ಮೈಸೂರಿನಲ್ಲಿ ನಡೆದ ಆ ಒಂದು ಘಟನೆ : ಮಾ.ಹಿರಣಯ್ಯ ಅವರು ಕ್ಷಮೆ ಕೋರಿ ಇನ್ನೆಂದು ಸಾರ್ವಜನಿಕವಾಗಿ ಕಾಣಿಸದಂತೆ ಮಾಡಿತ್ತು..!

 

ಮೈಸೂರು, ಮೇ 02, 2019 : (www.justkannada.in news) : ಮೊನಚು ಮಾತಿನ ಮೂಲಕವೇ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಮಾಸ್ಟರ್ ಹಿರಣಯ್ಯಗೆ ಅವರ ` ಮಾತೇ ಮುಳುವಾದ ‘ ಘಟನೆ ಹಾಗೂ ಆ ಕಾರಣಕ್ಕೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಕಠಿಣ ತೀರ್ಮಾನಕ್ಕೆ ಬರಲು ಕಾರಣವಾದದ್ದು ಮೈಸೂರು.
ಇಂದಿನ ಸರಿಯಾಗಿ ಐದು ವರ್ಷಗಳ ಹಿಂದೆ ಆ ಘಟನೆ ನಡೆದಿತ್ತು. ಮೇ 11, 2014 ರ ಭಾನುವಾರ ಮೈಸೂರಿನ ‘ ನಾದಬ್ರಹ್ಮ ಸಂಗೀತ ಸಭಾ’ ದಲ್ಲಿ ನಾಗನವ ಕಲಾ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಳ್ಳಲಾದ ‘ನಾಗಾ’ಸ್ ನವಸಿರಿ ಪ್ರಶಸ್ತಿ’ ಸ್ವೀಕರಿಸಿದ ಬಳಿಕ ನಡೆಯಿತು ಒಂದು ಅತಾಚುರ್ಯ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಹಿರಿಯ ಕಲಾವಿದ ಹಿರಣಯ್ಯ, ನಾಲಿಗೆ ಎಡವಿಬಿಟ್ಟರು. ಕೂಡಲೇ ತಪ್ಪಿನ ಅರಿವಾಗಿ ಕ್ಷಮೆಯನ್ನು ಯಾಚಿಸಿದರು. ಈ ಬಗ್ಗೆ ಏನು ಅರಿವಿರದ ಸಿದ್ದರಾಮಯ್ಯ, ಹಿರಣಯ್ಯ ಅವರನ್ನು ಕ್ಷಣಮಾತ್ರದಲ್ಲೇ ಕ್ಷಮಿಸಿ ದೊಡ್ಡತನ ತೋರಿದರು.

ಏನಿದು ಘಟನೆ :
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮೇ.11, 2014 ರ ಭಾನುವಾರ ಬೆಳಗ್ಗೆ 11.30ಕ್ಕೆ ನಾಗನವ ಕಲಾ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಳ್ಳಲಾದ ‘ನಾಗಾ’ಸ್ ನವಸಿರಿ ಪ್ರಶಸ್ತಿ’ ಸ್ವೀಕರಿಸಿ ಮಾಸ್ಟರ್ ಹಿರಣ್ಣಯ್ಯ ಮಾತನಾಡಿದರು. ಈ ವೇಳೆ ‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲ್ಲುವವರೆಗೆ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಆದರೆ ಈಗ ಗೆದ್ದ ಬಳಿಕ ಜನರ ‘…’ ಕೆಲಸ ಮಾಡಿದ್ದಾರೆ ಎಂದು ತಮ್ಮ ಮಾತಿನ ಓಘದಲ್ಲಿ ಹೇಳಿದರು. ಇದೇ ಭರದಲ್ಲಿ ಸೋನಿಯಾ ಗಾಂಧಿ ಬಗ್ಗೆಯೂ ಕೆಲ ಅಪದ್ಧ ನುಡಿದರು.
ಮಾಧ್ಯಮಗಳಲ್ಲಿ ಇದು ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದಂತೆ ಕಾಂಗ್ರೆಸ್ ಯುವ ಮುಖಂಡ ಲೋಕೇಶ್ ವಿ.ಪಿಯಾ ( ಹಾಲಿ ಕಾರ್ಪೊರೇಟರ್ ) ನೇತೃತ್ವದಲ್ಲಿ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಸಭಾಂಗಣದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಆಯೋಜಕರು ‘‘ಅದು ಮಾಸ್ಟರ್ ಹಿರಣ್ಣಯ್ಯ ಅವರ ವೈಯಕ್ತಿಕ ಹೇಳಿಕೆ’’ ಎಂದು ಉತ್ತರ ನೀಡಿದರು. ಆಗ ಕೋಪಗೊಂಡ ಕಾರ್ಯಕರ್ತರು ಕುರ್ಚಿ, ಪೋಡಿಯಂ ಅನ್ನು ಆಕ್ರೋಶದಿಂದ ಪುಡಿ ಮಾಡಿ ಮಾಸ್ಟರ್ ಹಿರಣ್ಣಯ್ಯ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಅವರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.

Hirannaiah, known for his political satire got the taste of his own meal five years back
ಆಕ್ರೋಶ ಭರಿತ ಅಭಿಮಾನಿಗಳು..

ಈ ಬೆಳವಣಿಗೆ ಸಗ ಬ್ರೇಕಿಂಗ್ ನ್ಯೂಸ್ ಆಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಯಿತು. ಕೂಡಲೇ ಎಚ್ಚೆತ್ತುಕೊಂಡ ಮಾಸ್ಟರ್ ಹಿರಣ್ಣಯ್ಯ ಖಾಸಗಿ ವಾಹಿನಿ ಮೂಲಕ ಕ್ಷಮೆಯಾಚಿಸಿದರು. ‘‘ವಯೋಮಾನದ ಸಮಸ್ಯೆಯಿಂದ ಈ ರೀತಿಯ ಮಾತು ಆಡಿರಬಹುದು. ಯಾವುದೇ ಉದ್ದೇಶಪೂರ್ವಕವಾಗಿ ಈ ಮಾತು ಆಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಷಯವನ್ನು ದೊಡ್ಡದು ಮಾಡಬಾರದು. ಈ ಬಗ್ಗೆ ನಾನು ನಾಡಿನ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ’’ಎಂದರು. ಆದರೂ ಹಿರಣ್ಣಯ್ಯ ಅವರ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರೆದವು.

ಸಿಎಂ ಮನೆಗೆ ದೌಡು:
ಪ್ರಕರಣದ ಗಂಭೀರತೆ ಅರಿತ ಮಾಸ್ಟರ್ ಹಿರಣ್ಣಯ್ಯ, ಸಿಎಂ ಅವರ ರಾಮಕೃಷ್ಣ ನಗರದಲ್ಲಿರುವ ನಿವಾಸಕ್ಕೆ ತೆರಳಿ ಕ್ಷಮೆ ಯಾಚಿಸಿದರು.‘‘70 ವರ್ಷದ ಸುದೀರ್ಘ ರಂಗಭೂಮಿ ಅನುಭವದಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇನೆ. ನನ್ನ ಹೇಳಿಕೆಗೆ ಇಷ್ಟೊಂದು ವಿರೋಧ ಬರುತ್ತದೆ ಎಂದು ಗೊತ್ತಿರಲಿಲ್ಲ. ಆಡಿದ ಮಾತಿನ ಬಗ್ಗೆ ಅರಿವಾಗಿದ್ದು ದಯವಿಟ್ಟು ಕ್ಷಮಿಸಿ’’ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಕ್ಷಮೆಯಾಚಿಸಿ ಮುಂದೆ ಇನ್ನೆಂದೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದುಬಿಟ್ಟರು.

ಸ್ಥಳದಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯಿಸಿ, ‘‘ನಾನು ಹೇಳಿಕೆ ಗಮನಿಸಿಲ್ಲ. ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿರುವುದರಿಂದ ಕ್ಷಮೆಗಿಂತ ಯಾವುದೂ ದೊಡ್ಡದಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಈ ವಿಷಯವನ್ನು ದೊಡ್ಡದು ಮಾಡಬಾರದು’’ ಎಂದು ಹೇಳುವ ಮೂಲಕ ದೊಡ್ಡತನ ಪ್ರದರ್ಶಿಸಿದರು.

ಮಾಸ್ಟರ್ ಹಿರಣ್ಣಯ್ಯ ಅವರು ಸಿಎಂ ನಿವಾಸಕ್ಕೆ ಭೇಟಿ ನೀಡಿರುವುದನ್ನು ತಿಳಿದ ಕಾರ್ಯಕರ್ತರು ನಿವಾಸದ ಮುಂದೆ ಬಂದು ಹಿರಣ್ಣಯ್ಯ ಅವರು ಕ್ಷಮೆ ಕೋರುವಂತೆ ಪಟ್ಟು ಹಿಡಿದರು. ಆಗ ಸಿಎಂ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಎಸ್ಕಾರ್ಟ್ ವ್ಯವಸ್ಥೆ:
ಸಿದ್ದರಾಮಯ್ಯ ಅವರು ಪ್ರಕರಣವನ್ನು ಹೆಚ್ಚು ಬೆಳೆಸದಂತೆ ವಿನಂತಿಸಿಕೊಂಡರೂ, ಕಾರ್ಯಕರ್ತರು ಹಿರಣ್ಣಯ್ಯ ವಿರುದ್ಧ ಹರಿಹಾಯ್ದರು. ಇದರಿಂದ ಕೋಪಗೊಂಡು ಕಾರ್ಯಕರ್ತರನ್ನು ಗದರಿದ ಸಿಎಂ ಖುದ್ದು ಮನೆ ಗೇಟ್‌ವರೆಗೆ ಬಂದು ಎಸ್ಕಾರ್ಟ್ ವಾಹನದ ರಕ್ಷಣೆಯೊಂದಿಗೆ ಹಿರಣ್ಣಯ್ಯ ಅವರನ್ನು ಬೀಳ್ಕೊಟ್ಟರು. ‘‘ಮೈಸೂರು ವ್ಯಾಪ್ತಿವರೆಗೆ ಎಸ್ಕಾರ್ಟ್ ಒದಗಿಸುವಂತೆ’’ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ENGLISH SUMMARY :

Thespian Master Hirannaiah, known for his political satire got the taste of his own meal five years back , after he made a derogatory comment against AICC president Sonia Gandhi and Chief Minister Siddaramaiah.

The angry supporters of the chief minister took to streets staging protests and burning the posters of Hirannaiah. However, the issue subsided later with Hirannaiah acting swiftly and tendering an apology in person to the chief minister at the latter.