ಕಾಂಗ್ರೆಸ್ ಪಾದಯಾತ್ರೆ ಬರೀ ದೊಂಬರಾಟ-ಸಚಿವ  ಡಾ. ಅಶ್ವತ್ ನಾರಾಯಣ್ ಲೇವಡಿ.

ಬೆಂಗಳೂರು,ಫೆಬ್ರವರಿ,28,2022(www.justkannada.in): ಹೇಗಾದರೂ ಸರಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿಡಬೇಕೆಂಬ ಹುಚ್ಚು ಡಿ.ಕೆ.ಶಿವಕುಮಾರ್ ಅವರನ್ನು ಆವರಿಸಿಕೊಂಡಿದೆ. ಇದಕ್ಕಾಗಿ ಅವರು ಸಿದ್ದರಾಮಯ್ಯ  ಅವರನ್ನು ಬದಿಗೊತ್ತಲು ಮೇಕೆದಾಟು ಯೋಜನೆಯ ಹೆಸರಿನಲ್ಲಿ ಪಾದಯಾತ್ರೆಯ ಕಪಟ ನಾಟಕ ಶುರು ಹಚ್ಚಿಕೊಂಡಿದ್ದಾರೆ. ಅವರ ಪಾದಯಾತ್ರೆಯಿಂದ ಕೊನೆಗೆ ಬಿಜಿಪಿಗೇ ಲಾಭವಾಗುತ್ತದೆ’ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.

ಸೋಮವಾರ ಇಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಶಿವಕುಮಾರ್ ಏಳು ಸಲ ಶಾಸಕರಾಗಿದ್ದಾರೆ.  ಅವರ ಸಹೋದರ ಅನೇಕ ಬಾರಿ ಸಂಸದರಾಗಿದ್ದಾರೆ. ಈಗ ಮೇಕೆದಾಟು ಜಪ ಮಾಡುತ್ತಿರುವ ಇವರಿಬ್ಬರೂ ಇಷ್ಟು ವರ್ಷ ಏನನ್ನು ಕಡಿದು ಕಟ್ಟೆ ಹಾಕುತ್ತಿದ್ದರು?’ ಎಂದು ಮರುಪ್ರಶ್ನೆ ಎಸೆದರು.

`ಕಾಂಗ್ರೆಸ್ ಯಾವತ್ತೂ ಜನಪರವಾಗಿ ಯೋಚಿಸುವುದಿಲ್ಲ. ಮೇಕೆದಾಟು ಯೋಜನೆಯನ್ನು ಬಿಜೆಪಿ ಸರಕಾರ ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಇದನ್ನು ಕಂಡು ಶಿವಕುಮಾರ್ ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಿದೆ. ಅವರ ಪಾದಯಾತ್ರೆ ಕೇವಲ ವಾಕಿಂಗ್ ಆಗಬಹುದೇ ಹೊರತು ಜನರಾರೂ ಅವರೊಂದಿಗೆ ಹೋಗುತ್ತಿಲ್ಲ.  ಕಾಣಿಸಿಕೊಳ್ಳುತ್ತಿರುವವರು ಕೇವಲ ಭಟ್ಟಂಗಿಗಳಷ್ಟೆ’ ಎಂದು ಅವರು ಹರಿಹಾಯ್ದರು.

`ಕಾಂಗ್ರೆಸ್ ಪಕ್ಷ ನೀರಿನ ವಿಚಾರದಲ್ಲಿ ರಾಜಕೀಯ ದೊಂಬರಾಟ ಆಡುತ್ತಿದ್ದು, ರಾಜ್ಯದ ಜನರಿಗೆ ದ್ರೋಹವೆಸಗುತ್ತಿದೆ. ನೆಲ-ಜಲದ ವಿಚಾರಗಳಲ್ಲಿ ರಾಜಕೀಯಪ್ರೇರಿತ ಹೋರಾಟ ಖಂಡನೀಯ. 60 ವರ್ಷ ಅಧಿಕಾರದಲ್ಲಿದ್ದ ಇವರಿಗೆ ಮೇಕೆದಾಟು ಯೋಜನೆಗೆ ಕನಿಷ್ಠಪಕ್ಷ ಒಂದು ಡಿಪಿಆರ್ ಅನ್ನು ಕೂಡ ಏಕೆ ?’ ಎಂದು ಅವರು ಎದುರೇಟು ನೀಡಿದರು.

ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿವೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದು ಯಾವುದೋ ಕಾಲವಾಗಿದೆ. ಇಂತಹ ದುರವಸ್ಥೆಯಲ್ಲಿರುವ ಪಕ್ಷದ ಅಧ್ಯಕ್ಷರು ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಆದರೆ, ನಮಗೆ ಸಂಘರ್ಷದಲ್ಲಿ ನಂಬಿಕೆ ಇಲ್ಲ ಎಂದು ಸಚಿವರು ನುಡಿದರು.

Key words: Congress-padayatra- Minister -Ashwath Narayan