ಇಂಗ್ಲಿಷೇತರ ಪರಿಸರ ಸಾಮಾಜಿಕ ಉದ್ಯಮಶೀಲತೆಯ ಅಂಗವಾಗಲಿ: ಡಾ. ಹರೀಶ್ ಹಂದೆ

 

ಬೆಂಗಳೂರು, ನ.19, 2021 : (www.justkannada.in news ) ಯಶಸ್ವಿ ಸಾಮಾಜಿಕ ಉದ್ದಿಮೆ ಕಟ್ಟಬೇಕಾದರೆ ಆ ಉದ್ದಿಮೆ ಯಾರ್ಯಾರನ್ನು ಒಳಗೊಂಡಿರಬೇಕೆಂಬ ಸ್ಪಷ್ಟ ಕಲ್ಪನೆ ಇನ್ನೂ ನಮ್ಮಲ್ಲಿ ಮೂಡಬೇಕಿದೆ ಎಂದು ಸೆಲ್ಕೋ ಫೌಂಡೇಶನ್ ಸಂಸ್ಥಾಪಕರು ಹಾಗೂ ಪ್ರತಿಷ್ಟಿತ ಮ್ಯಾಗ್ಸಸ್ಸೆ ಪುರಸ್ಕೃತರಾದ ಡಾ. ಹರೀಶ್ ಹಂದೆ ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಶೃಂಗ-2021ರ ಮೂರನೇ ದಿನವಾದ ಶುಕ್ರವಾರ ನಡೆದ ‘ಸಾಮಾಜಿಕ ಉದ್ಯಮಶೀಲತೆ ಮೂಲಕ ಸಬಲೀಕರಣ ಮತ್ತು ಒಳಗೊಳ್ಳುವಿಕೆಯ ಪ್ರಸ್ತುತ ಸ್ಥಿತಿ ಮತ್ತು ಅವಕಾಶಗಳು’ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉದಾಹರಣೆಯನ್ನು ನೋಡುವುದಾದರೆ, ದೇಶದ ಎಷ್ಟು ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಗೌರವ ಡಾಕ್ಟರೇಟ್ ಕೊಟ್ಟಿವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೆಕಾಗುತ್ತದೆ. ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಯಾವುದೇ ಕೆಲಸ, ಕ್ಷೇತ್ರ ಅಥವಾ ಉದ್ದಿಮೆ ಯಾರ್ಯಾರನ್ನು ಒಳ್ಳಗೊಳ್ಳಬೇಕೆಂಬ ಸ್ಪಷ್ಟ ಕಲ್ಪನೆ ಸಾಧ್ಯವಾಗಲಿದ್ದು ಅಲ್ಲಿಂದಲೇ ಒಳಗೊಳ್ಳುವಿಕೆ ಆರಂಭವಾಗುತ್ತದೆ ಎಂದರು.
ಉದ್ದೇಶಿತ ಸಬಲೀಕರಣ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಶಯಗಳ ಆಶಯದ ಸಾಕಾರಕ್ಕೆ ಪೂರಕವಾದವರೊಂದಿಗೆ ಮಾತ್ರ ಹಣಕಾಸು ಸಹಾಯ ಪಡೆಯಬೇಕು. ಇದಾಗದಿದ್ದರೆ ಸಂಘರ್ಷ ಏರ್ಪಡುವ ಮೂಲಕ ಮೂಲ ಆಶಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಎಚ್ಚರಿಸಿದ ಅವರು, ಭಾಷೆಯ ವಿಷಯವಾಗಿ ಇಂಗ್ಲಿಷೇತರ ಜನರನ್ನು ತಲುಪಲು ಆದ್ಯತೆ ಕೊಡಬೇಕೆಂದರು.

ನವೋದ್ಯಮಗಳಿಗೆ ಸೂಕ್ತ ಹಣಕಾಸು ನೆರವು ದೊರೆಯಲು ಪಾರದರ್ಶಕತೆ ಎಷ್ಟು ಮುಖ್ಯವೋ ಉದ್ದೇಶಿತ ಗುರಿ ಸಾಧಿಸಲು ಸೂಕ್ತ ಹೂಡಿಕೆದಾರರೂ ಕೂಡ ಅಷ್ಟೇ ಮುಖ್ಯ ಎಂದು ಕ್ರೆಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉದಯ್ ಕುಮಾರ್ ಹೆಬ್ಬಾರ್ ತಿಳಿಸಿದರು.

ಕರಕುಶಲಕರ್ಮಿಗಳ ಕ್ಷೇತ್ರದಂತಹ ಅಸಂಘಟಿತ ಮತ್ತು ಯಾರೂ ಮುಟ್ಟದ ವಲಯಗಳಲ್ಲಿ ಉದ್ಯಮ ಕಟ್ಟುವುದು ಬಹಳ ಸವಾಲಿನ ಕೆಲಸ ಎಂದು ಲೇಬರ್ನೆಟ್ ನ ಸಿಇಒ ಗಾಯತ್ರಿ ವಾಸುದೇವನ್ ಹೇಳಿದರು. ಹಾಗೆಯೇ ವ್ಯವಹಾರಿಕವಾಗಿ ಉದ್ದಿಮೆ ನಡೆಸುವುದು ಮತ್ತು ಸೂಕ್ತ ತಾಂತ್ರಿಕ ಬೆಂಬಲ ಪಡೆಯುವುದು ಮುಖ್ಯವಾಗುತ್ತದೆ. ಯಾವಾಗಲೂ ಹಣಕಾಸು ನೆರವೂ ತಾನಾಗೇ ಬರುವುದಿಲ್ಲ. ಇದೊಂದು ರೀತಿಯಲ್ಲಿ ಒಪ್ಪಿತ ಮದುವೆಯಂತೆ ನಡೆಯಬೇಕು. ಸೂಕ್ತವಾಗಿ ಬ್ರ್ಯಾಂಡಿಂಗ್ ಮಾಡುವುದು ಮತ್ತು ಅದನ್ನು ಸಂಬಂಧಿಸಿದವರಿಗೆ ಹೇಗೆ ತಲುಪಿಸುತ್ತೀರಿ ಎಂಬುದರ ಮೇಲೆ ಯಶಸ್ಸು ನಿಂತಿರುತ್ತದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನಗಳ ಕಸವನ್ನು ಸಂಸ್ಕರಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಫೂಲ್.ಕೋನ ಸಂಸ್ಥಾಪಕ ಅಂಕಿತ್ ಅಗರವಾಲ್ ಮಾತನಾಡಿ, ಯಾವುದೇ ರೀತಿಯ ಗ್ರಾಹಕರು ಮತ್ತೆ ಮತ್ತೆ ಬಂದಾಗಲೇ ಯಾವುದೇ ಉದ್ಯಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಗುಣಮಟ್ಟವೊಂದನ್ನೇ ಆಧಾರವಾಗಿಟ್ಟುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಟಾಟಾ ಟ್ರಸ್ಟ್ ನ ಕಲೆಕ್ಟಿವ್ಸ್ ಫಾರ್ ಇಂಟಗ್ರೇಟೆಡ್ ಲೈವ್ಲಿಹುಡ್ ಇನಿಷಿಯೇಟಿವ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ನೀಲಂ ಮಾತನಾಡಿ, ದೀರ್ಘಕಾಲೀನ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ವ್ಯವಸಾಯ, ಜಾನುವಾರುಗಳು, ನೀರು ನಿರ್ವಹಣೆ ಹಾಗೂ ಗ್ರಾಮೀಣ ಭಾಗಗಳ ಇತರೆ ವಲಯಗಳಲ್ಲಿ ಹೇಗೆ ವ್ಯವಹಾರ ಮಾಡಬೇಕೆಂಬುದನ್ನು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ನೈಸ್ ಆರ್ಗ್ ನ ಸಹ ಸಂಸ್ಥಾಪಕ ಸಂಜಯ್ ಆನಂದರಾಮ್ ಮಾತನಾಡಿದರು. ಸೋಷಿಯಲ್ ಆಲ್ಫಾ ಸಂಸ್ಥಾಪಕರಾದ ಮನೋಜ್ ಕುಮಾರ್ ಗೋಷ್ಠಿಯನ್ನು ನಡೆಸಿಕೊಟ್ಟರು.

ಚಿತ್ರ : ಇಂಟರ್ ನೆಟ್

key words : Karnataka-Bangalore-tech-summit-BTS-harish.hande