ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಲಾಯರ್ ನೋಟೀಸ್ ಗಣೇಶ

ಪಟ್ ಅಂತ ಬಂದು ಬಿತ್ತು- ಆ ಪತ್ರ

ಅದೂ ರಜಾ ದಿನ

ಹೇಳಿಕೇಳಿ ಗಣೇಶನ ಹಬ್ಬ. ಇವತ್ತೂ ಕೆಲಸ ಮಾಡುವ ಪೋಸ್ಟಲ್ ಡಿಪಾರ್ಟ್ಮೆಂಟ್ ಇದೆಯಾ ಅಂತ ಆಶ್ಚರ್ಯ
ಆಯಿತು

ನನ್ನೆದುರು ನಿಂತಿದ್ದವನನ್ನು ಕೇಳಿದೆ. ‘ಇವತ್ತೂ ಪೋಸ್ಟ್ ಡಿಪಾರ್ಟ್ಮೆಂಟ್ ಕೆಲಸ ಮಾಡುತ್ತಾ’ ಅಂತ

ಆತ ನನ್ನನ್ನೇ ಕೆಕ್ಕರಿಸಿ ನೋಡಿ ‘ಇದು ಪೋಸ್ಟ್ ಅಲ್ಲ’ ಅಂದ

ಇನ್ನೇನು ಎನ್ನುವ ಕ್ವಶ್ಚನ್ ಮಾರ್ಕ್ ನನ್ನ ಮುಖದಲ್ಲಿ ಕಾಣಿಸಿತೇನೋ

‘ಇದು ಲಾಯರ್ ನೋಟಿಸ್, ನಾನು ಲಾಯರ್’ ಅಂದ

ಅರೆರೆ! ಗಣೇಶ ಹೇಳಿ ಕೇಳಿ ವಿಘ್ನ ನಿವಾರಕ ಅಂತದರಲ್ಲಿ ಅವನೇ ಯಾಕೆ ಫಿಟ್ಟಿಂಗ್ ಇಟ್ಟ ಅಂತ ನನ್ನ ಮುಖದಲ್ಲಿ ನೂರೆಂಟು ಪ್ರಶ್ನೆಗಳು ಬ್ಯಾಲೆ ಆಡಿದವು

ಆತನ ಮುಖ ನೋಡಿದೆ.. ಅವನೇನೂ ಉತ್ತರ ಹೇಳಲಿಲ್ಲ, ಬದಲಿಗೆ ನಿಂಗೈತೆ ಇವಾಗ ಎನ್ನುವ ಲುಕ್ ಕೊಟ್ಟು ನಿಂತಿದ್ದೆ

ಪತ್ರ ಆಚೆ ತೆಗೆದೆ

ಸಂಪಾದಕರೇ ಹುಷಾರ್ ಅನ್ನುವ ಸ್ಟೈಲ್ ನ ಒಕ್ಕಣೆ ಇತ್ತು
‘ನೀವು ನಮ್ಮ ಗಣೇಶನಿಗೆ ಅವಮಾನ ಮಾಡಿದ್ದೀರಿ..
ಆ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ
ಗಣೇಶನನ್ನು ಏನೆಂದುಕೊಂಡಿದ್ದೀರಿ
ಅವನಿಗೆ ಮರ್ಯಾದೆ ಕೊಡಬೇಕು ಅಂತ ನಿಮಗೆ ಗೊತ್ತಿಲ್ವಾ..??’
ಈ ಕ್ಷಣ ನಿಮ್ಮ ಪ್ರೋಗ್ರಾಮ್ ವಾಪಸ್ ತಗೊಳ್ದೆ ಹೋದ್ರೆ ಹುಷಾರ್ ಕೋರ್ಟ್ ಕಟ್ಟೆ ಹತ್ತಬೇಕಾಗುತ್ತೆ’

ತಕ್ಷಣ ನನ್ನ ತಲೆಯಲ್ಲಿ ಬಲ್ಬ್ ಹತ್ತಿತು

ಆಗಿದ್ದು ಇಷ್ಟೇ, ಗಣೇಶನ ಹಬ್ಬವನ್ನ ಸಖತ್ ಆಗಿ ಡಿಫೆರೆಂಟ್ ಆಗಿ ಆಚರಿಸಬೇಕು ಅಂತ ಯೋಚನೆ ಮಾಡಿದ್ದೆ

‘ಈಟಿವಿ’ಯಲ್ಲಿ ಠೀವಿಯಿಂದ ಗಣೇಶ ಓಡಾಡ್ಲಿ ಅನ್ನೋದು ನನ್ನ ಆಸೆ
ಅದಕ್ಕೆ ಕಾರಣಾನೂ ಇತ್ತು

ನಾನು ‘ಸಮಯ’ ಚಾನಲ್ ನಲ್ಲಿರೋವಾಗ ಫಿಲಂ ಸ್ಟಾರ್ ಗಣೇಶ ಸಿಕ್ಕಾಪಟ್ಟೆ ಹೈಟ್ ನಲ್ಲಿದ್ದ

ಆಗಲೇ ಗಣೇಶ ಹಬ್ಬ ಬಂತು.

ನಾನು ನಮ್ಮ ಹುಡುಗನ್ನ ಕರೆಸಿ ಗಣೇಶನ ಮುಖವಾಡ ಹಾಕಿಸಿದೆ
ಗಣೇಶನ ಮನೆ ಬಾಗಿಲು ಬಡಿದಾಗ ಆಚೆ ಬಂದ ಗೋಲ್ಡನ್ ಸ್ಟಾರ್ ತಬ್ಬಿಬ್ಬಾಗಿಬಿಟ್ಟ.

ಈ ಪ್ರೋಗ್ರಾಮ್ ಗೆ ‘ಗಣೇಶ ಮೀಟ್ಸ್ ಗಣೇಶ’ ಅಂತ ಹೆಸರುಕೊಟ್ಟಿದ್ದೆ.

ಸರಿ ಈಗಲೂ ಯಾಕೆ ಆಗ್ಬಾರ್ದು ಅಂತ ಒಂದು ಸಲ ಇಡೀ ಆಫೀಸ್ ನ ಎಲ್ಲರ ಮೇಲೆ ಕಣ್ಣಾಡಿಸಿದೆ.

ಆಗ ಸಿಕ್ಕಾಕಿಕೊಂಡಿದ್ದು ನಮ್ಮ ದುಷ್ಯಂತ ದೇರಾಜೆ ಮತ್ತೆ ಜನಾರ್ಧನ ಹೆಬ್ಬಾರ್

ಒಬ್ಬ ದ ಕ ಇನ್ನೊಬ್ಬ ಉ ಕ

ಹಾಗಾಗಿ ಇಬ್ಬರಿಗೂ ಯಕ್ಷಗಾನ, ತಾಳಮದ್ದಳೆ ಬ್ಯಾಕ್ ಗ್ರೌಂಡ್ ಇತ್ತು.

ಆಫೀಸ್ ಮೀಟಿಂಗ್ ನಲ್ಲೂ ಅಷ್ಟೇ
ಒಳ್ಳೆ ತಾಳ ಮದ್ದಳೆ ಸ್ಟೈಲ್ ನಲ್ಲೆ ವಿಷಯ ಮುಂದಕ್ಕೆ ಹೋಗಲು ಬಿಡದೆ ಒಂದೇ ವಿಷಯ ಹಿಡಕೊಂಡು ಕುಟ್ಟೋವ್ರು

ಇಬ್ಬರನ್ನೂ ಕರೆದು -ನೋಡು ಗುರೂ ಹೀಗೀಗೆ ಅಂದೆ

ಇಬ್ಬರೂ ಗಣೇಶ್ ವೇಷ ಧರಿಸೋದು ನಮ್ಮ ಆಫೀಸಿನಿಂದ ಹೊರಟು
ಊರು ಕೇರಿ ಮೆಜೆಸ್ಟಿಕ್ ಬಸ್ ಸ್ಟಾಂಡ್, ಗಾಂಧೀ ನಗರ, ಪೊಲೀಸ್ ಸ್ಟೇಷನ್ನು, ಬೀದಿ ಬದಿ ಅಂಗಡಿ ಎಲ್ಲಾ ಸುತ್ತಾಕಿ ಮತ್ತೆ ನಮ್ಮ ಆಫೀಸಿಗೆ ಬರೋದು ಅನ್ನೋದು ಪ್ಲಾನ್.

ಗಣೇಶನ ತುಂಬು ಭಕ್ತಿಯಲ್ಲಿರುವವರ ಮುಂದೆ ಅಚಾನಕ್ಕಾಗಿ ಗಣೇಶನೇ ಪ್ರತ್ಯಕ್ಷ ಆಗಿಬಿಟ್ರೆ..?

ಅವರ ರಿಯಾಕ್ಷನ್ ಹೇಗಿರುತ್ತೆ, ಜೊತೆಗೆ ಅವರು ಏನು ಕೇಳಿಕೊಳ್ಳಬಹುದು, ಏನು ಕಥೆ ಹೇಳಬಹುದು ಅನ್ನೋ ಕುತೂಹಲ ಇತ್ತು.

ಸರಿ ಜನಾರ್ಧನ್ ಹೆಬ್ಬಾರ್, ಅವನ ಹಿಂದೆ ನಮ್ಮ ದೊಡ್ಡ ಕ್ಯಾಮೆರಾ ಕ್ರ್ಯೂ ಹೊರಟೇಬಿಡ್ತು.

ಎಲ್ಲಾ ಕಡೆ ನಮ್ಮ ಗಣೇಶನ್ನ ನೋಡಿ ತಬ್ಬಿಕೊಂಡವರೆಷ್ಟು , ಮುತ್ತಿಟ್ಟವರೆಷ್ಟು, ಪ್ರೀತಿ ಕೊಟ್ಟೋರು ಎಷ್ಟು

ಆ ಗಣೇಶ್ ನಮ್ಮ ಸ್ಟಾಫ್ ಅನ್ನೂ ಬಿಡಲಿಲ್ಲ

ಒಬ್ಬಬ್ಬರ ಮುಂದೆಯೂ ನಿಂತು ಅವರನ್ನು ಕಾಡಿ ಗೋಳಾಡಿಸಿದ

ನಾನು ಸ್ಟುಡಿಯೋದಲ್ಲಿ ಏನೋ ನಿರ್ದೇಶನ ಕೊಡ್ತಾ ಇದ್ದೆ ಟೆಕ್ನಿಕಲ್ ಟೀಮ್ ಗೆ

ಹಿಂದಿರುಗಿ ನೋಡ್ತೀನಿ- ಅರೆ, ಗಣೇಶ..!!

ಸೀದಾ ಗಣೇಶ ಪ್ಯಾನೆಲ್ ಡಿಸ್ಕಷನ್ ಟೇಬಲ್ ಮೇಲೆ ನನ್ನೂ ಕರಕೊಂಡು ಹೋಗಿ ಕೂತೇ ಬಿಟ್ಟ

ಏನಿವಾಗ ಅನ್ನೋ ಥರ ಫಟಾಫಟ್ ಪ್ರಶ್ನೆ ಕೇಳಿದ

ನಾನು ನಗ್ತಾ ಕೂತ್ರೂ ಬಿಡಲಿಲ್ಲ.. ‘ಎಲ್ಲಾರ್ಗೂ ಬಯ್ತೀರಿ ಆಮೇಲೆ ಹೀಗೆ ನಕ್ಕು ಬಿಡ್ತೀರಿ ಇದು ಸರೀನಾ?’ ಅಂತ ಕ್ರಾಸ್ ಮಾಡಿದ
ಆಮೇಲೆ ನೀವೇನೋ ‘ವಾಕ್ ಅಂಡ್ ಟಾಕ್’ ಮಾಡ್ತೀರಂತೆ ದೇವೇಗೌಡರನ್ನೂ ನಗಿಸ್ತೀರಂತೆ, ಜಯಶ್ರೀ ಅಳೋ ಹಾಗೆ ಮಾಡ್ತೀರಂತೆ, ಸಿ ಎಂ ತಮ್ಮ ಲವ್ ಸ್ಟೋರಿ ಹೇಳೋ ಥರಾ ಮಾಡ್ತೀರಂತೆ
ದೇವಲೋಕದಲ್ಲೆಲ್ಲಾ ಅದೇ ಸುದ್ದಿ ನಡೀರಿ ನನ್ನ ಜೊತೆ ವಾಕ್ ಅಂಡ್ ಟಾಕ್ ಮಾಡಿ’ ಅಂತ ಎದ್ದೇ ಬಿಟ್ಟ

ಹೀಗೆ ಎಲ್ಲರ್ನೂ ಕಾಡಿಸ್ತಾ ಪೀಡಿಸ್ತಾ ಇದ್ದಾಗ ನೋಡ್ತಾನೆ ಎದುರುಗಡೆ ಇನ್ನೊಬ ಗಣಪ.

ದುಷ್ಯಂತ ದೇರಾಜೆ ಗಣಪನ ವೇಷದಲ್ಲಿ ಆರಾಮವಾಗಿ ಕೂತು ಯಾವುದೋ ಕೊಲೆ ಸುಲಿಗೆ ಸುದ್ದಿ ಎಡಿಟ್ ಮಾಡ್ತಿದ್ದ

ನೋಡಿದ ಈ ಗಣಪನಿಗೆ ಗಾಬರಿ ಆಗೋಯ್ತು
ಭೂಲೋಕದಲ್ಲಿ ಜನ ಏನನ್ನ ಬೇಕಾದ್ರೂ ಸೃಷ್ಟಿ ಮಾಡಿಬಿಡ್ತಾರೆ ಅಂತ
ಆ ಗಣಪನ ಜೊತೆ ವಾದಕ್ಕೆ ಶುರು ಮಾಡಿದ

ಇಷ್ಟೇ

ಅದನ್ನ ನಮ್ಮ ಇಡೀ ಟೀಮ್ ಮುತುವರ್ಜಿಯಿಂದ ಮಾಡಿತ್ತು.

ಎಲ್ಲರೂ ಸೇರಿ ಈ ಪ್ರಹಸನದ ಒಳ್ಳೆ ಪ್ರೊಮೊ ತಯಾರು ಮಾಡಿದ್ರು

ಯಾವಾಗದು ಪ್ರಸಾರ ಆಗೋದಿಕ್ಕೆ ಶುರುವಾಯ್ತೋ ಪಟ್ ಅಂತ ಬಂದು ಬಿದ್ದಿದ್ದು ಈ ಲಾಯರ್ ನೋಟಿಸ್

‘ಆಯ್ತು ಮಾರಾಯ ಅಂತ ಸಮಯ ಬಂದ್ರೆ ನಮ್ಮ ಇಬ್ರೂ ಗಣೇಶನ್ನ ಹೊತ್ತುಕೊಂಡೇ ಕೋರ್ಟ್ ಗೆ ಬರ್ತೀನಿ ಹೋಗು’ ಅಂತ ಸಾಗಿ ಹಾಕಿದೆ.