ಪ್ರತಿ ಬುಧವಾರ 10 ಲಕ್ಷ ಲಸಿಕೆ ನೀಡುವ ಗುರಿ-ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಕೋಲಾರ,ಸೆಪ್ಟಂಬರ್,1,2021(www.justkannada.in):  ರಾಜ್ಯದಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ ನಡೆಸುತ್ತಿದ್ದು, ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾಕೆ.ಸುಧಾಕರ್, ಸಾಮಾನ್ಯ ದಿನಗಳಲ್ಲಿ 5 ಲಕ್ಷ ಲಸಿಕೆ ನೀಡುವ ಗುರಿ ಇದೆ. ಒಂದು ತಿಂಗಳಲ್ಲಿ ಕನಿಷ್ಠ 1.50 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ. ಡಿಸೆಂಬರ್ ವೇಳೆಗೆ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಗಡಿಭಾಗದ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಕೂಡ ಸಲಹೆ ನೀಡಿದ್ದಾರೆ. ಗಡಿಭಾಗಗಳ ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಕೋರಿದರು.

ಆಗಸ್ಟ್ ನಲ್ಲಿ ರಾಜ್ಯಕ್ಕೆ 1.12 ಕೋಟಿ ಲಸಿಕೆ ಬಂದಿದೆ. ಒಂದೇ ತಿಂಗಳಲ್ಲಿ 1.10 ಕೋಟಿ ಲಸಿಕೆ ನೀಡಲಾಗಿದೆ. ಜನವರಿಯಿಂದ ಈವರೆಗೆ ಆಗಸ್ಟ್ ತಿಂಗಳಲ್ಲೇ ಅತ್ಯಧಿಕ ಲಸಿಕೆ ನೀಡಲಾಗಿದೆ. ಸೆಪ್ಟೆಂಬರ್ ನಲ್ಲಿ ಕನಿಷ್ಠ 1.50 ಕೋಟಿ ಲಸಿಕೆ ನೀಡುವ ಗುರಿ ಇದೆ. ಕೇರಳದಿಂದ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ. ಆದರೆ ಪ್ರತಿ ದಿನ ಬರುವ ವಿದ್ಯಾರ್ಥಿಗಳು ಸೇರಿದಂತೆ ಕೆಲವರಿಗೆ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದರು.

ಲಸಿಕೆ ಪಡೆಯದವರಿಗೆ ರೇಷನ್, ಪಿಂಚಣಿ ತಡೆಹಿಡಿಯುವುದನ್ನು ಸರ್ಕಾರ ಒಪ್ಪುವುದಿಲ್ಲ. ಈ ರೀತಿ ನಿರ್ಧಾರವನ್ನು ಸರ್ಕಾರ ಎಲ್ಲೂ ಮಾಡಿಲ್ಲ. ಬೀದರ್, ಯಾದಗಿರಿ, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿ ಜನರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೆಡೆ ಚುನಾಯಿತ ಪ್ರತಿನಿಧಿ, ಸಂಘ, ಸಂಸ್ಥೆಗಳು ಲಸಿಕೆ ಪಡೆಯುವವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿವೆ. ಜನರು ಲಸಿಕೆ ಹಾಕಿಸಿಕೊಳ್ಳಬೇಕೆಂಬುದು ಇದರ ಉದ್ದೇಶ. ಜಾಗೃತಿ ಮೂಡಿಸುವ ಭರದಲ್ಲಿ ಏನಾದರೂ ಆಗಿರಬಹುದು. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.

ಆಸ್ಪತ್ರೆ ಉದ್ಘಾಟನೆ ಆಗಿಲ್ಲ

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಧಿಕೃತವಾಗಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಆಗಿದೆ. ಆದರೆ ಲಸಿಕೆಗೆ ಬೇಡಿಕೆ ಇಡಲು ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ತೆರಳಿದ್ದರಿಂದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆಗಸ್ಟ್ 26 ರ ಬದಲು ಸೆಪ್ಟೆಂಬರ್ 1 ಕ್ಕೆ ಮುಂದೂಡಲಾಗಿದೆ ಎಂದು ಎಲ್ಲರಿಗೂ ತಿಳಿಸಲಾಗಿತ್ತು. ಆದರೆ ಆಗಸ್ಟ್ 26 ರಂದು ಕೆಲವರು ಕಾರ್ಯಕರ್ತರೊಂದಿಗೆ ಹೋಗಿ ಕೇಂದ್ರದಲ್ಲಿ ಟೇಪ್ ಕಟ್ ಮಾಡಿದ್ದಾರೆ. ಇದಕ್ಕೆ ಯಾವುದೇ ಅಧಿಕಾರಿಗಳು ಹೋಗಿಲ್ಲ. ಈ ರೀತಿ ರಾಜ್ಯದಲ್ಲಿ ಎಲ್ಲೂ ಆಗಿಲ್ಲ. ಹಿಂದೆ ಅವರೇ ಆರೋಗ್ಯ ಸಚಿವರಾಗಿದ್ದರು. ರಾಜ್ಯದ ಜನರು ನಮ್ಮ ನಡೆ, ನುಡಿ ನೋಡುತ್ತಿರುತ್ತಾರೆ. ಕೆಲವರು ಭಾಷಣ ಮಾಡುತ್ತಾರೆ, ಮೌಲ್ಯಗಳ ಕಥೆ ಹೇಳುತ್ತಾರೆ. ಆದರೆ ಅವರ ಮಾತು ಒಂದು, ಕೃತಿ ಇನ್ನೊಂದಾಗಿರುತ್ತದೆ. ಸರ್ಕಾರ ಏನಾದರೂ ತೀರ್ಮಾನ ಕೈಗೊಂಡಾಗ ಅದನ್ನು ಪಾಲಿಸಬೇಕು. ನನಗೆ ಅವರೊಂದಿಗೆ ವೈಯಕ್ತಿಕ ಸಮಸ್ಯೆ ಇಲ್ಲ. ವಿಚಾರಧಾರೆಗಳಲ್ಲಿ ಮಾತ್ರ ಭಿನ್ನಾಭಿಪ್ರಾಯವಿರಬಹುದು ಎಂದು ಸ್ಪಷ್ಟಪಡಿಸಿದರು.

Key words: Aim – deliver- 10 lakh vaccines -every –Wednesday-Health Minister -Dr. K. Sudhakar