಡ್, ಜರ್ಮನಿ, ಜಪಾನ್, ಲಿಥುವೇನಿಯಾ, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಯೂರೋಪಿಯನ್ ಒಕ್ಕೂಟಗಳ ಕೌನ್ಸಲ್ ಜನರಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ‌.ಭಾಗವಹಿಸಿದ್ದರು.

ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಎಸ್ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮತ್ತು  ನವೋದ್ಯಮ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮಾತನಾಡಿದರು.

ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣಕ್ಕೆ ಒತ್ತು

ಬಿಟಿಎಸ್-2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ಕಡೆಗೆ ಗಮನ ಹರಿಸಲಾಗುವುದು. ಈ ಬಾರಿಯ ಶೃಂಗದಲ್ಲಿ ಆಸ್ಟ್ರೇಲಿಯಾ, ಪೆನ್ಸಿಲ್ವೇನಿಯಾ, ಯುನೈಟೆಡ್ ಕಿಂಗ್ ಡಂ, ಟೊರಾಂಟೋ ಬಿಜಿನೆಸ್ ಡೆವಲಪ್ಮೆಂಟ್ ಸೆಂಟರ್, ಜರ್ಮನಿ ಮತ್ತು ಅಮೆರಿಕ ದೇಶಗಳ ವರ್ಚುಯಲ್ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

`ಸಿಡ್ನಿ ಡೈಲಾಗ್ ಶೃಂಗ’ದ ಲಾಭ

ಬಿಟಿಎಸ್-2021 ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಇದೇ ತರಹದ `ಸಿಡ್ನಿ ಡೈಲಾಗ್ ಸಮಿಟ್’ ಏರ್ಪಾಡಾಗಿದೆ. ಹೀಗಾಗಿ, ಅಲ್ಲಿನ ಚಟುವಟಿಕೆಗಳನ್ನು ಬಿಟಿಎಸ್ ವೇದಿಕೆಯಲ್ಲಿ ಮತ್ತು ಇಲ್ಲಿನ ಚಟುವಟಿಕೆಗಳನ್ನು ಅಲ್ಲಿರುವವರು ವೀಕ್ಷಿಸುವಂತೆ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು ನೆಕ್ಸ್ಟ್ ಸಿಇಒ ಸಮಾವೇಶ

ಬಿಟಿಎಸ್-2021ರಲ್ಲಿ ನ.17 ಮತ್ತು 18ರಂದು ಸಂಜೆ 5ರಿಂದ 7 ಗಂಟೆಯವರೆಗೆ ಬೆಂಗಳೂರಿನಲ್ಲಿ ತಂತ್ರಜ್ಞಾನ ಬೆಳವಣಿಗೆಗೆ ಸಂಬಂಧಿಸಿದಂತೆ ಇಡಬೇಕಾದ ಮುಂದಿನ ಹೆಜ್ಜೆಗಳನ್ನು ಕುರಿತು `ಬೆಂಗಳೂರು ನೆಕ್ಸ್ಟ್ ಸಿಇಒ’ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಇದರಲ್ಲಿ ಮೊದಲನೇ ದಿನ  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಷ್ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ, ಕ್ರಿಸ್ ಗೋಪಾಲಕೃಷ್ಣನ್, ಕಿಂಡ್ರೈಲ್ ಇಂಡಿಯಾದ ಮುಖ್ಯಸ್ಥ ಲಿಂಗರಾಜು ಸಾಹುಕಾರ್ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಲಿದ್ದಾರೆ.

ನ.18ರಂದು ಗ್ಲ್ಯಾನ್ಸ್ ಇನ್ಮೊಬಿ ಸಂಸ್ಥಾಪಕ ನವೀನ್ ತಿವಾರಿ, ಡೈಲಿಹಂಟ್ ಸಹ ಸಂಸ್ಥಾಪಕ ಉಮಾಂಗ್ ಬೇಡಿ, ಫೋನ್-ಪೇ ಸ್ಥಾಪಕ ಸಿಟಿಒ ರಾಹುಲ್ ಚಾರಿ, ರೇಜರ್-ಪೇ ಸ್ಥಾಪಕ ಶಶಾಂಕ್ ಕುಮಾರ್, ಅನ್ಅಕಾಡೆಮಿ ಸಹಸಂಸ್ಥಾಪಕ ಗೌರವ್ ಮುಂಜಾಲ್ ಸೇರಿದಂತೆ ಜಾಗತಿಕ ಮಟ್ಟದ  20ಕ್ಕೂ ಹೆಚ್ಚು ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಉದ್ಘಾಟನೆಗೆ ಉಪರಾಷ್ಟ್ರಪತಿ

24ನೇ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ನ.17ರ ಬೆಳಿಗ್ಗೆ 10ಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಐಟಿ ಮತ್ತು ಕೌಶಲ್ಯ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸರಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

Key words: BTS-2021- First time -UAE, Africa- European- Union -participant – Minister-Ashwath Narayan