ಐತಿಹಾಸಿಕ ಕರಗ ಉತ್ಸವ : ಮತ್ತೊಂದು ಸಭೆ ಕರೆದು ಅಂತಿಮ ತೀರ್ಮಾನ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ..

ಬೆಂಗಳೂರು,ಏಪ್ರಿಲ್,5,2021(www.justkannada.in): ನಗರದ ಪ್ರತಿಷ್ಠಿತ ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ದೇವಸ್ಥಾನದ ಒಳಗೆ ಮಾತ್ರ ಕರಗ ಆಚರಿಸಲು ಅವಕಾಶ ನೀಡುವ ಬಗ್ಗೆ ಇಂದು ಚರ್ಚಿಸಲಾಗಿದ್ದು, ಉತ್ಸವ ಸಮಿತಿ ರಚನೆಯಾದ ಬಳಿಕ ಮತ್ತೊಂದು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತಾ ರವರು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹಿನ್ನೆಲೆ ಐತಿಹಾಸಿಕ ಕರಗ ಉತ್ಸವ ನಡೆಸುವ ಸಂಬಂಧ ಇಂದು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತಾ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಮಾನ್ಯ ಶಾಸಕರು ಶ್ರೀ ಉದಯ್ ಬಿ ಗರುಡಾಚಾರ್, ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಪಿ.ಆರ್.ರಮೇಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ಜೆ.ಮಂಜುನಾಥ್, ವಿಶೇಷ ಆಯುಕ್ತರುಗಳಾದ ಶ್ರೀ ತುಳಸಿ ಮದ್ದಿನೇನಿ, ಶ್ರೀ ರಂದೀಪ್, ಶ್ರೀ ಮನೋಜ್ ಜೈನ್, ವಲಯ ಜಂಟಿ ಆಯುಕ್ತರುಗಳಾದ ವೀರಭದ್ರಸ್ವಾಮಿ, ಶಿವಸ್ವಾಮಿ, ಪಲ್ಲವಿ,  ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮುಖ್ಯ ಆಯುಕ್ತರು ಮಾತನಾಡಿ, ಪ್ರತಿಷ್ಠಿತ ಕರಗ ಉತ್ಸವವನ್ನು ಹಿಂದಿನಿಂದಲೂ ವೈಭವದಿಂದ ಆಚರಿಸಲಾಗುತ್ತಿದೆ. ದೇವಸ್ಥಾನದಲ್ಲಿ ವಿಧಿ-ವಿಧಾನಗಳ ಮೂಲಕ ಪೂಜೆ ಮಾಡುವುದು ಹಾಗೂ ರಾತ್ರಿ ವೇಳೆ ಮರೆವಣಿಗೆ ಮಾಡುವುದು ಪ್ರತೀತಿಯಲ್ಲಿದೆ. ಕಳೆದ ಬಾರಿ ಕೋವಿಡ್ ಸೋಂಕು ಇದ್ದ ಹಿನ್ನೆಲೆ ದೇವಸ್ಥಾನದಲ್ಲಿ ಮಾತ್ರ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು. ವ್ಯವಸ್ಥಾಪನಾ ಸಮಿತಿ ಅನ್ವಯ ಕರಗ ಉತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಸದ್ಯ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿರದ ಕಾರಣ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಉತ್ವವ ಮಾಡಬೇಕಾದರೆ ಅದಕ್ಕೆ ಉತ್ಸವ ಸಮಿತಿ ರಚಿಸುವ ಅವಶ್ಯಕವಿರುತ್ತದೆ. ಈ ನಿಟ್ಟಿನಲ್ಲಿ ಉತ್ಸವ ಸಮಿತಿ ರಚಿಸಲು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.Illegally,Sand,carrying,Truck,Seized,arrest,driver

ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಕೆಲ ನಿಯಮ ಮತ್ತು ನಿರ್ಭಂಧಗಳನ್ನು ವಿಧಿಸಿದ್ದು, ಅದು ಏಪ್ರಿಲ್ ರವರೆಗೆ 20 ರವರೆಗೆ ಅಸ್ತಿತ್ವದಲ್ಲಿರಲಿದೆ. ಕೋವಿಡ್ ಎರಡನೇ ಅಲೆ ಎಲ್ಲರ ಗಮನದಲ್ಲಿದ್ದು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿಭಂಧನೆಗಳನ್ನು ವಿಧಿಸುವ ಅಗತ್ಯವಿದೆ. ಈ ಸಂಬಂಧ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ಜಿಲ್ಲಾಧಿಕಾರಿಗಳು ಹಾಗೂ ಉತ್ಸವ ಸಮಿತಿ ಜೊತೆ ಸಮಾಲೋಚನೆ ಮಾಡಿ ಮತ್ತೊಂದು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ಕರಗ ದೇವಸ್ಥಾನವು ಮುಜರಾಯಿ ಇಲಾಖೆ ಬಿ ಕೆಟಗರಿ ಅಡಿಯಲ್ಲಿ ಬರಲಿದ್ದು, ಕರಗ ಉತ್ಸವವು ಏಪ್ರಿಲ್ 19 ರಿಂದ ಏಪ್ರಿಲ್ 27 ರವರೆಗೆ ನಡೆಯಲಿದೆ. ಅದಕ್ಕೆ ಉತ್ಸವ ಸಮಿತಿಯನ್ನು ರಚಿಸಿ ಮುಜರಾಯಿ ಇಲಾಖೆಯ ಜೊತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕೋವಿಡ್ ಎರಡನೇ ಅಲೆ ಇರುವುದರಿಂದ, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ: ಮುಖ್ಯ ಆಯುಕ್ತರು

ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಉಲ್ಭಣಗೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಎಲ್ಲಾ ನಾಗರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡದೇ ಇರುವವರಿಗೆ ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿ ದಂಡ ವಿಧಿಸುತ್ತಿದ್ದಾರೆ. ಇದರ ಜೊತೆಗೆ 2,000 ಹೋಮ್ ಗಾರ್ಡ್ಸ್ ಗಳನ್ನು ನಿಯೋಜನೆ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.

ನಗರದಲ್ಲಿ ಲಸಿಕೆ ನೀಡುವ ಸಂಬಂಧ ಈಗಾಗಲೇ ಖಾಸಗಿ ಆಸ್ಪತ್ರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಇಂಡಸ್ಟ್ರೀಸ್ ಜೊತೆ ಚರ್ಚೆ ಮಾಡಲಾಗಿದ್ದು, ಅವರ ಸ್ಥಳದಲ್ಲಿಯೇ ಲಸಿಕೆ ನೀಡುವ ಕ್ರಮಕ್ಕೆ ಮುಂದಾಗಲಾಗುತ್ತಿದೆ. ಜೊತೆಗೆ ಲಸಿಕಾ ಕ್ರಂದ್ರಗಳನ್ನು ಹೆಚ್ಚಳ ಮಾಡಲು ಸೂಕ್ತಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಏ. 20 ರಷ್ಟು ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಸಿಗೆ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಂಡು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್ ಸೋಂಕು ಬಂದವರು ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯುವ ವ್ಯವಸ್ಥೆಯಿಲ್ಲದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹದು. ಈ ಪೈಕಿ ಈಗಾಗಲೇ ಹೆಚ್.ಎ.ಎಲ್ ಹಾಗೂ ಹಜ್ ಭವನ್ ನಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ ಪ್ರತೀ ವಲಯಗಳಲ್ಲಿಯೂ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

Key words: Historical- karaga utsava-final decision – another meeting – BBMP -Chief Commissioner -Gaurav Gupta.