ಬೆಂಗಳೂರಿನಲ್ಲಿ ತೆರೆದುಕೊಂಡ ಇಡೀ ಜಗತ್ತು; ಟೆಕ್‌ ಸಮಿಟ್‌ ನಲ್ಲಿ ವರ್ಚುಯಲ್‌ ವಿಶ್ವರೂಪ…!

ಬೆಂಗಳೂರು, ನವೆಂಬರ್,19,2020(www.justkannada.in): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ರಾಜ್ಯ ಕರ್ನಾಟಕವು, ಕೋವಿಡ್-‌19 ಬಿಕ್ಕಟ್ಟಿನ ನಡುವೆಯೂ ಹಮ್ಮಿಕೊಂಡಿರುವ ಬೆಂಗಳೂರು ಟೆಕ್‌ ಸಮಿಟ್-‌2020 ಅನೇಕ ಕಾರಣಗಳಿಗೆ ಮಹತ್ವದ್ದೆನಿಸಿದ್ದು, ಜಗತ್ತೇ ಒಂದು ಗ್ರಾಮ ಎನ್ನುವ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದೆ.Technology- PM Modi - Bangalore Tech Summit – 2020-drive

ಕೋವಿಡ್‌ ಪೀಡೆಯು ಅಂಕೆಗೆ ಬಾರದ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳು ಹಾಗೂ ಅನೇಕ ದೇಶಗಳು ಕೈಚೆಲ್ಲಿ ಕೂತಿರುವುದರ ನಡುವೆಯೇ ಕ್ರಿಯಾಶೀಲವಾಗಿ ಹೂಡಿಕೆಯ ಆಕರ್ಷಣೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ದಾಪುಗಾಲು ಇಟ್ಟಿರುವ ರಾಜ್ಯವು, 25ಕ್ಕೂ ಹೆಚ್ಚು ದೇಶಗಳನ್ನು ಒಂದೇ ಒಂದು ವರ್ಚುಯಲ್ ವೇದಿಕೆಯಲ್ಲಿ ಒಗ್ಗೂಡಿಸಿ ತಂತ್ರಜ್ಞಾನದ ವಿಶ್ವರೂಪವನ್ನು ಜಗತ್ತಿಗೆ ಪರಿಚಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟೆಕ್‌ ಸಮಿಟ್-2020 ಚಾಲಕಶಕ್ತಿ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, “ಇದೊಂದು ಅಸಾಧಾರಣ ಹೆಜ್ಜೆ. ಕೋವಿಡ್‌ನಂಥ ಮಾರಕ ಪಿಡುಗಿನ ನಡುವೆಯೇ ಈ ಶೃಂಗವನ್ನು ಹಮ್ಮಿಕೊಳ್ಳಲಾಗಿದೆ. ವೈರಸ್‌ ಉಪಟಳದಿಂದ ಕಂಗೆಟ್ಟಿರುವ  ಜಗತ್ತಿನ ಎಲ್ಲಡೆಯಂತೆ ರಾಜ್ಯದ ಮೇಲೂ ಒತ್ತಡ ಬಿದ್ದಿದೆ. ಹಾಗಂತ ಯಾವುದೂ ನಿಲ್ಲುವಂತಿಲ್ಲ. ಕೋವಿಡ್‌ ನಂತರ ರಾಜ್ಯವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕು ಎಂಬ ನಮ್ಮ ಸಂಕಲ್ಪಕ್ಕೆ ಸಾಕ್ಷಿಯಾಗಿ ಈ ಟೆಕ್‌ ಸಮಿಟ್‌ ಬಂದಿದೆ. ತಂತ್ರಜ್ಞಾನ ನಮ್ಮ ಇಚ್ಛಾಶಕ್ತಿಗೆ ಬಲ ತುಂಬಿದೆ” ಎನ್ನುತ್ತಾರೆ.

ಅದ್ಭುತ ಟೇಕಾಫ್‌:

ಮೂರು ದಿನಗಳ ಟೆಕ್‌ ಸಮಿಟ್‌ಗೆ ಗುರುವಾರ ಚಾಲನೆ ಸಿಕ್ಕಿದ್ದು, ಅದ್ಭುತವಾದ ಟೇಕಾಫ್‌ ಸಿಕ್ಕಿದೆ. ನೇರ ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವ ಜಗದೀಶ್‌ ಶೆಟ್ಟರ್‌ ಹಾಗೂ ಸಂಬಂಧಿತ ಅಧಿಕಾರಿಗಳು ಭಾಗಿಯಾದರೆ, ವರ್ಚುವಲ್‌ ಮೂಲಕ ದಿಲ್ಲಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಪಾಲ್ಗೊಂಡು ಸಮ್ಮಿಟ್‌ ಉದ್ಘಾಟನೆ ಮಾಡಿದರು. ಅವರೊಂದಿಗೆ ಇದೇ ವರ್ಚುಯಲ್‌ ವೇದಿಕೆ ಮೂಲಕ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್‌ ಮಾರಿಸನ್‌ ಅವರು ಸಿಡ್ನಿಯಿಂದ ಹಾಗೂ ಸ್ವಿಡ್ಜರ್‌ಲೆಂಡಿನ ಉಪಾಧ್ಯಕ್ಷ ಗೈ ಫಾರ್ಮೆಲಿನ್‌ ಅವರು ಬರ್ನ್‌ ನಗರದಿಂದ ವರ್ಚುಯಲ್‌ ವೇದಿಕೆಯನ್ನು ಹಂಚಿಕೊಂಡರು. ಹೀಗೆ ತಾಂತ್ರಿಕವಾಗಿ ಜಗತ್ತಿನ ಮುಂಚೂಣಿಯಲ್ಲಿರುವ ಭಾರತವೂ ಸೇರಿ ಮೂರು ದೇಶಗಳ ನಾಯಕರನ್ನು ವರ್ಚುಯಲ್‌ ವೇದಿಕೆಯಲ್ಲಿ ಒಗ್ಗೂಡಿಸಿದ್ದು ಟೆಕ್‌ ಸಮ್ಮಿಟ್‌ ನ ಮುಖ್ಯ ಹೆಗ್ಗಳಿಕೆ.

“ಸಾಮಾನ್ಯವಾಗಿ ಈ ರೀತಿಯ ಟೆಕ್‌ ಸಮಿಟ್‌ ಗಳನ್ನು ನೇರ ವೇದಿಕೆಗಳಲ್ಲಿ ಆಯೋಜಿಸಲಾಗುತ್ತದೆ. ಪ್ರತಿವರ್ಷ ನಡೆಯುತ್ತಿದ್ದ ಈ ಸಮಿಟ್‌ ಗೆ ವಿವಿಧ ದೇಶಗಳಿಂದ ಪ್ರತಿನಿಧಿಗಳು, ಜಾಗತಿಕ ನಾಯಕರು ಬಂದು ಭಾಗಿಯಾಗುತ್ತಿದ್ದರು. ಆದರೆ, ಈ ವರ್ಷ ಕೋವಿಡ್‌ ಅಂತಹ ಸಾಂಪ್ರದಾಯಿಕ ವೇದಿಕೆಗಳಿಗೆ ತಿಲಾಂಜಲಿ ನೀಡಿ ಹೊಸ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡಿದೆ” ಎನ್ನುತ್ತಾರೆ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ.

ವರ್ಚುವಲ್‌ ವೇದಿಕೆಯಲ್ಲೇ ಚರ್ಚಾಗೋಷ್ಠಿಗಳು:

ಟೆಕ್‌ ಸಮಿಟ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ವರ್ಚುಯಲ್‌ ವೇದಿಕೆಗಳಲ್ಲಿ ನಡೆಯುತ್ತಿರುವ  ಚರ್ಚಾಗೋಷ್ಠಿಗಳಲ್ಲಿ ದೇಶ-ವಿದೇಶಗಳ ಹೂಡಿಕೆದಾರರು, ತಾಂತ್ರಿಕ ನಿಪುಣರು, ವಿವಿಧ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ನವೆಂಬರ್‌ 19ರಂದು ಮಹೀಂದ್ರಾ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್‌ ಮಹೀಂದ್ರ ಮುಖ್ಯ ಭಾಷಣ ಮಾಡಿದರಲ್ಲದೆ, ಕೋವಿಡ್‌ ನಂತರದ ಕಾಲದಲ್ಲಿ ಕರ್ನಾಟಕ ಮತ್ತು ಭಾರತದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ, ಮುಖ್ಯವಾಗಿ ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆ ಮೇಲೆ ಬೆಳಕು ಚೆಲ್ಲಿದರು.

ಇದಾದ ಮೇಲೆ 4 ಚರ್ಚಾಗೋಷ್ಠಿಗಳು ನಡೆದು, ಅನೇಕ ಹೊಸ ಸಾಧ್ಯತೆಗಳತ್ತ ಗಮನ ಸೆಳೆಯುವಂತೆ ಮಾಡಿದವು. ಮಧ್ಯಾಹ್ನ ನಡೆದ ಮೊದಲ ಗೋಷ್ಠಿಯಲ್ಲಿ ನಿತ್ಯಜೀವನದಲ್ಲಿ ಟೆಕ್ನಾಲಜಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಆರೋಗ್ಯ, ಕೃಷಿ ಮತ್ತು ಪ್ರಕೃತಿ ವಿಕೋಪದಂಥ ಸಂದತ್ಭದಲ್ಲಿ ದ್ರೋಣ್‌ಗಳನ್ನೂ, ರೋಬೋಟ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆಯೂ ಮಾತುಕತೆ ನಡೆಯಿತು.

ಬಳಿಕ ಸಮಾಜ ಮತ್ತು ಸ್ಯಾಟಲೈಟ್‌ ಗಳು, ಹೊಸದಾಗಿ ಜಗತ್ತನ್ನು ಪೀಡಿಸುತ್ತಿರುವ ಮಾರಣಾಂತಕ ವೈರಸ್‌ಗಳ ವಿರುದ್ಧ ವ್ಯಾಕ್ಸಿನ್-ಔಷಧಗಳ ಆವಿಷ್ಕಾರ, ಡಿಜಿಟಲ್‌ ಹೆಲ್ತ್‌ಕೇರ್‌ ಮುಂತಾದ ಅಂಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಇದೊಂದು ದಾಖಲೆಯ ವೇದಿಕೆ:

ಅಂಕಿ- ಅಂಶಗಳಲ್ಲೇ ಬೆರಗು ಮೂಡಿಸುತ್ತಿರುವ ಈ ವರ್ಚುವಲ್‌ ಸಮಿಟ್‌ ಆ ಎಲ್ಲ ಅಂಕಿ- ಆಂಶಗಳನ್ನೂ ನೈಜವಾಗಿ ಸಾಕಾರಗೊಳಿಸುತ್ತಿದೆ. ಜಗತ್ತಿನ ಒಟ್ಟು 25 ಪಾಲುದಾರ ದೇಶಗಳು ಪಾಲ್ಗೊಂಡಿವೆ. ಒಟ್ಟು 75 ಅಧಿವೇಶನಗಳಲ್ಲಿ ಸುಮಾರು 270 ಮಂದಿ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆವಿಷ್ಕಾರ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಮಾರು 100ಕ್ಕೂ ಹೆಚ್ಚು ನವೋದ್ಯಮಗಳು ಸೇರಿದಂತೆ 250 ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ. ಮತ್ತೊಂದು ದೊಡ್ಡ ದಾಖಲೆ ಎನ್ನುವಂತೆ ವಿವಿಧ ದೇಶಗಳ 4000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಬಿಸಿನೆಸ್‌ ವಿಸಿಟರುಗಳು ವರ್ಚುವಲ್‌ ವೇದಿಕೆಯ ಮೂಲಕವೇ ಸಮಿಟ್‌ಗೆ ಭೇಟಿ ನೀಡುತ್ತಿದ್ದಾರೆ.whole world -opened - Bangalore Tech Summit - Virtual Uniform

ದೂರದ ದೇಶಗಳು ಈಗ ಹತ್ತಿರ:

ವರ್ಚುಯಲ್‌ ಮೂಲಕ ಆವಿಷ್ಕಾರ ಮೈತ್ರಿಕೂಟದ ದೇಶಗಳಾದ ಇಪ್ಪತ್ತೈದು ಗಣರಾಜ್ಯಗಳು ಇದೀಗ ಭಾರತದ ಹತ್ತಿರಕ್ಕೆ ಬಂದಿವೆ. ಮುಖ್ಯವಾಗಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಈ ದೇಶಗಳು ಉತ್ಸುಕವಾಗಿವೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಆಸ್ಟ್ರೀಯಾ, ಬೆಲ್ಪಿಯಂ, ಡೆನ್ಮಾರ್ಕ್‌, ಫಿನ್‌ಲೆಂಡ್‌, ಫ್ರಾನ್ಸ್‌, ಜರ್ಮನಿ, ಜಪಾನ್‌, ಇಸ್ರೇಲ್‌, ಲಿಥುವೇನಿಯಾ, ನೆಡರ್‌ಲ್ಯಾಂಡ್ಸ್‌, ಸಿಂಗಾಪುರ, ಸ್ವೀಡನ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲೆಂಡ್‌, ಬ್ರಿಟನ್‌, ತೈವಾನ್‌ ಮತ್ತು ಅಮೆರಿಕ ದೇಶಗಳ ವಿವಿಧ ನಾಯಕರು, ಕೈಗಾರಿಕೋದ್ಯಮಿಗಳು ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಭಾಗಿಯಾಗಿದ್ದಾರೆ.

ಫಲಿತಾಂಶಕ್ಕೆ ಎಣೆ ಇಲ್ಲ:

ಟೆಕ್‌ ಸಮಿಟ್‌ನಲ್ಲಿ ರಾಜ್ಯವು ವಿವಿಧ ದೇಶಗಳ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದೆ. ಈಗಾಗಲೇ ಏಳಕ್ಕೂ ಹೆಚ್ಚು ಪ್ರಮುಖ ಒಪ್ಪಂದಗಳು ಅಂತಿಮಗೊಂಡಿವೆ. ಅವುಗಳಿಗೆ ಅಂಕಿತ ಬೀಳುವುದೊಂದೇ ಬಾಕಿ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳುತ್ತಾರೆ.

ಮುಖ್ಯವಾಗಿ; ಅಂತರೀಕ್ಷ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣೆ, ಕೃಷಿ, ವೈದ್ಯಕೀಯ ಆವಿಷ್ಕಾರ, ಮಾಹಿತಿ ತಂತ್ರಜ್ಞಾನ, ಇ-ಕಾಮರ್ಸ್‌, ಸಂಪರ್ಕ, ನವೋದ್ಯಮ, ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌, ಡ್ರೋನ್‌ ಮತ್ತು ರೋಬೋಟಿಕ್ಸ್‌, ವಿಪುಲ ಉದ್ಯೋಗಾವಕಾಶ, ಸೈಬರ್‌ ಭದ್ರತೆ, ಡಿಜಿಟಲ್‌ ಹೆಲ್ತ್‌ಕೇರ್‌ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಒಟ್ಟಿಗೆ ಕೆಲಸ ಮಾಡಲು ಆವಿಷ್ಕಾರ ಮೈತ್ರಿಕೂಟದ ದೇಶಗಳು ತುದಿಗಾಲ ಮೇಲೆ ನಿಂತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ದಾಟಲಿದ್ದು, ರಾಜ್ಯವು ತಂತ್ರಜ್ಞಾನಕ್ಕೆ ಮುಕ್ತವಾಗಿ ತೆರೆದುಕೊಂಡಿದ್ದೇ ಇಷ್ಟೆಲ್ಲದ್ದಕ್ಕೂ ಕಾರಣವಾಯಿತು ಎಂದು ಉಪ ಮುಖ್ಯಮಂತ್ರಿಗಳು ಹೇಳುತ್ತಾರೆ.

Key words: whole world -opened – Bangalore Tech Summit – Virtual Uniform