ಎಲ್ಲರೊಳಗೊಂದಾಗು ಮಂಕುತಿಮ್ಮ: ಮೈಸೂರಿನ ಪತ್ರಕರ್ತರಿಗೂ ಎದುರಾಗಿದೆ ಸಂಕಷ್ಟ

ಮೈಸೂರು, ಆಗಸ್ಟ್ 04, 2020 (www.justkannada.in): ಕೊರೊನಾ ವೈರಸ್ ಹೆಚ್ಚಾಗುತ್ತಿರುವ ನಡುವೆ ಮೈಸೂರು ಪ್ರವಾಸದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಾಧ್ಯಮ ಸಂವಾದ ಆಯೋಜಿಸಿತ್ತು. ಈ ಸಂವಾದದಲ್ಲಿ ಭಾಗಿಯಾಗಿದ್ದ ಸಂಘದ ಪದಾಧಿಕಾರಿಗಳ ಜತೆಗೆ ವರದಿಗಾರರಿಗೂ ಈಗ ಆತಂಕ ಶುರುವಾಗಿದೆ.

ಸಂವಾದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಸಂಘದ ಆವರಣದಲ್ಲಿದ್ದ ಅನೇಕ ಪತ್ರಕರ್ತರು ಸನಿಹದಲ್ಲೇ ಭೇಟಿ ಮಾಡಿ ಮಾತನಾಡಿಸಿದ್ದರು. ಸಂವಾದದ ಬಳಿಕ ಸಿದ್ದು ಬೆಂಬಲಿಗರನೇಕರು ಅವರನ್ನು ಹಿಂಬಾಲಿಸಿದ್ದರು.

ಇದಾದ ಮೇಲೆ ಆಗಸ್ಟ್ 1ರಂದು ಶಾರದಾದೇವಿನಗರದಲ್ಲಿನ ನಿವಾಸದ ಬಳಿ ಮಾಧ್ಯಮದವರ ಜತೆ ಸಿದ್ದರಾಮಯ್ಯ ಮಾತನಾಡಿದ್ದರು. ಆಗಲೂ ಸಹ ಜತೆಯಲ್ಲಿದ್ದವರು ಫೋಟೋಗೆ ಮುಗಿಬಿದ್ದಿದ್ದರು. ಇದಾದ ಮೂರೇ ದಿನಕ್ಕೆ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.ಇದು ಈಗ ಆತಂಕಕ್ಕೆ ಎಡೆಮಾಡಿದೆ.

ಇದಿಷ್ಟು ಪ್ರಥಮ ಸಂಪರ್ಕಿತರಾದರೆ, ಇವರ ಜತೆಗೆ ಸಂಪರ್ಕ ಹೊಂದಿದ್ದ ದ್ವಿತೀಯ ಸಂಪರ್ಕಿತರು ಈಗ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ಸ್ಥಿತಿ ಬಂದಿದೆ. ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು ಈಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾಗಿದೆ.

ಮೈಸೂರಿನ ಪತ್ರಕರ್ತರ ಭವನ ಕ್ಲೋಸ್

ಪತ್ರಕರ್ತರ ಭವನದಲ್ಲಿ ಜುಲೈ 30 ರ ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪತ್ರಕರ್ತರ ಭವನಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

ಪತ್ರಕರ್ತರ ಭವನದ ಎಲ್ಲಾ ಕೊಠಡಿಗಳಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ ಪಾಲಿಕೆ ಸಿಬ್ಬಂದಿ ಸಂವಾದದಲ್ಲಿ ಪತ್ರಕರ್ತರು, ರಾಜಕೀಯ ನಾಯಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನ ಸೇರಿದ್ದರು.

ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಪತ್ರಕರ್ತರ ಭವನವನ್ನು ಬಂದ್ ಮಾಡಲಾಗಿದೆ.