ಹೊಸ ಮಾಸ್ಟರ್ ಪ್ಲಾನ್ ತಯಾರಿಸಲು ಬಿಡಿಎ ಯೋಚನೆ.

ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ಕರಡು ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ) 2031 ಅನ್ನು ಹಿಂದಕ್ಕೆ ಪಡೆದುಕೊಂಡ ಸುಮಾರು 10 ತಿಂಗಳ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಮಹಾನಗರಕ್ಕೆ ಹೊಸ ಭೂ ಬಳಕೆ ದಾಖಲೆಯನ್ನು ಸಿದ್ಧಪಡಿಸುವ ಇಡೀ ಪ್ರಕ್ರಿಯೆಯನ್ನು ಪುನರಾರಂಭಿಸಲು ಯೋಜಿಸಿದೆ. ಅಧಿಕಾರಿಗಳ ಪ್ರಕಾರ ಈ ಬಾರಿ ಬಿಡಿಎ ಈ ಕಾರ್ಯಕ್ಕಾಗಿ ಇನ್ನೊಂದು ತಿಂಗಳಲ್ಲಿ ಹೊಸ ಟೆಂಡರ್‌ ಗಳನ್ನು ಆಹ್ವಾನಿಸುವ ಮೂಲಕ ಹೊಸ ಏಜೆನ್ಸಿಯನ್ನು ನೇಮಕ ಮಾಡಲಿದೆ. ಈಗ ತಿರಸ್ಕರಿಸಲಾಗಿರುವ ಆರ್‌ಎಂಪಿ 2013 ಅನ್ನು ಸಿದ್ಧಪಡಿಸಿದ ಕಂಪನಿಯಿಂದಲೇ ಹೊಸ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸುವ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಬಿಡಿಎ ಆಯುಕ್ತ ಬಿ.ಆರ್. ರಾಜೇಶ್ ಗೌಡ ಅವರು, “ಹೊಸ ಆರ್‌ಎಂಪಿಯನ್ನು ಸಿದ್ಧಪಡಿಸಲು ನಾವು ಟರ್ಮ್ಸ್ ಆಫ್ ರೆಫರೆನ್ಸ್ (ಟಿಒಆರ್) ಅನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯೊಂದನ್ನು ರಚಿಸುತ್ತಿದ್ದೇವೆ. ಇನ್ನೊಂದು ತಿಂಗಳಲ್ಲಿ ಟೆಂಡರ್‌ ಗಳನ್ನು ಆಹ್ವಾನಿಸುತ್ತೇವೆ,” ಎಂದಿದ್ದಾರೆ.

ನೆದರ್‌ ಲ್ಯಾಂಡ್ ಮೂಲದ ರಾಯಲ್ ಹಸ್ಕೊನಿಂಗ್ ಡಿಹೆಚ್‌ವಿ ಸಂಸ್ಥೆಗೆ ಹೊಸ ಆರ್‌ಎಂಪಿ ಸಿದ್ಧಪಡಿಸುವ ಗುತ್ತಿಗೆಯನ್ನು ನೀಡುವಂತೆ ಸರ್ಕಾರದ ಅನುಮತಿಯನ್ನು ಕೋರಿ ಬಿಡಿಎ ಪತ್ರವನ್ನು ಬರೆದಿದೆ. ಆದರೆ ಈ ಕಂಪನಿಯು ಈ ಕೆಲಸವನ್ನು ಪುನಃ ಕೈಗೊಳ್ಳಲು ಹೆಚ್ಚಿನ ದರವನ್ನು ನಮೂದಿಸಿದ ಕಾರಣದಿಂದಾಗಿ ಸರ್ಕರವು ಹೊಸ ಟೆಂಡರ್‌ ಗಳನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಈಗ ತಿರಸ್ಕರಿಸಲ್ಪಟ್ಟಿರುವ ಆರ್‌ಎಂಪಿ, ಮಾಸ್ ಟ್ರ್ಯಾನ್ಸಿಟ್ ಕಾರಿಡಾರ್‌ ಗಳ ಜೊತೆಗೆ ನಗರದ ಬೆಳವಣಿಗೆಯ ದಿಸೆಯಲ್ಲಿ ನಿರ್ಣಾಯಕವಾಗಿದ್ದಂತಹ ಸಂಚಾರ ಚಾಲಿತ ಅಭಿವೃದ್ಧಿ (transit oriented development (TOD)) ನೀತಿ ಒಳಗೊಂಡಂತೆ ಹಲವು ಮುಖ್ಯವಾದ ಅಂಶಗಳನ್ನು ಒಳಗೊಂಡಿರಲಿಲ್ಲ. ಹಾಗಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸಿ ಹೊಸ ಆರ್‌ಎಂಪಿ ಸಿದ್ಧಪಡಿಸುವಂತೆ ಸೂಚಿಸಿತ್ತು. ಆದರೆ ಆ ಬೃಹತ್ ವರದಿಯನ್ನು ಸಿದ್ಧಪಡಿಸಲು ಏಜೆನ್ಸಿಯವರು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು, ಆ ಕೆಲಸವನ್ನು 2016 ರಲ್ಲಿ ಆರಂಭಿಸಲಾಗಿತ್ತು.

ಆ ಕರಡು ಆರ್‌ಎಂಪಿಯಲ್ಲಿ ಇದ್ದಂತಹ ಕೆಲವು ಪ್ರಕ್ಷೇಪಗಳೆಂದರೆ: ೨೦೩೧ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಳ್ಳುವುದು, ನಗರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಹೆಚ್ಚುವರಿಯಾಗಿ 80 ಚದರ ಕಿ.ಮೀ. ಗಳಷ್ಟು ಪ್ರದೇಶದ ಅಗತ್ಯ ಹಾಗೂ ಗೃಹ ಭೂಬಳಕೆಯನ್ನು ೪೨೪ ಚದರ ಕಿ.ಮೀ.ಗಳಿಗೆ ದ್ವಿಗುಣಗೊಳಿಸುವುದು.

ಈ ಹೊಸ ಆರ್‌ಎಂಪಿ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ನೆರವಿನೊಂದಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (Directorate of Urban Land Transport (DULT)) ಸಿದ್ಧಪಡಿಸಿದ್ದಂತಹ ಸಮಗ್ರ ಸಂಚಾರ ಯೋಜನೆ, ವಾಹನ ನಿಲುಗಡೆ ನೀತಿ ಹಾಗೂ ಸಂಚಾರ ಚಾಲಿತ ಅಭಿವೃದ್ಧಿ (transit oriented development (TOD))ಯಂತಹ ಪ್ರಮುಖವಾದ ದಾಖಲೆಗಳನ್ನು ಒಳಗೊಂಡಿರಬೇಕು ಎಂದು ನಿರೀಕ್ಷಿಸಲಾಗಿದೆ.

ಇನ್ನೂ 3 ವರ್ಷ ಕಾಯಬೇಕು?

ಈ ಹಿಂದಿನ ಮಾಸ್ಟರ್ ಪ್ಲಾನ್‌ ಗಳನ್ನು ಸಿದ್ಧಪಡಿಸಲು ಹಾಗೂ ಅನುಮೋದನೆಯನ್ನು ಪಡೆಯಲು ತೆಗೆದುಕೊಂಡಿದ್ದಂತಹ ಸಮಯವನ್ನು ಆಧರಿಸಿ, ನಗರದ ಮುಂದಿನ ಮಾಸ್ಟರ್ ಪ್ಲಾನ್ (Vision Document) ಸಿದ್ಧವಾಗಲು ಕನಿಷ್ಠ ಇನ್ನೂ ಮೂರು ವರ್ಷಗಳು ಬೇಕಾಗುತ್ತದೆ ಎನ್ನಲಾಗಿದೆ. ಆದರೆ ಅಷ್ಟು ಬೃಹತ್ ಸಮಯದ ಅಂತರವಿದ್ದರೆ, ಬೆಂಗಳೂರಿನ ಹೊರವಲಯಗಳಲ್ಲಿ ಅನಿಯಂತ್ರಿತ ಅಭಿವೃಧ್ಧಿ ಚಟುವಟಿಕೆಗಳು ಉದ್ಭವಿಸಲು ಕಾರಣವಾಗಬಹುದು ಎನ್ನಲಾಗಿದೆ. ಭೂ ಬಳಕೆಯನ್ನು ೨೦೧೫ರ ಆರ್‌ಎಂಪಿಯಲ್ಲಿ ಅಧಿಸೂಚಿತಗೊಳಿಸಿದ್ದರೂ ಸಹ ಪ್ರಸ್ತಾಪಿತ ೬೫-ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯ ಸುತ್ತಲೂ ಈಗಾಗಲೇ ೫,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಕಟ್ಟಡಗಳು ನಿರ್ಮಾಣವಾಗಿದೆ ಎನ್ನಲಾಗಿದೆ.

ಮೇಲಾಗಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಭೂಬಳಕೆ ಯೋಜನೆಯನ್ನು ಉಲ್ಲಂಘಿಸಲಾಗಿದೆ ಎನ್ನುವ ಕಾರಣದಿಂದಾಗಿ ಈ ಹಿಂದೆ ತಯಾರಿಸಲಾಗಿದ್ದಂತಹ ಯಾವುದೇ ಮಾಸ್ಟರ್ ಪ್ಲಾನ್‌ ಗಳನ್ನೂ ಸಹ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿಲ್ಲ. ಮೂಲಗಳ ಪ್ರಕಾರ ೨೦೧೫ರ ಆರ್‌ಎಂಪಿಯನ್ನು ೧೪%ರಷ್ಟು ಮಾತ್ರ ಅನುಷ್ಠಾನಗೊಳಿಸಲಾಯಿತು, ಆ ಮೂಲಕ ಮಾಸ್ಟರ್ ಪ್ಲಾನ್‌ಗಳ ಬಳಕೆಯ ವಿರುದ್ಧವೇ ಪ್ರಶ್ನೆಗಳು ಉದ್ಭವಿಸಿದವು.

ನಗರಾಭಿವೃದ್ಧಿ ತಜ್ಞ ವಿವೇಕ್ ವೈದ್ಯನಾಥನ್ ಅವರ ಪ್ರಕಾರ ನಗರದ ಕಡಿವಾಣವಿಲ್ಲದ ಬೆಳವಣಗೆಯನ್ನು ತಡೆಗಟ್ಟಲು ಅಥವಾ ನಗರದ ಪರಿಶೀಲಿಸದ ಅಭಿವೃದ್ಧಿಯನ್ನು ತಡೆಗಟ್ಟಲು ಮಾಸ್ಟರ್ ಪ್ಲಾನ್‌ ಗಳು ಅತ್ಯಗತ್ಯ. “ಉನ್ನತೀಕರಿಸಿರುವ ಮಾಸ್ಟರ್ ಪ್ಲಾನ್ ಇಲ್ಲದಿದ್ದರೆ, ಎಲ್ಲಾ ರೀತಿಯ ಕಾನೂನುಬಾಹಿರ ಅಭಿವೃದ್ಧಿಗಳು ಎಗ್ಗಿಲ್ಲದೆ ನಡೆಯುತ್ತವೆ. ಮಾಸ್ಟರ್ ಪ್ಲಾನ್, ನಗರ ಯಾವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಕುರಿತು ಯೋಜಿತ ದೃಷ್ಟಿಯನ್ನು ಕಲ್ಪಿಸುತ್ತದೆ,” ಎಂದು ವಿವರಿಸಿದರು.

ಅವರ ಪ್ರಕಾರ ಮಾಸ್ಟರ್ ಪ್ಲಾನ್ ಉತ್ತಮ ಸಾರ್ವಜನಿಕ ಸಾರಿಗೆ ಸಂಪರ್ಕಜಾಲವಿರುವಂತಹ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ನೆರವಾಗುತ್ತದಂತೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: BDA – thinking -preparing – new master- plan.