ಕೇಂದ್ರದ ಅನುದಾನದಲ್ಲಿ ರಾಜ್ಯದ ಪಾಲು ಬಿಡುಗಡೆಗೆ ಜಾಗೃತ ಕರ್ನಾಟಕ ಬಳಗ ಆಗ್ರಹ

ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕೊರೊನ ಸೋಂಕಿನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಎಲ್ಲ ರಾಜ್ಯಸರ್ಕಾರಗಳು ಆರ್ಥಿಕ ಸಂಕಷ್ಟ ಎದಿರುಸುತ್ತಿವೆ. ಈ ಸಮಸ್ಯೆಗೆ ಇನ್ನಷ್ಟು ತೀವ್ರವಾಗಿರುವುದಕ್ಕೆ ಕಾರಣ ಹಲವು ತಿಂಗಳುಗಳಿಂದ ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ಕೊಡದೆ ಉಳಿಸಿಕೊಂಡಿರುವ ಜಿ ಎಸ್ ಟಿ ತೆರಿಗೆಯ ರಾಜ್ಯಗಳ ಪಾಲು ಜಾಗೃತ ಕರ್ನಾಟಕ ಬಳಗ ಆಗ್ರಹಿಸಿದೆ.

ಮೋದಿ ಸರ್ಕಾರ 2017 ರಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿತ್ತು. ಅಂದಿನಿಂದಲೂ ಕೇಂದ್ರ ಸರ್ಕಾರ ನಿರೀಕ್ಷಿಸಿದ್ದ ಒಟ್ಟು ತೆರಿಗೆ ಮೊತ್ತಕ್ಕಿಂತ ಕಡಿಮೆ ಹಣ ಸಂಗ್ರಹವಾಗಿರುವುದಲ್ಲದೆ, ಅದರಲ್ಲಿ ಹಲವು ರಾಜ್ಯಗಳಿಗೆ ನೀಡಬೇಕಾದ ಅನುದಾನವನ್ನು ತಡೆಹಿಡಿದಿರುವುದು ರಾಜ್ಯಗಳ ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ರಾಜ್ಯಗಳು ಕೊರೊನ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು, ಕೇಂದ್ರ ಸರ್ಕಾರ ರಾಜ್ಯಗಳ ಪಾಲಿನ ತೆರಿಗೆ ಹಣವನ್ನು ಬೇಗನೆ ಹಿಂದಿರುಗಿಸುವುದು ಒಳ್ಳೆಯ ಕ್ರಮ ಎಂದು ಹಲವು ಪಂಡಿತರ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ಗುಜರಾತ್ ಸರ್ಕಾರ 7-8000 ಕೋಟಿ ಬಾಕಿ ಇದೆ ಎಂದು ತಿಳಿಸಿದ್ದರೆ, ಪಶ್ಚಿಮ ಬಂಗಾಳ 2,875 ಕೋಟಿ, ಪಂಜಾಬ್ ತಮ್ಮ ಪಾಲಿನ 6725 ಕೋಟಿ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿವೆ. ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದೆ. ಕರ್ನಾಟಕದ ಮಟ್ಟಿಗೆ ಮಂಗಳವಾರ 1536 ಕೋಟಿ ಬಿಡುಗಡೆಯಾಗಿದ್ದರೂ, ಅಷ್ಟು ಹಣ ಈಗಿನ ಆರ್ಥಿಕ ಸಂಕಷ್ಟಗಳ ನಡುವೆ ಕೊರೊನ ವಿರುದ್ಧ ಹೋರಾಟಕ್ಕೆ ಸಾಕಾಗುವುದಿಲ್ಲ ಎಂದು ಜಾಗೃತ ಕರ್ನಾಟಕ ಬಳಗ ಹೇಳಿದೆ.

ಈ ಎಲ್ಲ ನಿಟ್ಟಿನಲ್ಲಿ ಜಾಗೃತ ಕರ್ನಾಟಕ ವೇದಿಕೆ ರಾಜ್ಯಕ್ಕೆ ನೀಡಬೇಕಾದ ಎಲ್ಲ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಆಂದೋಲನ ಆರಂಭಿಸಿದೆ. Member of Parliament Local Area Development Scheme (MPLADS) ಅಡಿಯಲ್ಲಿ ಪ್ರತಿ ಸಂಸದನಿಗೆ ತನ್ನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ವರ್ಷಕ್ಕೆ ₹5 ಕೋಟಿ ನೀಡಲಾಗುತ್ತದೆ. ಮುಂದಿನ ಎರಡು ವರ್ಷಗಳ ಕಾಲ ಈ ಫಂಡ್ ಅನ್ನು ರದ್ದುಗೊಳಿಸಿ ನೂತನವಾಗಿ ಸ್ಥಾಪಿಸಲೋಗಿರುವ PM CARES ನಿಧಿಗೆ ಜಮೆ ಮಾಡಲಾಗಿದೆ. ಇದಕ್ಕಾಗಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಗತ್ಯ ಇದೆ ಕೂಡ ವೇದಿಕೆಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಸಂಸದರ ನಿಧಿಯನ್ನು ಪಿಎಂ ಕೇರ್ಸ್ ನಿಧಿಗೆ ಸೇರಿಸಿಕೊಳ್ಳುವ ಕ್ರಮ ಸರಿಯಲ್ಲ ಎಂದು ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.

ಈಗ ಕೊರೊನಾ ಲಾಕ್ ಡೌನ್ ಶುರುವಾಗಿ ಒಂದು ವಾರದ ನಂತರ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ SDRMF (State disaster risk management fund) ನಿಂದ ಒಟ್ಟು ಸುಮಾರು 11 ಸಾವಿರ ಕೋಟಿಯನ್ನು ಕೊರೋನಾ ಸಂಕಷ್ಟವನ್ನು ನಿರ್ವಹಿಸಲು ಕೊಡಲಾಗಿದೆ. ಇದು ಕೊರೋನಾ ಸಂಕಷ್ಟದಲ್ಲಿ ಕೇಂದ್ರ ಕೊಡುತ್ತಿರುವ ವಿಶೇಷ ಪ್ಯಾಕೇಜ್ ಏನೂ ಅಲ್ಲ. ಪ್ರತಿ ವರ್ಷ SDRMF ಅಡಿಯಲ್ಲಿ‌ ಕೊಡಬೇಕಿರುವ ಹಣವನ್ನು ಈಗಲೇ ಕೊರಾನಾ ಸಂಕಷ್ಟದ ಖರ್ಚಿಗಾಗಿ ಕೊಡಲಾಗುತ್ತಿದೆಯಷ್ಟೆ. ಅದು ಹೋಗಲಿ, ಆದರೆ ಇಲ್ಲಿಯೂ ಕರ್ನಾಟಕಕ್ಕೆ ಬೇರೆ ಹಲವು ರಾಜ್ಯಗಳಿಗಿಂತ ಕಡಿಮೆ ಹಣ ಕೊಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ ಸುಮಾರು 1611 ಕೋಟಿ, ‌ರಾಜಸ್ಥಾನಕ್ಕೆ ಸುಮಾರು 704 ಕೋಟಿ, ಬಿಹಾರಕ್ಕೆ ಸುಮಾರು 700 ಕೋಟಿ, ಗುಜರಾತ್ ಗೆ ಸುಮಾರು 662 ಕೋಟಿ, ಆಂದ್ರಪ್ರದೇಶಕ್ಕೆ ಸುಮಾರು 559 ಕೋಟಿ, ತಮಿಳುನಾಡಿಗೆ ಸುಮಾರು 510 ಕೋಟಿ ಮತ್ತು ಕರ್ನಾಟಕ ಸುಮಾರು 396 ಕೋಟಿ ನೀಡಿ ಇಲ್ಲಿಯೂ ಕರ್ನಾಟಕಕ್ಕೆ ಕಡಿಮೆ ಅನುದಾನ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಈ ಬಳಗ ದೂರಿದೆ.

15ನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೇ ಕೊಡುವ ಅನುದಾನವನ್ನು ಕಡಿಮೇ ಮಾಡಿರುವುದನ್ನು ಸ್ವತಃ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಜೆಟ್ ಮಂಡನೆ ವೇಳೆಯಲ್ಲಿ ತಿಳಿಸಿದ್ದರು. ಇನ್ನು PM CARES ನಿಧಿಯಲ್ಲಿ ಜಮೆ ಆಗುತ್ತಿರುವ ಸಾವಿರಾರು ಕೋಟಿ ಹಣದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯೂ ಇರುವುದರಿಂದ ಅದರಲ್ಲಿ ಕರ್ನಾಟಕದ ಪಾಲೂ ಇದೆ. ಈ ದುಡ್ಡನ್ನು ಕೇಂದ್ರ ಸರ್ಕಾರ ಹೇಗೆ ಹಂಚಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಸ್ಥಳೀಯವಾಗಿ ಜನರ ಅಗತ್ಯಗಳಿಗೆ ಸ್ಪಂದಿಸಲು ಬಳಸಬಹುದಿದ್ದ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಈಗ ಕೇಂದ್ರ ಸರ್ಕಾರ ಹಿಡಿದು ಕೂತಿದೆ. ಅದರ ಪಾಲನ್ನು ಕೇಳಲೂ ಮತ್ತೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಜಾಗೃತ ಕರ್ನಾಟಕ ಬಳಗ ಆತಂಕ ವ್ಯಕ್ತಪಡಿಸಿದೆ.