ಸಿದ್ಧಾರ್ಥ್ ತುಂಬಾ ಒಳ್ಳೆಯ ಹುಡುಗ: ಅವರು ದೃತಿಗೆಡಬಾರದಿತ್ತು- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೆ….

ಬೆಂಗಳೂರು,ಜು,30,2019(www.justkannada.in): ಸಿದ್ದಾರ್ಥ್  ನಾಪತ್ತೆ ಪ್ರಕರಣ ಒಂದು ದುರಂತ. ಸಿದ್ಧಾರ್ಥ್ ತುಂಬಾ ಒಳ್ಳೆಯ ಹುಡುಗ ಅವರು ಧೃತಿಗೆಡಬಾರದಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ಜೆ.ಪಿ.ಭವನದಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಿದ್ದಾರ್ಥ  ಅವರಿಗೂ ನನಗೂ 35 ವರ್ಷಗಳ ಪರಿಚಯ. ತುಂಬಾ ಒಳ್ಳೆಯ ಹುಡುಗ. ಆಸ್ತಿಯೂ ಇತ್ತು. ಎಸ್.ಎಂ.ಕೃಷ್ಣ ನನಗಿಂತ‌ ಒಂದು ವರ್ಷ ಹಿರಿಯರು.‌ ಈಗ ಅವರು ಇದನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ. ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿ ಬಂದಿದ್ದೇನೆ ಎಂದರು.

ಐಟಿ ಅಧಿಕಾರಿಗಳು ತೊಂದರೆ ಕೊಟ್ಟಿದ್ದರು ಎಂಬ ಸಿದ್ಧಾರ್ಥ ಪತ್ರದ ಬಗ್ಗೆ  ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಐಟಿ ದಾಳಿ ಆಗುತ್ತಿರುವ ರೀತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ನೀವೇ ಇದನ್ನು ವಿಶ್ಲೇಷಣೆ ಮಾಡಿ. ಈ ರಾಜಕಾರಣದ ಬಗ್ಗೆ ಮಾತನಾಡಲ್ಲ. ಸಿದ್ಧಾರ್ಥ್ ತುಂಬಾ ಮುಂದೆ ಹೋಗ್ತಾ ಇದ್ರು. ಉದಯೋನ್ಮುಖ ಉದ್ಯಮಿ. ಎಲ್ಲಾ ಷೇರು ಕುಸಿದು ಏನು ತೊಂದರೆ ಆಯ್ತೋ ಗೊತ್ತಿಲ್ಲ. ಸಿದ್ದಾರ್ಥ ಹೆದರಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಯಾಕೆ ಆ ಕೆಟ್ಟಗಳಿಗೆ ಬಂತೊ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ನಿತ್ಯ ಏನು ನಡೀತಿದೆ ಅಂತ ಎಲ್ಲರೂ ಗಮನಿಸುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಮೇಲಿಂದ ಸೂಚನೆ ಬಂದ ಹಾಗೆ ವರ್ತನೆ ಮಾಡ್ತಾರೆ ಅಷ್ಟೇ. ನನಗೂ ಅದಕ್ಕೂ ಸಂಬಂಧ ಇಲ್ಲ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 59ಕಡೆ ಐಟಿ ದಾಳಿ ಆಯ್ತು ಅಲ್ವಾ? ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದರು.

Key words: Siddharth –  distracted-former Prime Minister -HD Deve Gowda-bangalore