ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? –ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಟೀಕೆ.

ಬೆಂಗಳೂರು,ನವೆಂಬರ್,10,2021(www.justkannada.in):  ದಲಿತರು ಸಿಎಂ ಆದರೆ ಸ್ವಾಗತ. ನಾನೂ ಒಬ್ಬ ದಲಿತ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿ ಸಿದ್ಧರಾಮಯ್ಯಗೆ ಕುಟುಕಿರುವ ರಾಜ್ಯ ಬಿಜೆಪಿ ಘಟಕ, ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? ಈ ಹಿಂದೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿ ಎರಡು ಕಡೆ ಚುನಾವಣೆಗೆ ನಿಂತರು. ಈಗ ದಲಿತರು ಸಿಎಂ ಆದರೆ ಸ್ವಾಗತ ಎನ್ನುತ್ತಿದ್ದಾರೆ. ಇವರನ್ನು ನಂಬಿದರೆ ದಲಿತರಿಗೆ ಮತ್ತೊಂದು ಮಹಾ ಅನ್ಯಾಯ ಎದುರಾಗುವುದರಲ್ಲಿ ಸಂಶಯವಿಲ್ಲ  ಎಂದು ಕಿಡಿಕಾರಿದೆ.

ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ? ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ. ದಲಿತರು ಸಿಎಂ ಆದರೆ ಸ್ವಾಗತ. ನಾನೂ ಒಬ್ಬ ದಲಿತ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಸಿದ್ದರಾಮಯ್ಯನವರೇ, ನೀವು ಪರೋಕ್ಷವಾಗಿ ಏನನ್ನು ಸ್ಥಾಪಿಸಲು ಹೊರಟಿದ್ದೀರಿ? ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ” ಎಂದು ಹೇಳುವ ಮೂಲಕ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸಿದಂತಾಯ್ತು. ನಿಮ್ಮ ಈ ಸ್ವಾರ್ಥ ಜನರಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ? ಎಂದು ರಾಜ್ಯ ಬಿಜೆಪಿ ಟಾಂಗ್ ನೀಡಿದೆ.

Key words: former CM- Siddaramaiah- talk -State –BJP- criticism – Twitter