ನಿಶ್ಚಿತ ಠೇವಣಿ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಎಸ್’ಬಿಐ

ನವದೆಹಲಿ, ಮಾರ್ಚ್ 11, 2020 (www.juskannada.in): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಶ್ಚಿತ ಠೇವಣಿ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದೆ.

ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದ್ದು, ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಇಳಿಕೆ ಮಾಡಿದಂತಾಗಿದೆ.

ನೂತನ ಬಡ್ಡಿದರ ಮಾರ್ಚ್ 10 ರಿಂದಲೇ ಜಾರಿಗೆ ಬಂದಿದ್ದು, ನೂತನ ಗ್ರಾಹಕರು ಹಾಗೂ ನಿಶ್ಚಿತ ಠೇವಣಿ ನವೀಕರಿಸುವವರಿಗೆ ಇದು ಅನ್ವಯವಾಗಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಈ ಮೊದಲು 7 ರಿಂದ 45 ದಿನಗಳ ನಿಶ್ಚಿತ ಠೇವಣಿ ಅವಧಿಗೆ ಶೇಕಡ 4.5 ಬಡ್ಡಿದರ ಪಡೆಯುತ್ತಿದ್ದವರು ಈಗ ಶೇಕಡಾ 4ರ ಬಡ್ಡಿ ದರ ಪಡೆಯಲಿದ್ದಾರೆ. ಅದೇ ರೀತಿ ಒಂದು ವರ್ಷದಿಂದ ಐದು ವರ್ಷಗಳ ಅವಧಿಗೆ ಶೇಕಡಾ 6 ಬಡ್ಡಿ ಪಡೆಯುತ್ತಿದ್ದವರು ಇನ್ನು ಮುಂದೆ ಶೇಕಡ 5.9 ಬಡ್ಡಿ ದರ ಪಡೆಯಲಿದ್ದಾರೆ.