ಕಾನೂನು ಬಾಹಿರವಾಗಿ ಕಾರ್ಖಾನೆ ಮುಚ್ಚಿ, ಕಾರ್ಮಿಕರ ಹೊರಹಾಕಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ನವೆಂಬರ್,06,2020(www.justkannada.in) :  ಜಾಯ್ ಜೆಎಸ್ ಪೇಪರ್ ರೀ ಸೈಕ್ಲಿಂಗ್ ಪ್ರೈ.ಲಿ ಕಾನೂನು ಬಾಹಿರವಾಗಿ ಕಾರ್ಖಾನೆಯನ್ನು ಮುಚ್ಚಿ ಕಾರ್ಮಿಕರನ್ನು ಹೊರಹಾಕಿರುವುದನ್ನು ವಿರೋಧಿಸಿ ಜಾಯ್ ಜೆಎಸ್ ಪೇಪರ್ ರೀ ಸೈಕ್ಲಿಂಗ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು  ಕಾರ್ಖಾನೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಯೂನಿಟ್ ಅಧ್ಯಕ್ಷ ರವಿ ಮಾತನಾಡಿ, ನಂಜನಗೂಡಿನಲ್ಲಿರುವ ಜಾಯ್ ಜೆಎಸ್ ಪೇಪರ್ ರೀ ಸೈಕ್ಲಿಂಗ್ ಪ್ರೈ ಲಿ ಕಾರ್ಖಾನೆಯಲ್ಲಿ ಸುಮಾರು ೩೫ ಮಂದಿ ಖಾಯಂ ಕೆಲಸಗಾರರು ಹಾಗೂ ೬೦ಮಂದಿ ಕಾಂಟ್ರ್ಯಾಕ್ಟ್ ಕೆಲಸಗಾರರು ಮತ್ತು ಕಚೇರಿ ಸಿಬ್ಬಂದಿ ೨೦, ಒಟ್ಟು ಸುಮಾರು ೧೦೦ಕ್ಕೂ ಹೆಚ್ಚು ಕೆಲಸಗಾರರಿದ್ದು, ಕಂಪನಿಯ ಆಡಳಿತ ವರ್ಗ ಯಾವುದೇ ಸೂಚನೆ ನೀಡದೆ ಕಾರ್ಖಾನೆಯನ್ನು ಮುಚ್ಚಿ ಆದೇಶ ಹೊರಡಿಸಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ಇದರಿಂದಾಗಿ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರೆಲ್ಲರೂ ೩೫ರಿಂದ ೪೦ ವರ್ಷದವರಾಗಿದ್ದು ಅವರ ಮುಂದಿನ ಭವಿಷ್ಯವೇ ಮಸುಕಾಗಿದೆ ಎಂದು ಕಿಡಿ ಕಾರಿದರು.
ಮಾಲೀಕರು ಆಡಳಿತ ವರ್ಗದ ಸಿಬ್ಬಂದಿಗೆ ಈಗಲೂ ಸಂಬಳ ಪಾವತಿಸುತ್ತ ಕಂಪನಿಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಖಾಯಂ ನೌಕರರನ್ನು ಹೊರಗೆ ಕಳಿಸಿ ಗುತ್ತಿಗೆ ಕೆಲಸಗಾರರಿಂದ  ಕಡಿಮೆ ವೇತನದಲ್ಲಿ ಹೆಚ್ಚು ಉತ್ಪಾದನೆ ಮಾಡಿಸಿಕೊಳ್ಳುವ ಹುನ್ನಾರ ಇದಾಗಿದೆ ಎಂದು ದೂರಿದರು.

ಆಡಳಿತ ವರ್ಗದವರು ಜನವರಿ ಅಥವಾ ಫೆಬ್ರವರಿಯ ಸಮಯದಲ್ಲಿ ಕಾರ್ಖಾನೆಯನ್ನು ಪುನರಾರಂಭಿಸುವ ಸಾಧ್ಯತೆ ಇದೆ. ಆಗ ಸಂಪೂರ್ಣ ಗುತ್ತಿಗೆ ಕೆಲಸಗಾರರನ್ನು ತೆಗೆದುಕೊಂಡು ಕೆಲಸ ಆರಂಭಿಸುವ ಸಾಧ್ಯತೆ ಇದೆ. ಇದು ಆಡಳಿತ ವರ್ಗದ ಪಿತೂರಿ. ಹೀಗಾಗಿ ನಮ್ಮ ಕುಟುಂಬ ಹಾಗೂ ನಮ್ಮ ಕೆಲಸವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

Illegally-Close-factory-Workers-Expelled-Protest-condemnation

ಪ್ರತಿಭಟನೆಯಲ್ಲಿ ಅಧ್ಯಕ್ಷ ಹೆಚ್.ಆರ್.ಶೇಷಾದ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

key words : Illegally-Close-factory-Workers-Expelled-Protest-condemnation