ಇದು ರಾಜಕೀಯ‌ ಮಾಡುವ ಸಮಯವಲ್ಲ, ಕೊರೊನಾ ವಿರುದ್ಧದ ಯುದ್ಧಕಾಲ:‌ ಸಚಿವ ಬಿ.ಸಿ.ಪಾಟೀಲ್

ಚಿತ್ರದುರ್ಗಾ, ಏಪ್ರಿಲ್ 16, 2020 (www.justkannada.in): ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.‌ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ – ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿಸಚಿವ ಬಿ.ಸಿ. ಪಾಟೀಲ್ ವಿಷಾದ ಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಮಾಡುತ್ತಿರುವ ಟೀಕೆಗಳ ಬಗ್ಗೆ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿ ಕಾರ್ಯ ಕೈಗೊಂಡಿವೆ. ಇಂಥ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರಿಶ್ರಮ ವಹಿಸಲಾಗಿದೆ ಎಂದವರು ವಿವರಿಸಿದರು.

ಕೆಪಿಸಿಸಿ ಹಾಲಿ ಅಧ್ಯಕ್ಷರು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಆದರೂ ಬಿಜೆಪಿ‌ ಸರ್ಕಾರ ಕಂಗೆಡದೆ ಪರಿಸ್ಥಿತಿಯನ್ನು‌ ನಿಭಾಯಿಸುತ್ತಿದೆ ಎಂದು ತಿರುಗೇಟು ನೀಡಿದರು.
ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ.‌ಸಬ್ಸಿಡಿ ದರದಲ್ಲಿ ಬಿತ್ತನೆಬೀಜ – ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದೇವೆ. ರಾಜ್ಯದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ – ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಿಲ್ಲ. ಹಾಲನ್ನು ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ. ಸರ್ಕಾರ ವಹಿಸಿರುವ ಇಷ್ಟೆಲ್ಲ ಮುತುವರ್ಜಿ, ಕಾರ್ಯ ತತ್ಪರತೆ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಗಾಗಿದೆ. ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂಥ ಸಮಯ ಯಾರೂ ರಾಜಕೀಯ ಮಾಡಬಾರದು ಎಂದವರು‌ ಮರು ನುಡಿದರು.