ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..

kannada t-shirts

ಚಿರಸ್ಮರಣೆ’ಯ ಪುಟಗಳಲ್ಲಿ
ಅಡ್ದಾಡುತ್ತಾ..
—–
ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ ನನ್ನ ಕಾರು ಇಳಿಯುತ್ತಿರುವಾಗ ಇನ್ನಿಲ್ಲದ ಮಳೆ.

ಎದುರು ರಸ್ತೆ ಇದೆ ಎನ್ನುವುದೇ ಕಾಣಿಸದಂತೆ ‘ಧೋ’ ಎಂದು ಸುರಿದ ಮಳೆ. ವೈಪರ್ ಗಳು ಗಂಟೆಗಟ್ಟಲೆ ಅಲ್ಲಾಡಿ ರಸ್ತೆ ಕಾಣಿಸಲು ಯತ್ನಿಸಿದರೂ ಉಹೂಂ, ಪಶ್ಚಿಮ ಘಟದ ಆ ಮಳೆ ಒಂದಿಷ್ಟೂ ಮಿಸುಕಲಿಲ್ಲ.

ಇನ್ನೆಲ್ಲಿ ಮುಂದೆ ಹೋಗುವ ಮಾತು ಎಂದು ಕೈಚೆಲ್ಲಿ ಬಿಡಬೇಕು ಎನಿಸಿತು.

ಇಲ್ಲ, ಹಾಗೆ ನಾವು ಖಂಡಿತ ಮಾಡಲು ಸಿದ್ದವಿರಲಿಲ್ಲ. ಯಾಕೆಂದರೆ ನಮ್ಮ ಗುರಿ ಇದ್ದದ್ದು ಅಂತಿಂತ ಊರಿನತ್ತ ಅಲ್ಲ. ಕಯ್ಯೂರಿನತ್ತ..

‘ಛಲದ ಜೊತೆಗೆ ಬಲದ ಪಾಠ’ ಕಲಿಸಿದ ಊರು.

ಹಾಗಾಗಿ ನಾವೂ ಛಲ ಬಿಡಲು ಸಿದ್ದರಿರಲಿಲ್ಲ.

‘ಕಣ್ಣು ಕಾಣದ ಗಾವಿಲರು’ ಮಳೆ, ಮೋಡಗಳ ಆಟದ ಮಧ್ಯೆಯೇ ಘಟ್ಟವನ್ನು ಸೀಳುತ್ತ ಮಂಗಳೂರು ತಲುಪಿಕೊಂಡೆವು.

ಇನ್ನು ನಮ್ಮ ಆಟ ಅರಬ್ಬೀ ಸಮುದ್ರದೊಂದಿಗೆ. ಅರಬ್ಬೀ ಸಮುದ್ರದ ಎಲ್ಲಾ ಅವತಾರಗಳನ್ನು ಬಲ್ಲವನು ನಾನು. ವರ್ಷಗಟ್ಟಲೆ ಕಡಲ ನಗರಿಯಲ್ಲಿದ್ದು ಅದರ ಸಂಭ್ರಮ, ಅರ್ಭಟ, ತಾಂಡವ ನೃತ್ಯ, ಜೋಗುಳ ಎಲ್ಲವನ್ನೂ ಕಂಡಿದ್ದೇನೆ. ಟೇಪ್ ರೆಕಾರ್ಡೆರ್ ಹಿಡಿದು ಗಂಟೆಗಟ್ಟಲೆ ಸಮುದ್ರ ತೀರದಲ್ಲಿ ಅಲೆಯುತ್ತಾ ಈ ಎಲ್ಲ ಆಟಗಳನ್ನು ಬಂಧಿಸಿಟ್ಟಿದ್ದೇನೆ.

ಆದರೆ ಅಂದು ಮಾತ್ರ ಅರಬ್ಬೀ ಸಮುದ್ರಕ್ಕೆ ಆದೇನು ಆವೇಶ ಬಂದಿತ್ತೋ.. ಅಪ್ಪಳಿಸಿ ಅಪ್ಪಳಿಸಿ ಹೊಡೆಯುತ್ತಿತ್ತು. ಸಿಟ್ಟಿಗೆದ್ದ ಕಡಲನ್ನು ಕೆಣಕುವವರು ಯಾರು?

ಹಾಗಾಗಿ ಅರಬ್ಬೀ ಸಮುದ್ರವನ್ನು ಬಗಲಲ್ಲಿಟ್ಟುಕೊಂಡೇ ಕಾರು ಉದ್ದೋ ಉದ್ದ ಓಡಿತ್ತು. ‘ಗಿಳಿವಿಂಡಿ’ನ ಗೋವಿಂದ ಪೈ ಅವರ ಮಂಜೇಶ್ವರವನ್ನು ಹಾದು, ಸಾರಾ ಅಬೂಬಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ಯ ಚಂದ್ರಗಿರಿಯನ್ನು ಹಿಂದಿಕ್ಕಿ, ಟಿಪ್ಪು ಸುಲ್ತಾನನ ಬೇಕಲ ಕೋಟೆಯನ್ನು ಮೀರಿ ಒಂದೇ ಸಮ ಓಡುತ್ತಿದ್ದ ಕಾರು ಗಕ್ಕನೆ ನಿಂತಿದ್ದು ನೀಲೇಶ್ವರದಲ್ಲಿ.

ನೀಲೇಶ್ವರ- ನಾವು ನಿರಂಜನರ ಕಾದಂಬರಿಯ ಪುಟಗಳಿಗೆ ಮೊದಲ ಹೆಜ್ಜೆ ಇಡುತ್ತಿದ್ದೆವು.

‘ನೀವು ಚೆರ್ವತ್ತೂರಿಗೆ ಬನ್ನಿ, ನಾನು ಅಲ್ಲೇ ರಸ್ತೆ ಬದಿಯಲ್ಲಿ ಕಾಯುತ್ತಿರುತ್ತೇನೆ’ ಎಂದಿದ್ದ ಮೋಹನ್ ಕುಮಾರ್ ಅವರ ಕೈಕುಲುಕಿದಾಗ ಕತ್ತಲು, ಬೆಳಕಿಗೆ ದಾರಿ ಮಾಡಿಕೊಡಲೋ ಬೇಡವೋ ಎನ್ನುವ ಸಂದಿಗ್ಧದಲ್ಲಿ ಬಿದ್ದಿತ್ತು.

ಕಳಲೆ ಪಾರ್ಥಸಾರಥಿ ಹಾಗೂ ಡಾ ಶ್ರೀನಿವಾಸ ಕಕ್ಕಿಲ್ಲಾಯರಿಂದಾಗಿ ಪರಿಚಿತವಾದ ಮೋಹನ್ ಕುಮಾರ್ ‘ಇಗೋ ಇಲ್ಲಿ ಬಲಕ್ಕೆ ತಿರುಗಿ’ ಎಂದರು.

ನಾವು ಬಲಕ್ಕೆ ಹೊರಳಿಕೊಂಡದ್ದೇ ಒಂದು ಹಸಿರಿನ ಲೋಕ ಬಿಚ್ಚಿಕೊಳ್ಳುತ್ತಾ ಹೋಯಿತು. ಎತ್ತ ನೋಡಿದರೂ ಹಸಿರೇ. ಅಡಿಕೆ, ತೆಂಗು ಅದಲ್ಲವಾದಲ್ಲಿ ಮೆಣಸು.

ಆಳದಲ್ಲಿ ಇಳಿದು ಎತ್ತರದಲ್ಲಿ ಏದುಸಿರು ಬಿಡುತ್ತಾ ಹೋಗುತ್ತಾ ಇದ್ದಾಗ ಕಣ್ಣಿಗೆ ಕಂಡಿದ್ದು ‘ಕಯ್ಯೂರು- ೦’ ಎಂಬ ಮೈಲುಗಲ್ಲು. ನಾನು ದಶಕಗಳ ನೋಡಲು ಹಂಬಲಿಸಿದ ಒಂದು ಕನಸಿನ ಮೇಲೆ ಕಾಲಿಟ್ಟಿದ್ದೆ.

ಕುಳಕುಂದದ ಶಿವರಾಯರು ಕಯ್ಯೂರಿನ ಇದೇ ಹಸಿರು, ಇದೇ ಹೊಳೆ, ಇದೇ ತೇಜಸ್ವಿನಿ ನದಿಯಲ್ಲಿ ಅಡ್ಡಾಡುತ್ತಾ ಇದೇ ನೀಲೇಶ್ವರ ಇದೇ ಚೆರ್ವತ್ತೂರನ್ನು ಮಾತನಾಡಿಸುತ್ತಾ ಇದ್ದಾಗ ನಾವು ಇನ್ನೂ ಹುಟ್ಟಿಯೇ ಇರಲಿಲ್ಲ.

ಅದು ಬಿಡಿ ಕುಳಕುಂದ ಶಿವರಾಯ ಎನ್ನುವ ಹೆಸರೇ ಬದಲಾಗಿ ಅದು ನಿರಂಜನ ಎನ್ನುವ ಹೆಸರು ತಳೆದು ಕಯ್ಯೂರಿನ ವೀರಗಾಥೆಗೆ ಕೈ ಹಾಕಿದಾಗಲೂ ಅದು ಎಷ್ಟೋ ತಲೆಮಾರುಗಳ ಮನಸ್ಸನ್ನು ತಿದ್ದುತ್ತದೆ ಎಂದು ನಿರಂಜನರಿಗೂ ಗೊತ್ತಿರಲಿಲ್ಲ.

ಅಣ್ಣನ ಪುಸ್ತಕದ ಕಪಾಟಿನಿಂದ ಕೈಗೆ ಇಳಿಸಿಕೊಂಡ ‘ಚಿರಸ್ಮರಣೆ’ ನನ್ನೊಳಗೆ ಅದೇ ಕಡಲ ಅಬ್ಬರವನ್ನು ಸೃಷ್ಟಿಸಿ ಹಾಕಿತ್ತು.

ಎಲ್ಲಿಯೋ ಇದ್ದ ಕಯ್ಯೂರು ‘ಚಿರಸ್ಮರಣೆ’ಯ ಪುಟಗಳಿಂದ ಜಾರಿ ನನ್ನ ಎದೆಯಾಳಕ್ಕೆ ಇಳಿದಿತ್ತು.

ಆ ಅಪ್ಪು, ಆ ಚಿರಕುಂಡ, ಆ ಕುಂಯಿಂಬು, ಆ ಅಬೂಬಕರ್, ಆ ಮಾಸ್ತರ್, ಆ ಜಾನಕಿ, ಆ ಕಣ್ಣ, ಆ ಪಂಡಿತ.. ಎಲ್ಲರೂ ನನ್ನೊಳಗೆ ಸದ್ದಿಲ್ಲದಂತೆ ನಡೆದು ಬಂದಿದ್ದವು.

ಒಂದು ಪುಟ್ಟ ಊರು, ತೇಜಸ್ವಿನಿ ನದಿಯ ದಡದಲ್ಲಿ ಹಸಿರು ಮುಕ್ಕಳಿಸುತ್ತಾ ಇದ್ದ ಊರು ಒಂದೇ ಏಟಿಗೆ ‘ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವು ತುಳಿದ ಜನಗಳ ಕೊರಳ ದನಿಗಳು ನಾವು, ಅಸಮಾನತೆಯನು ಸುಟ್ಟು ಬಿಡಲು ಭುಗಿಲೆದ್ದ ಬೆಂಕಿಯ ಜ್ವಾಲೆಗಳು, ಗ್ರಾಮ ಗ್ರಾಮದಲಿ ನೀವು ಸುಟ್ಟ ಬಡಜನರ ಬೂದಿಯಿಂದೆದ್ದವರು..’ ಎನ್ನುವಂತೆ ಸಿಡಿದೆದ್ದಿತ್ತು.

ರೈತರ ಉಸಿರುಗಟ್ಟಿಸಿದ್ದ, ಬದುಕಲಾಗದಂತೆ ಮಾಡಿದ್ದ ಊರಲ್ಲಿ ಇಡೀ ಊರಿಗೆ ಊರೇ ಸಿಡಿದು ನಿಂತಿತ್ತು. ಅದು ಜಮೀನ್ದಾರರ ವಿರುದ್ಧದ ಹೋರಾಟವೂ ಹೌದು, ಆಳರಸರ ವಿರುದ್ಧದ ಹೋರಾಟವೂ ಹೌದು, ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವೂ ಹೌದು.

ಅಕ್ಷರ ಗೊತ್ತಿಲ್ಲದ. ಮೈ ತುಂಬಾ ಮುಚ್ಚಿ ಗೊತ್ತ್ತಿಲ್ಲದ, ‘ತಂಪುರಾನೆ..’ ಎಂದು ಮಾತ್ರ ಒಡೆಯನನ್ನು ಕರೆದು ಗೊತಿದ್ದ, ತಮ್ಮನ್ನು ‘ಅಡಿಯನ್’ ಎಂದು ಕರೆದುಕೊಳ್ಳುತ್ತಿದ್ದ, ಒಂದು ಬುಡ್ಡಿ ದೀಪ ಹಚ್ಚಲು ಹನಿ ಸೀಮೆಎಣ್ಣೆಗೆ ಒದ್ದಾಡುತ್ತಿದ್ದ, ಮನೆಯ ಮುಂದಿನ ಭಾವಿಯಿಂದ ನೀರು ಸೇದಲೂ ಆಗದಂತೆ ಬಹಿಷ್ಕಾರಕ್ಕೆ ಒಳಗಾಗಿದ್ದ ಊರು ತನ್ನ ಆಕ್ರೋಶವನ್ನೆಲ್ಲಾ ಮುಷ್ಟಿಗಿಳಿಸಿಕೊಂಡು ಎದ್ದು ನಿಂತಿತ್ತು.

ಅಕ್ಷರ ಗೊತ್ತಿಲ್ಲದ ಕಯ್ಯೂರಿನ ಜನತೆ ಬ್ರಿಟನ್ನಿನ ವರೆಗೂ ಸುದ್ದಿಯಾಗಿದ್ದರು.

ಒಬ್ಬ ಪೋಲೀಸ್ ನೀರಿಗೆ ಹಾರಿ ಸತ್ತದ್ದೇ ನೆಪವಾಗಿ ಪೋಲೀಸರ ದಂಡು ‘ಜನ್ಮಿ’ ಎನಿಸಿಕೊಂಡ ಕ್ರೂರ ಜಮೀನ್ದಾರರ ಜೊತೆ ಕೈಜೋಡಿಸಿ ಬೆಳಕಿಗಾಗಿ ಹಂಬಲಿಸಿದವರನ್ನು ಕಂಡ ಕಂಡಲ್ಲಿ ಹೊಸಕಿ ಹಾಕಲು ಆರಂಭಿಸಿದರು. ನಾಲ್ವರು ರೈತ ಹೋರಾಟಗಾರರು ಗಲ್ಲಿಗೇರಲೇಬೇಕಾಯಿತು.

ಕಯ್ಯೂರು ಎಂಬ ಬೆಂಕಿಯುಂಡೆ ಕಾಸರಗೋಡಿನ ಹಳ್ಳಿಯಾಗಿ ಮಾತ್ರ ಉಳಿಯಲಿಲ್ಲ. ಇಡೀ ದೇಶದಲ್ಲಿ ಸುದ್ದಿಯಾಯಿತು. ಬ್ರಿಟನ್ ನಲ್ಲಿಯೂ ಸಂಘಟನೆಗಳು ಕಯ್ಯೂರು ವೀರರ ಪರವಾಗಿ ನಿಂತರು.

ಅಂತಹ ಕಯ್ಯೂರಿನ ನೆಲದಲ್ಲಿ ನಾನು ನಿಂತಿದ್ದೆ.

‘ಚಿರಸ್ಮರಣೆ’ಯ ಪುಟಗಳನ್ನು ತಿರುವಿ ಹಾಕಿದ ದಿನದಿಂದಲೂ ಕಯ್ಯೂರು ನನ್ನೊಳಗೆ ಜುಳು ಜುಳು ಹರಿವ ನದಿಯಾಗಿಯೇ ಇತ್ತು.

‘ಇದು ಪೋಲೀಸ್ ಸುಬ್ರಾಯ ಹೊಳೆಗೆ ಹಾರಿದ ಜಾಗ, ಇದು ತೇಜಸ್ವಿನಿ ನದಿ, ಇದು ಚೂರಿಕ್ಕಾಡನ್ ನಾಯರ್ ಅವರ ಮನೆ, ಗಲ್ಲು ಶಿಕ್ಷೆಯಿಂದ ಬಾಲಾಪರಾಧಿ ಎನ್ನುವ ಕಾರಣಕ್ಕೆ ಉಳಿದ ಜೀವ ಅದು, ಇಗೋ ಇದು ಆ ಮೆರವಣಿಗೆ ನಡೆದ ಜಾಗ ಎನ್ನುತ್ತಾ ಮೋಹನ್ ಕುಮಾರ್ ನಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇದ್ದರು.

ನಾವು ಮತ್ತೆ ಚಿರಸ್ಮರಣೆಯ ಪುಟದೊಳಗೆ ನಡೆಯುತ್ತಿದ್ದೆವು.

ಕುಳಕುಂದದಲ್ಲಿ ಹುಟ್ಟಿ ಕಾಪು, ಸುಳ್ಯದಲ್ಲಿ ಓದು ಮುಗಿಸಿದ ನಿರಂಜನ ಹೈಸ್ಕೂಲ್ ಶಿಕ್ಷಣಕ್ಕಾಗಿ ಹೆಜ್ಜೆ ಹಾಕಿದ್ದು ನೀಲೇಶ್ವರದ ಕಡೆಗೆ.

ಮಗ್ಗುಲಲ್ಲೇ ಕಯ್ಯೂರು. ಒಂದು ನೋವು ಮಿಸುಕಾಡುತ್ತಲೇ ಇದ್ದ ರೀತಿ ನಿರಂಜನರಿಗೆ ಕಾಣಿಸುತ್ತಿತ್ತು.

ಕಯ್ಯೂರು ಸ್ಫೋಟಿಸಿಯೇ ಬಿಟ್ಟಿತು. ಪರೀಕ್ಷೆ ಬರೆದು ನಿರಂಜನರು ತಲುಪಿಕೊಂಡಿದ್ದು ಮಂಗಳೂರನ್ನು. ‘ರಾಷ್ಟ್ರಬಂಧು’ ಸೇರಿದ ನಿರಂಜನರಿಗೆ ಮತ್ತೆ ಕಯ್ಯೂರು ಎದುರಾಯಿತು.

ಕಯ್ಯೂರಿನ ೬೦ ಜನ ರೈತ ಹೋರಾಟಗಾರರನ್ನು ವಿಚಾರಣೆಗೆ ಕರೆ ತಂದಿದ್ದು ಮಂಗಳೂರಿನ ನ್ಯಾಯಾಲಯಕ್ಕೆ, ಇರಿಸಿದ್ದು ಮಂಗಳೂರಿನ ಜೈಲಿನಲ್ಲಿ. ಹಾಗಾಗಿ ಜೈಲಿನಲ್ಲಿಯೂ, ಕೋರ್ಟ್ ನ ಆವರಣದಲ್ಲಿ ನಡೆದ ಎಲ್ಲಕ್ಕೂ ನಿರಂಜನ ಸಾಕ್ಷಿಯಾದರು.

‘ನಾನು ಮಂಗಳೂರಿಗೆ ಹೊರಟಾಗ ಶಾಲೆಯ ಪ್ರಮಾಣ ಪತ್ರವನ್ನು ಖಂಡಿತಾ ಒಯ್ಯಲಿಲ್ಲ. ಆದರೆ ಕಯ್ಯೂರಿನ ಕಿಡಿಯೊಂದನ್ನು ಹೊತ್ತೊಯ್ಯಲು ಮರೆಯಲಿಲ್ಲ’ ಎನ್ನುತ್ತಾರೆ ನಿರಂಜನ.

ಕಯ್ಯೂರಿನ ಘಟನೆ ಸಂಭವಿಸಿದ ೧೩ ವರ್ಷಗಳ ನಂತರ ‘ಚಿರಸ್ಮರಣೆ’ ಕಾದಂಬರಿ ಎದ್ದು ಬಂತು.

‘ಚಿರಸ್ಮರಣೆ ಒಂದು ಕಾದಂಬರಿ, ಚರಿತ್ರೆಯಲ್ಲ. ಚಿರಸ್ಮರಣೆಯ ಅನೇಕ ಪಾತ್ರಗಳು ನಿಜ ಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದು ಬಂದಿವೆ. ಆದರೆ ಇಲ್ಲಿನ ಪಾತ್ರ ನಿರ್ವಹಣೆಗಾಗಿ ರಂಗಸಜ್ಜಿಕೆಯ ವೇಷ ಭೂಷಣಗಳನ್ನು ಅವು ನಿರಾಕರಿಸಿಲ್ಲ. ಇನ್ನು ಕೆಲ ಪಾತ್ರಗಳನ್ನೂ ನಾನು ಕಂಡದ್ದು ನನ್ನ ಕಲ್ಪನೆಯ ಮೂಸೆಯಲ್ಲಿ’ ಎನ್ನುತ್ತಾರೆ.

ಚಿರಸ್ಮರಣೆ ನಂತರ ಮಲೆಯಾಳಕ್ಕೆ ಪ್ರವೇಶಿಸಿತು. ತುಳು, ತಮಿಳು, ತೆಲುಗು, ಮರಾಟಿ, ಬಂಗಾಳಿ, ಇಂಗ್ಲಿಶ್ ಹೀಗೆ ನಡೆಯುತ್ತಾ ಹೊಯಿತು. ‘ಮೀನಮಾಸತ್ತಿಲೆ ಸೂರ್ಯನ್’ ಹೆಸರಲ್ಲಿ ಚಲನಚಿತ್ರವಾಯಿತು. ಕಾಸರಗೋಡು ಚಿನ್ನ ದೂರದರ್ಶನ ಧಾರಾವಾಹಿಯಾಗಿಸಿದರು. ಬಿ ಸುರೇಶ ಇದನ್ನು ನಾಟಕವಾಗಿ ರಂಗಕ್ಕೇರಿಸಿದರು.

ನನ್ನೆದೆಯೊಳಗೆ ಮಾತ್ರ ಎಂದುಕೊಂಡಿದ್ದ ಒಂದು ಮೊಳಕೆ ಅನೇಕರ ಎದೆಗಳಲ್ಲಿ ಸದ್ದು ಮಾಡಿತ್ತು.

ಅಷ್ಟರಲ್ಲೇ ನನ್ನ ಫೇಸ್ ಬುಕ್ ನಲ್ಲಿ ಒಂದು ಮೆಸೇಜ್ ಬಂದು ಬಿತ್ತು. ಹಿರಿಯರಾದ ನಾ ಡಿಸೋಜ ಅವರು ‘ಒಳ್ಳೆಯ ಕೆಲಸ ಮಾಡಿದಿರಿ. ಅದು ನನ್ನ ಮೆಚ್ಚಿನ ಕಾದಂಬರಿ’ ಎಂದು ಬರೆದಿದ್ದರು.

ಮತ್ತೆ ಸದ್ದು. ಮೇಲ್ ತೆರೆದರೆ ಈವೆರೆಗೂ ನಾನು ಭೇಟಿಯೇ ಮಾಡಿಲ್ಲದ ವೇಣುಗೋಪಾಲ ಶೆಟ್ಟಿ ಅವರ ಪತ್ರ.

‘ಚಿರಸ್ಮರಣೆ ನನ್ನ ಬದುಕನ್ನು ಬದಲಿಸಿದ ಕಾದಂಬರಿ. ಆ ಕಾದಂಬರಿ ಓದಿ ಮನೆಯಲ್ಲಿ ಹೇಳದೆ ಕಯ್ಯೂರಿಗೆ ಹೋಗಿ ಬಂದೆ. ಹೊಸ ಬೆಳಕು ಕಾಣಿಸಿತು’ ಎಂದು ಬರೆದಿದ್ದರು.

ನಾನೂ ಆ ಹೊಸ ಬೆಳಕನ್ನು ಕಟ್ಟಿಕೊಂಡು ಹಿಂದಿರುಗಲು ಸಜ್ಜಾದೆ.

website developers in mysore