ಮರೆಯಾಯಿತು ತಾರೆ… ಮೊಳಗಿದ ರಾಷ್ಟ್ರಗೀತೆ, ಸಿಡಿದ ಕುಶಾಲ ತೋಪು, ಪಲ್ಲಕ್ಕಿಯಲ್ಲಿ ಕಣ್ಣೀರ ಮೆರವಣಿಗೆ…

ಬೆಂಗಳೂರು, ಅಕ್ಟೋಬರ್ 31, 2021 (www.justkannada.in):  ಸರಕಾರಿ ಗೌರವದೊಂದಿಗೆ ಅಪ್ಪು ಅಂತ್ಯ ಸಂಸ್ಕಾರ ನಡೆಯಿತು. ಗಣ್ಯಾತಿ ಗಣ್ಯರು ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪ ಗುಚ್ಛ ಅರ್ಪಿಸಿದ ನಂತರ ಪೊಲೀಸ್ ವಾದ್ಯಗೋಷ್ಠಿಯಿಂದ ರಾಷ್ಟ್ರ ಗೀತೆ ಮೊಳಗಿತು.

ಅಲ್ಲದೆ, ಅದೇ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದರು. ತದ ನಂತರ, ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಪೊಲೀಸರು ಮೊಳಗಿಸಿದ ಶೋಕ ಗೀತೆ ಹಾಗೂ ರಾಷ್ಟ್ರ ಗೀತೆಯ ನಂತರ ಅಗಲಿದ ನಟನಿಗೆ ಸರ್ಕಾರದ ಗೌರವ ಸಮರ್ಪಣಾ ಕಾರ್ಯಕ್ರಮ ಪೂರ್ಣ ಗೊಂಡಿತು.

ಕೌಟುಂಬಿಕ ಕಾರ್ಯಕ್ರಮದಲ್ಲಿ ಪುಷ್ಪಾಲಂಕೃತ ಹಂಸತೋಲಿಕಾ ಪಲ್ಲಕ್ಕಿಯಲ್ಲಿ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ಇರಿಸಿ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ, ಗುಂಡಿಯೊಳಗೆ ಶವವನ್ನು ಇಳಿಸಲಾಯಿತು.

ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಕುಟುಂಬಸ್ಥರ ಜೊತೆಯಲ್ಲಿ ಗಣ್ಯರೂ ಕೂಡಾ ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಉಪ್ಪು ಮತ್ತು ಮಣ್ಣು ಸಮರ್ಪಿಸುವುದರೊಂದಿಗೆ ಪುನೀತ್ ರಾಜಕುಮಾರ್ ಎಂಬ ಕಲಾಲೋಕದ ತಾರೆ ಮಣ್ಣಲ್ಲಿ ಮಣ್ಣಾಗಿ ಬೆರೆತಾಗ, ಎಲ್ಲರ ಕಣ್ಣಾಲಿಗಳು ತುಂಬಿದ್ದವು ಹಾಗೂ ಹೃದಯ ಭಾರವಾಗಿದ್ದವು.