ಸಂಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸಾಧ್ಯ- ಸಂಸದ  ವಿ. ಶ್ರೀನಿವಾಸಪ್ರಸಾದ್

kannada t-shirts

ಮೈಸೂರು,ಆಗಸ್ಟ್,27,2021(www.justkannada.in): ಸಂಪೂರ್ಣ ಬಹುಮತದ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂವಹನ: ಪ್ರಕಾಶಕರು ವತಿಯಿಂದ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ ‘ಸಂಸತ್ ದರ್ಶನ’ ಕೃತಿ ಬಿಡುಗಡೆಗೊಳಿಸಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿದರು.

ನೆಹರು ಕಾಲದಿಂದಲೂ ಜವಾಬ್ದಾರಿಯುತ ಸರ್ಕಾರ ರಚನೆ ಆಗುತ್ತಿದೆ. ಕಾಂಗ್ರೆಸ್‌ಗೆ ರಾಜಕೀಯ ವಾತಾವರಣ ಹೇಗೆ ಬದಲಾಗುತ್ತಿದೆ ಎಂಬುದನ್ನು ನೋಡುತ್ತಿದ್ದೆವು. ಅದು ಪ್ರಜಾಪ್ರಭುತ್ವದ ವೈಶಿಷ್ಟ್ಯವೇ ಹೊರತು, ನಿಂತ ನೀರಲ್ಲ. ಮತದಾರರು ಬಹಳ ಚಾಣಾಕ್ಷರಿದ್ದಾರೆ. ಬಹಳ ಯೋಚನೆ ಮಾಡಿ ತೀರ್ಪು ಕೊಡುತ್ತಾರೆ. ಕಾಂಗ್ರೆಸ್‌ ನ ಬಲ ಕಡಿಮೆಯಾಗುತ್ತ ಬರುತ್ತಿದೆ. ೧೯೬೯ ರಲ್ಲಿ ಕಾಂಗ್ರೆಸ್ ವಿಭಜನೆ ಆದ ಬಳಿಕ ೧೯೭೧ರಲ್ಲಿ ಮಧ್ಯಂತರ ಚುನಾವಣೆ ನಡೆಯಿತು. ಮತ್ತೆ ೧೯೭೬ರಕ್ಕೆ ಚುನಾವಣೆ ನಡೆಯಬೇಕಿತ್ತು. ತುರ್ತು ಪರಿಸ್ಥಿತಿಯ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಸತ್ ಸ್ಥಾನದ ಅವಧಿಯನ್ನು ೬ ವರ್ಷಕ್ಕೆ ವಿಸ್ತರಿಸಿದ್ದರಿಂದ ೧೯೭೭ರಲ್ಲಿ ಚುನಾವಣೆ ನಡೆಯಿತು. ಆ ನಂತರದ ಚುನಾವಣೆಗೆ ಮತ್ತೆ ತಿದ್ದುಪಡಿ ತಂದು ೫ ವರ್ಷಕ್ಕೆ ಇಳಿಸಲಾಯಿತು. ಆನಂತರ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಈಗ ಮಾತ್ರ ನರೇಂದ್ರ ಮೋದಿ ಅವರ ಸರ್ಕಾರ ಮಾತ್ರ ಸಂಪೂರ್ಣ ಬಹುಮ ಪಡೆದಿದೆ ಎಂದರು.

ಅಭಿವೃದ್ಧಿಯ ಹಿತದೃಷ್ಟಿಯಿಂದ ಸ್ಥಿರ ಸರ್ಕಾರ  ಬರಬೇಕು. ಇತ್ತೀಚಿನ ದಿನಗಳಲ್ಲಿ ಚುನಾವಣೆಗೆ ಸಾವಿರಾರು ಕೋಟಿ ಬೇಕಾಗುತ್ತದೆ. ೧೯೮೪ ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆದಾಗ ೪೧೪ ಸ್ಥಾನ ಬಂದಿತು. ಆದರೆ ಈಗ ಅಧಿಕೃತ ಪ್ರತಿಪಕ್ಷ ನಾಯಕನಾಗುವ ಶಕ್ತಿಯೂ ಕಾಂಗ್ರೆಸ್‌ಗೆ ಇಲ್ಲ. ಸಮರ್ಥ ವಿರೋಧ ಪಕ್ಷದ ನಾಯಕನಿರಬೇಕು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ೫ ವರ್ಷ ಪೂರ್ಣಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನನಗೆ ಚಿಕ್ಕ ವಯಸ್ಸಿಗೆ ದೊಡ್ಡ ಅವಕಾಶ ಸಿಕ್ಕಿತು. ದೇಶದ ರಾಜಕೀಯ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿದೆ. ಇತ್ತೀಚೆಗೆ ಅಧಿವೇಶನ ನಡೆಯುವುದು ಕಡಿಮೆ. ಈ ಮುಂಚೆ ಸಂಸದರಿಗೆ ಅನುದಾನ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳು ಹಿಮಾಲಯ ಪರ್ವತದಂತೆ. ಆದರೆ ಸಮಾಧಾನ ಆಗುವಂತೆ ನೋಡಿಕೊಳ್ಳಬೇಕು. ಪಿ.ವಿ. ನರಸಿಂಹರಾವ್ ಪ್ರಧಾನಿ ಆಗಿದ್ದಾಗ ನಾನು ಗೆದ್ದು ೧೩ ವರ್ಷವಾದರೂ ಒಂದು ರೂಪಾಯಿಯೂ ಇರಲಿಲ್ಲ. ೧೯೯೩ ನಾವು ಎಲ್ಲರೂ ಸೇರಿ  ೫೦ ಲಕ್ಷ ಅನುದಾನ ಬರುವಂತೆ ಮಾಡಿದೆವು. ಈಗ ಸಂಸದರಿಗೆ ಎಲ್ಲಾ ಸೌಲಭ್ಯವಿದೆ. ಮುಂಚೆ ಯಾವುದೇ ಸೌಲಭ್ಯ ಇರಲಿಲ್ಲ. ಈಗಿನ ಪ್ರಜಾಪ್ರಭುತ್ವದಲ್ಲಿ ಸರ್ಕಾರ ರಚನೆ ಆಗುವುದು ಕಷ್ಟವಾಗಿದ್ದು, ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟಗಳು ಸರ್ಕಾರಗಳನ್ನು ಮುನ್ನಡೆಸುತ್ತಿವೆ. ತಮ್ಮದೇ ಆದ ನೀತಿ ಸಿದ್ಧಾಂತವನ್ನು ಅವು ಹೊಂದಿವೆ ಎಂದರು.

ವಾಜಪೇಯಿ ಅವರು ಪ್ರಧಾನಿ ಆದಾಗ ೨೬ ಅಂಗ ಪಕ್ಷಗಳು ಬೆಂಬಲ ನೀಡಿತು. ಡಿಎಂಕೆ, ತೃಣಮೂಲ ಕಾಂಗ್ರೆಸ್, ಫರೂಕ್ ಅಬ್ದುಲ್ಲಾ ಬೆಂಬಲ ನೀಡಿದರು. ೫ ವರ್ಷ ಆಳ್ವಿಕೆ ನಡೆಸಿದರು. ಪ್ರತಿಯೊಬ್ಬ ಸಂಸದರೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಆದಷ್ಟು ಒಳ್ಳೆಯ ಕೆಲಸ ಮಾಡಿರುತ್ತಾರೆ. ಅದು ನಮ್ಮ ಜವಾಬ್ದಾರಿ ಕೂಡ. ಅದನ್ನು ಜನರು ಗುರುತಿಸಬೇಕು ಮತ್ತು ಹೆಮ್ಮೆ ಪಡೆಬೇಕು. ನಮ್ಮ ಅವಧಿಯಲ್ಲಿ ಬ್ರಾಡ್‌ ಗೇಜ್‌ ನ ಒಂದು ಲೇನ್‌ಗೆ ೧೦ ವರ್ಷ ತೆಗೆದುಕೊಂಡಿತು. ಈಗ ಜೋಡಿ ರೈಲು ಮಾರ್ಗ ಬಂದಿದೆ. ಆ ಬಗ್ಗೆ ಹೆಚ್ಚು ಚರ್ಚಿಸಲು ಹೋಗಬಾರದು. ರಾಜಕೀಯ ಎಂಬುದು ಸಾರ್ವಜನಿಕ ಸೇವೆಯಂತೆ, ನಾನು ಇನ್ನು ೩ ವರ್ಷ ಪೂರೈಸಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದೇವೆ ಎಂದು ಅವರು ಹೇಳಿದರು.

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿನಲ್ಲಿ ದೊಡ್ಡದು. ಇಡೀ ಜಗತ್ತಿಗೆ ದೊಡ್ಡ ಸಂಸತ್. ನೂರಾರು ಕೋಟಿ ಜನರ ಆಸೆ, ಆಕಾಂಕ್ಷೆಗೆ ಸ್ಪಂದಿಸುವ ಸಂಸತ್. ೧೯೫೨ ರಿಂದ ಈವರೆಗೆ ೧೮ ಬಾರಿ ಚುನಾವಣೆ ನಡೆದಿದೆ. ನಾನು ಪ್ರೌಢಾಶಾಲಾ ದಿನದಿಂದಲೂ ರಾಜಕೀಯ ಆಸಕ್ತಿ ಇತ್ತು. ಸಕ್ರಿಯ ರಾಜಕೀಯ ಬರುತ್ತೇನೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ೬ನೇ ಚುನಾವಣೆಯಲ್ಲಿ ಪರಾಜಿತನಾದೆ. ೭, ೮, ೯, ೧೦ ಮತ್ತು ೧೩ನೇ ಚುನಾವಣೆಯಲ್ಲಿ ಗೆದ್ದೆ. ಈಗ ೧೮ನೇ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದರು.

ಮೈಸೂರು ವಿವಿ ಸಂಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಅವರು ಅಂಶಿಯವರ ಕಾಡುಜೀವನ ಹಾಗೂ ಸಮಾಜಮುಖಿ ಶ್ರೀಸಾಮಾನ್ಯರು ಕೃತಿಗಳ ಬಗ್ಗೆ ರಚಿಸಿರುವ ‘ಕಾಡುಜನರ ಹಾಡುಪಾಡು’ ವಿಮರ್ಶಾ ಸಂಕಲವನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಡುಗಡೆಗೊಳಿಸಿದರು. ಸಾಹಿತಿ ಪ್ರೊ. ನೀಲಗಿರಿ ತಳವಾರ್ ಕೃತಿಗಳ ಕುರಿತು ಮಾತನಾಡಿದರು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಸ್ವಾಗತಿಸಿ, ನಿರೂಪಿಸಿದರು. ಸಂವಹನ  ಪ್ರಕಾಶಕ ಡಿ.ಎನ್. ಲೋಕಪ್ಪ ವಂದಿಸಿದರು. ಅಮ್ಮ ರಾಮಚಂದ್ರ ಮತ್ತು ತಂಡದವರು ಗೀತನಗಾಯನ ನಡೆಸಿಕೊಟ್ಟರು.

Key words: Development – possible – absolute -majority –government- comes –power-MP- V. Srinivasa Prasad.

website developers in mysore