ಬಿಬಿಎಂಪಿ ವತಿಯಿಂದ ಆರ್‌ ಟಿ ನಗರ ವೃತ್ತ ಸುಂದರೀಕರಣ ಕಾಮಗಾರಿ ಪೂರ್ಣ.

ಬೆಂಗಳೂರು, ಸೆಪ್ಟೆಂಬರ್ 20, 2021  (www.justkannada.in): ಬೆಂಗಳೂರಿನ ರಬೀಂದ್ರನಾಥ ಟಾಗೋರ್ ನಗರ (ಆರ್‌ಟಿ ನಗರ)ದ ಮುಖ್ಯ ರಸ್ತೆ ಹೊಸ ನೋಟದೊಂದಿಗೆ ನಳನಳಿಸಲು ಆರಂಭಿಸಿದೆ. ರಬೀಂದ್ರನಾಥ ಟಾಗೋರ್ ಅವರ ಆಕರ್ಷಕ ಪುತ್ಥಳಿ ಅಳವಡಿಕೆಯ ಜೊತೆಗೆ ವೃತ್ತವನ್ನು ಟೆಂಡರ್‌ ಶ್ಯೂರ್ ರಸ್ತೆಗಳಂತೆ ಅಭಿವೃದ್ಧಿಪಡಿಸಲಾಗಿದೆ. ವೃತ್ತದಲ್ಲಿ ನೀರಿನ ಕಾರಂಜಿ, ಎಲ್‌ ಇಡಿ ಬೀದಿ ದೀಪಗಳು, ರಸ್ತೆಯ ಮೇಲೆ ಮಾರ್ಗ ಪಥಗಳ ಗುರುತಿಸುವಿಕೆ ಹಾಗೂ ಭೂದೃಶ್ಯ ಅಭಿವೃದ್ಧಿಯ ಜೊತೆಗೆ ವೃತ್ತವನ್ನು ನೋಡಲು ಕಣ್ಮನ ಸೆಳೆಯುವಂತೆ ಅಭಿವೃದ್ಧಿಪಡಿಸಲಾಗಿದೆ.

ಬಿಬಿಎಂಪಿ ವತಿಯಿಂದ ಬೆಂಗಳೂರು ಮಹಾನಗರದ 30 ಜನನಿಬಿಡ ವೃತ್ತಗಳನ್ನು ಸಂಪೂರ್ಣವಾಗಿ ಸುಂದರೀಕರಣಗೊಳಿಸಿ, ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಆರ್‌ಟಿ ನಗರ ವೃತ್ತವೂ ಸೇರಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವೃತ್ತದ ಅಭಿವೃದ್ಧಿ ಕಾಮಗಾರಿಯನ್ನು ಸದ್ಯದಲ್ಲಿಯೇ ಉದ್ಘಾಟಿಸಲಿದ್ದಾರೆ. ಇತ್ತೀಚೆಗೆ ಬಿಬಿಎಂಪಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅಳವಡಿಕೆಯ ಜೊತೆಗೆ ಕೆ.ಆರ್. ವೃತ್ತವನ್ನು ಇದೇ ರೀತಿ ಅಭಿವೃದ್ಧಿಪಡಿಸಿತು.

ಕೆಲವು ಅಧಿಕಾರಿಗಳು ತಿಳಿಸಿದಂತೆ ಆರ್‌ಟಿ ನಗರ ವೃತ್ತವನ್ನು ಅರ್ಹತೆಗೆ ತಕ್ಕಂತೆ ಈವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷಿಸಲಾಗಿತ್ತು. “ಈ ವೃತ್ತ ಆರ್‌ಟಿ ನಗರದ ಪ್ರವೇಶದ್ವಾರವಾಗಿದೆ. ಅನೇಕರಿಗೆ ಆರ್‌ಟಿ ಎಂದರೆ ಏನು ಅಂತಲೇ ಗೊತ್ತಿರಲಿಲ್ಲ. ಈಗ ರಾವಿಂದ್ರನಾಥ ಟಾಗೋರ್ ಅವರ ಪುತ್ಥಳಿ ಅಳವಡಿಕೆಯ ಜೊತೆಗೆ ವೃತ್ತವನ್ನು ಸುಂದೀಕರಣಗೊಳಿಸಿ, ಅಭಿವೃದ್ಧಿಪಡಿಸಿರುವುದು ಎರಡು ಗುರಿಗಳನ್ನು ತಲುಪಿದಂತಾಗಿದೆ,” ಎನ್ನುವುದು ಬಿಬಿಎಂಪಿ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.

ಈ ವೃತ್ತದ ಸುಂದರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿ ಕಾಮಗಾರಿ ಸಿಬ್ಬಂದಿಗಳು ರಸ್ತೆಯ ಮೇಲೆ, ವೃತ್ತದ ಸುತ್ತಲೂ ಬಿಳಿ ಪಟ್ಟೆಯನ್ನು ನಿರ್ಮಿಸುವಲ್ಲಿ ತೊಡಗಿದ್ದರು.

ಪ್ರಸ್ತುತ ಬಿಬಿಎಂಪಿ ಚಾಲುಕ್ಯ ವೃತ್ತವನ್ನು ಇದೇ ರೀತಿ ಅಭಿವೃದ್ಧಿಪಡಿಸಲು ವಿನ್ಯಾಸವನ್ನು ಸಿದ್ಧಪಡಿಸುತ್ತಿದೆ. ಬಿಬಿಎಂಪಿ ವತಿಯಿಂದ ಇದೇ ರೀತಿ ಅಭಿವೃದ್ಧಿಯಾಗಲಿರುವ ಇನ್ನಿತರೆ ವೃತ್ತಗಳೆಂದರೆ: ಹಡ್ಸನ್ ವೃತ್ತ, ಎನ್.ಆರ್. ವೃತ್ತ, ವಿಧಾನ ಸೌಧ, ಮೇಯೊ ಹಾಲ್ ವೃತ್ತ, ಹೆಬ್ಬಾಳ ವೃತ್ತ, ಉಪ್ಪಾರಪೇಟೆ ವೃತ್ತ, ನಾಯಂಡಹಳ್ಳಿ ವೃತ್ತ, ಲಾಲ್‌ಬಾಗ್ ಸಿದ್ದಾಪುರ ಗೇಟ್, ಅಶೋಕ ಪಿಲ್ಲರ್, ದೊಮ್ಮಲೂರು ವೃತ್ತ, ಡೈರಿ ವೃತ್ತ, ಟ್ರಿನಿಟಿ ವೃತ್ತ, ಕೆ.ಆರ್. ಮಾರುಕಟ್ಟೆ ವೃತ್ತ, ಗುಬ್ಬಿ ತೋಟದಪ್ಪ ವೃತ್ತ, ಇತ್ಯಾದಿಗಳು. ಮುಂದಿನ ದಿನಗಳಲ್ಲಿ ಈ ವೃತ್ತಗಳಲ್ಲಿಯೂ ಆಕರ್ಷಕ ನೀರಿನ ಕಾರಂಜಿಗಳು ಬರಲಿದ್ದು, ಜನಾಕರ್ಷಣೆಯ ತಾಣಗಳಾಗಲಿವೆ.

ಆದರೆ ಬಿಬಿಎಂಪಿಯ ಈ ಯೋಜನೆಯಿಂದ ಎಲ್ಲರೂ ಸಂತೋಷವಾಗಿಲ್ಲ. “ಬೆಂಗಳೂರು ನಗರದ ಬಹುಪಾಲು ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬರೀ ಹೊಂಡಗಳಷ್ಟೇ ಅಲ್ಲ, ಕೆಲವು ರಸ್ತೆಗಳಲ್ಲಿ ಓಡಾಡುವುದಕ್ಕೆ ಸಾಧ್ಯವೇ ಇಲ್ಲದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರರ್ಥ ರಸ್ತೆ ದುರಸ್ತಿ ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿವೆ ಎಂದು ಸಾಬೀತಾಗುತ್ತದೆ. ಬಿಬಿಎಂಪಿ ವೃತ್ತಗಳನ್ನು ಸುಂದರೀಕರಣಗೊಳಿಸುವುದಕ್ಕೆ ಮೊದಲು ರಸ್ತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕಿದೆ,” ಎನ್ನುವುದು ನಾಗರಬಾವಿ ಬಡಾವಣೆಯ ನಿವಾಸಿ ಶಶಿಧರ್ ಬಿ. ಅವರ ಅಭಿಪ್ರಾಯವಾಗಿದೆ.

ಬಿಬಿಎಂಪಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದೂ ಸೇರಿಂದತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ವಿಧಾನ ಸಭಾ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆಂದೇ ವಾರ್ಷಿಕ ನಿಗಧಿತ ಹಣವನ್ನು ವ್ಯಯಿಸಲಾಗುತ್ತಿದೆ. ಜೊತೆಗೆ, ಅಗತ್ಯ ಸಿಬ್ಬಂದಿಗಳು ಹಾಗೂ ಟ್ರಾö್ಯಕ್ಟರ್ ವಾಹನದೊಂದಿಗೆ ಚರಂಡಿಗಳ ದುರಸ್ಥಿಗೆಂದೇ ಪ್ರತಿ ತಿಂಗಳು ರೂ. ೧ ಲಕ್ಷ ವ್ಯಯಿಸಲಾಗುತ್ತಿದೆ.

ಆದರೆ ಗುತ್ತಿಗೆದಾರರು ಪೂರ್ಣಗೊಳಿಸುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ಸೂಕ್ತವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕೆನ್ನುವುದು ನಾಗರಿಕ ಗುಂಪಿನ ಸದಸ್ಯರ ವಾದವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: RT nagar- circle- beautification -works -BBMP.