ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ-ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಅಕ್ಟೋಬರ್,20,2021(www.justkannada.in):  ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಹೂಡಿಕೆದಾರರು ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಲಿದ್ದು, ಸೂಕ್ತ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ನವೆಂಬರ್ ನಲ್ಲಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂದು ಐಟಿ, ಬಿಟಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ರಾಜ್ಯ ಸರಕಾರದ ನಿಯೋಗದ ಭಾಗವಾಗಿ ತಾವು ಕೈಗೊಂಡಿದ್ದ ನಾಲ್ಕು ದಿನಗಳ ತಮ್ಮ ದುಬೈ ಪ್ರವಾಸವನ್ನು ಮುಗಿಸಿ ವಾಪಸ್ ಬಂದ ಹಿನ್ನೆಲೆಯಲ್ಲಿ  ಸಚಿವ ಅಶ್ವಥ್ ನಾರಾಯಣ್ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು

ಹೂಡಿಕೆಗೆ ಕರ್ನಾಟಕವು ಪ್ರಶಸ್ತ ತಾಣವೆನ್ನುವುದು ಯುಎಇ, ಖತಾರ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾದ ಉದ್ಯಮಿಗಳಿಗೆ ಮನದಟ್ಟಾಗಿದೆ. ಇದರ ಫಲವಾಗಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಒಂದು ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ವಿಶ್ವ ದರ್ಜೆಯ `ಡಿಸೈನ್ ಡಿಸ್ಟ್ರಿಕ್ಟ್’ ಮೈದಾಳಲಿದೆ. ಇದು ಗುಣಮಟ್ಟದಲ್ಲಿ ದುಬೈ ಕೇಂದ್ರಕ್ಕಿಂತಲೂ ಉತ್ಕೃಷ್ಟವಾಗಿರಲಿದೆ ಎಂದು ಅವರು ಮಾಹಿತಿ ನೀಡಿದರು.

ಉದ್ದೇಶಿತ ಡಿಸೈನ್ ಡಿಸ್ಟ್ರಿಕ್ಟ್ 100ರಿಂದ 150 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದರಲ್ಲಿ ಉದ್ಯಮರಂಗಕ್ಕೆ ಬೇಕಾಗುವ ಪ್ರತಿಯೊಂದೂ ವಸ್ತುವನ್ನೂ ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು. ಇದು ಔದ್ಯಮಿಕ ವಿನ್ಯಾಸ, ಕಲೆ ಮತ್ತು ಫ್ಯಾಷನ್ ಸಂಸ್ಕೃತಿಗಳ ಸಂಗಮವಾಗಲಿದ್ದು, ಇಲ್ಲಿ `ಬೆಂಗಳೂರು ಡಿಸೈನ್ ಫೆಸ್ಟಿವಲ್’ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ವಿವರಿಸಿದರು.

ಬೆಂಗಳೂರಿನಲ್ಲಿ ವಾಟರ್ ಥೀಮ್ ಪಾರ್ಕ್ ಸ್ಥಾಪಿಸುವ ಸಂಬಂಧ ದುಬೈನ ಭೂ  ಅಭಿವೃದ್ಧಿ ಸಚಿವರೊಂದಿಗೆ ನಡೆಸಿರುವ ಮಾತುಕತೆ ಕೂಡ ಫಲಪ್ರದವಾಗಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಎವೊಲೆನ್ಸ್ ಸಮೂಹ, ಕ್ರೆಸೆಂಟ್, ಡೆಕರ್ ಅಂಡ್ ಹಲಾಬಿ, ಆಸ್ಟರ್ ಡಿಎಂ ಹೆಲ್ತ್ ಕೇರ್ ಮತ್ತು ಮೈತ್ರಾ ಹೈಟೆಕ್ ಆಸ್ಪತ್ರೆಗಳ ಸಮೂಹಗಳು ರಾಜ್ಯದಲ್ಲಿ ಸದ್ಯದಲ್ಲೇ ಹೂಡಿಕೆ ಮಾಡಲಿವೆ. ಇದರಿಂದ ಸರಕು ಸಾಗಣೆ, ಆರೋಗ್ಯ, ಶಿಕ್ಷಣ, ಬಂದರು, ಯೋಗಕ್ಷೇಮ ಮುಂತಾದ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು  ಸಚಿವ ಅಶ್ವಥ್ ನಾರಾಯಣ್ ನುಡಿದರು.

ಅಲ್ಲಿನ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ ಗ್ರೂಪ್ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹಂತಹಂತವಾಗಿ 3,500 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರ ಜತೆಗೆ ಈ ಸಮೂಹವು ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಸದ್ಯದಲ್ಲೇ ಆರಂಭಿಸಲಿದೆ. ಈ ಸಂಬಂಧದ ಒಡಂಬಡಿಕೆಗೆ ದುಬೈನಲ್ಲೇ ಅಂಕಿತ ಹಾಕಲಾಗಿದೆ ಎಂದು ಅಶ್ವತ್ಥನಾರಾಯಣ್ ತಿಳಿಸಿದರು.

ಹೆಸರಾಂತ ಮೈತ್ರಾ ಆಸ್ಪತ್ರೆಗಳ ಸಮೂಹವು ಬೆಂಗಳೂರಿನಲ್ಲಿ ರೋಬೋಟಿಕ್ ತಂತ್ರಜ್ಞಾನವುಳ್ಳ ಹೈಟೆಕ್ ಆಸ್ಪತ್ರೆಯನ್ನು ಸ್ಥಾಪಿಸಲು ಮುಂದೆ ಬಂದಿದೆ. ಇದರಿಂದಾಗಿ ಅಮೆರಿಕ ಸೇರಿದಂತೆ ಹಲವು ವಿದೇಶಗಳ ಜನರು ಕೂಡ ಅತ್ಯುತ್ತಮ ಚಿಕಿತ್ಸೆಗಾಗಿ ನಮ್ಮ ರಾಜಧಾನಿಗೆ ಬರುವಂತಾಗುತ್ತದೆ.  ಇದರ ಜತೆಗೆ ಆಸ್ಟರ್ ಸಮೂಹವು ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳನ್ನು ಸ್ಥಾಪಿಸಲು ಒಲವು ತೋರಿದೆ ಎಂದು ಅವರು ಹೇಳಿದರು.

ಯುಎಇ ಉದ್ಯಮಿಗಳು ಭಾರತದಲ್ಲಿ ಸದ್ಯದಲ್ಲೇ 125 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ಹೂಡಲಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಹರಿದು ಬರಲಿದೆ. ಈ ಹೂಡಿಕೆದಾರರಲ್ಲಿ ಉದ್ಯಮಿಗಳ ಜೊತೆಗೆ ವೆಂಚರ್ ಕ್ಯಾಪಿಟಲಿಸ್ಟ್ಸ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ಸಚಿವ ಅಶ್ವತ್ ನಾರಾಯಣ್ ಮಾಹಿತಿ ನೀಡಿದರು.

ಇದಷ್ಟೆ ಅಲ್ಲದೆ, ಶಿಕ್ಷಣ ರಂಗದಲ್ಲಿ ರಾಜ್ಯವು ಮಾಡಿರುವ ಸಾಧನೆಗಳಿಂದ ಹಲವು ವಿದೇಶ ವಿ.ವಿ.ಗಳು ಪ್ರಭಾವಿತವಾಗಿವೆ. ಹೀಗಾಗಿ ಅವು ವಿಶೇಷವಾಗಿ ಬೆಂಗಳೂರಿನಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬಂದಿವೆ. ಈ ಸಂಬಂಧ ಶೀಘ್ರದಲ್ಲೇ ಒಡಂಬಡಿಕೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Key words: Huge- investment – UAE – state-Minister -Ashwath Narayan