ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಕೂಡಲೇ ಬುಡೊಮಿಯರ‍್ಜ್ ನ ಗಡಿ ಪ್ರದೇಶಕ್ಕೆ ತೆರಳುವಂತೆ ಸೂಚನೆ.

ಕೀವ್,ಮಾರ್ಚ್,2,2022(www.justkannada.in): ಉಕ್ರೇನ್‌ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರಸ್ತುತ ಉಕ್ರೇನ್ ದೇಶದ ಲ್ವಿವ್, ಟೆರ್ನೊಪಿಲ್ ಹಾಗೂ ಇನ್ನಿತರೆ ಉಕ್ರೇನ್‌ ನ ಪಶ್ಚಿಮ ಪ್ರದೇಶಗಳಲ್ಲಿ ವಾಸವಾಗಿರುವ ಭಾರತೀಯ ಮೂಲದ ಜನರನ್ನು ಸಾಧ್ಯವಾದಷ್ಟು ಬೇಗ ಬುಡೊಮಿಯರ‍್ಜ್ ನ ಗಡಿ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದೆ.

ಈ ಸ್ಥಳ ತುರ್ತಾಗಿ ಪೊಲ್ಯಾಂಡ್‌ ಗೆ ತೆರಳುವ ಚೆಕ್-ಪಾಯಿಂಟ್ ಆಗಿದೆ. ಪರ್ಯಾಯವಾಗಿ, ಹಂಗರಿ ಅಥವಾ ರೊಮೇನಿಯಾ ಮೂಲಕ ಹೊರಗೆ ಬರಲು ದಕ್ಷಿಣದ ಕಡೆಗೆ ಪ್ರಯಾಣಿಸುವಂತೆ ಮನವಿ ಮಾಡಿದೆ.

ಶೇಹ್ಯಿನಿ-ಮೆಡ್ಯಕಾ ಗಡಿಯಲ್ಲಿ ದಟ್ಟಣೆಯಿರುವ ಕಾರಣದಿಂದಾಗಿ ಆ ಕಡೆಯಿಂದ ಬರುವುದನ್ನು ತಪ್ಪಿಸುವಂತೆ ಸೂಚಿಸಿದೆ. ಪೊಲ್ಯಾಂಡ್‌ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಮೆಡ್ಯಕಾ ಹಾಗೂ ಬುಮಿಯರ‍್ಜ್ನ ಗಡಿಯಲ್ಲಿರುವ ಚೆಕ್-ಪಾಯಿಂಟ್‌ ಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಿದ್ದು, ಅವರು ಉಕ್ರೇನ್‌ ನಿಂದ ಭಾರತಕ್ಕೆ ಬರಲು ಪ್ರಯತ್ನಿಸುವವರಿಗೆ ನೆರವು ನೀಡಲಿದ್ದಾರೆ.

ಭಾರತೀಯ ಮೂಲದ ಅಧಿಕಾರಿಗಳನ್ನು ನಿಯೋಜಿಸದೇ ಇರುವಂತಹ ಸ್ಥಳಗಳ ಮೂಲಕ ಇತರೆ ಯಾವುದೇ ಗಡಿಯ ಮೂಲಕ ಪೋಲ್ಯಾಂಡ್ ಅನ್ನು ಪ್ರವೇಶಿಸುವವರು ನೇರವಾಗಿ ರೆಜೆಸೋವ್‌ ನಲ್ಲಿರುವ ಹೋಟೆಲ್ ಪ್ರೆಜಿಡೆನಸ್ಕಿಗೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲಿ ವಾಸವಿರಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು, ಅಲ್ಲಿಂದಲೇ ಭಾರತಕ್ಕೆ ತೆರಳುವ ಎಲ್ಲಾ ‘ಆಪರೇಷನ್ ಗಂಗಾ’ ವಿಮಾನಯಾನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಈ ಮೂಲಕ ತಿಳಿಸಿದೆ.

ಭಾರತದ ಯಾವುದಾದರೂ ವಿದ್ಯಾರ್ಥಿಯ ಬಳಿ ಹಣ ಇಲ್ಲದಿದ್ದಲ್ಲಿ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳೇ ಇದೇ ಹೋಟೆಲ್‌ ನಲ್ಲಿ ಸಾರಿಗೆ ಶುಲ್ಕಗಳನ್ನೂ ಪಾವತಿಸುತ್ತಾರೆ ಎಂದು ಮಾಹಿತಿ ನೀಡಿದೆ.

Key words: Indians- Ukraine-border -Budomierz