ಬೆಂಗಳೂರು ಅಗ್ನಿಶಾಮಕ ಇಲಾಖೆಗೆ 295 ಅಡಿ ಎತ್ತರದ ಏಣಿ.

ಬೆಂಗಳೂರು, ಅಕ್ಟೋಬರ್ ,20, 2022 (www.justkannada.in): ಬೆಂಗಳೂರಿನ ಅಗ್ನಿಶಾಮಕ ಇಲಾಖೆ ದಕ್ಷಿಣ ಭಾರತದಲ್ಲೇ ಅತೀ ಎತ್ತರದ ಏಣಿಯನ್ನು ಪಡೆದಿದೆ. ಈ ಏರಿಯಲ್ ಲ್ಯಾಡರ್ ಪ್ಲಾಟ್‌ ಫಾರಂ (ಎಎಲ್‌ಪಿ) ಅಗ್ನಿಶಾಮಕ ದಳದ ಸಿಬ್ಬಂದಿಗಲಿಗೆ 295 ಅಡಿ ಎತ್ತರದವರೆಗೆ ತಮ್ಮ ಕಾರ್ಯಾಚರಣೆಯನ್ನು ನಿರ್ವಹಿಸಬಹುದಾಗಿದ್ದು, ಅತೀ ಎತ್ತರದ ಕಟ್ಟಡಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇದು ಬಹಳ ನೆರವಾಗಲಿದೆ.

ಈ ಎಎಲ್‌ ಪಿ ಇಲಾಖೆಯ ಸಿಬ್ಬಂದಿಗಳಿಗೆ ಕೇವಲ ಬೆಂಕಿಯನ್ನು ನಂದಿಸುವುದಕಷ್ಟೇ ಅಲ್ಲದೆ, ಜನರನ್ನು ರಕ್ಷಿಸುವಲ್ಲಿಯೂ ನೆರವಾಗಲಿದೆ. ಈ ಏಣಿಯನ್ನು ರೂ.೩೦ ಕೋಟಿ ವೆಚ್ಚದಲ್ಲಿ ಫಿನ್‌ಲ್ಯಾಂಡ್‌ ನಿಂದ ಆಮದು ಮಾಡಿಕೊಳ್ಳಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ರೀತಿಯ ಎರಡು ಎಎಲ್‌ ಪಿಗಳಿದ್ದವು. ಅವುಗಳು ಕೇವಲ ೧೭೭ ಅಡಿಗಳವರೆಗೆ ಮಾತ್ರ ತಲುಪುತ್ತಿದ್ದವು. ಈ  ೨೯೫ ಅಡಿ ಎತ್ತರದ ಏಣಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕಟ್ಟಡದ ೩೦ನೇ ಮಹಡಿಯವರೆಗೂ ತಲುಪಬಹುದು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಓರ್ವ ಹಿರಿಯ ಅಧಿಕಾರಿಯೊಬ್ಬರು ಮಾತನಾಡುತ್ತಾ, “ಎತ್ತರದ ಕಟ್ಟಡಗಳಲ್ಲಿ ಅಗ್ನಿ ಅವಘಡ ನಡೆದಾಗ, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಗೆ ಮೇಲಿನ ಅಂತಸ್ತುಗಳನ್ನು ತಲುಪುವುದು ಈವರೆಗೆ ಸಾಧ್ಯವಾಗುತ್ತಿರಲಿಲ್ಲ. ಅದರಿಂದಾಗಿ ಪ್ರಾಣಾಪಾಯದ ಪ್ರಮಾಣ ಹೆಚ್ಚಾಗಿತ್ತು. ನಗರದಲ್ಲಿರುವ ಅನೇಕ ಎತ್ತರದ ಕಟ್ಟಡಗಳನ್ನು ತಲುಪಲು ಸೂಕ್ತ ರಸ್ತೆಗಳೇ ಇಲ್ಲ. ಹಾಗಾಗಿ ಕೆಲವೊಮ್ಮೆ ಕೆಲವು ಸ್ಥಳಗಳಿಗೆ ಅಗ್ನಿ ನಂದಿಸುವ ವಾಹನವನ್ನು ತೆಗೆದುಕೊಂಡು ಹೋಗುವುದೇ ಸಾಧ್ಯವಾಗುವುದಿಲ್ಲ. ಮೇಲಾಗಿ ಎತ್ತರದ ಕಟ್ಟಡಗಳಲ್ಲಿ ಮೆಟ್ಟಿಲುಗಳೂ ಸಹ ಬಹಳ  ಕಿರಿದಾಗಿರುತ್ತವೆ. ಹಾಗಾಗಿ ನಿಖರವಾದ ಸ್ಥಳವನ್ನು ತಲುಪುವುದು ಬಹಳ ಕಷ್ಟವಾಗುತ್ತದೆ. ಇಂತಹ ಕಟ್ಟಡಗಳಲ್ಲಿ ಬೆಂಕಿ ಅವಘಡಗಳು ನಡೆದರೆ ಬೇಗನೆ ಹೊಗೆ ತುಂಬಿಕೊಳ್ಳುತ್ತವೆ,” ಎಂದು ವಿವರಿಸಿದರು.

ಹಿಂದೆ ಇಂತಹ ಬೆಂಕಿ ಅವಘಡಗಳು ನಡೆದಾಗ ಜನರು ಕಿಟಕಿಗಳಿಂದ ಧುಮುಕಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿ, ಜೀವ ಕಳೆದುಕೊಂಡು ಉದಾಹರಣೆಗಳೂ ಇವೆ. “ಈ ಹಿನ್ನೆಲೆಯಲ್ಲಿ ಈ ಹೊಸ ಎಎಲ್‌ ಪಿ ನಮ್ಮ ಸಿಬ್ಬಂದಿಗಳಿಗೆ ಬೆಂಕಿಯ ಮೂಲ ಸ್ಥಳವನ್ನು ಸುಲಭವಾಗಿ ತಲುಪಿ, ನಂದಿಸಲು ನೆರವಾಗಲಿದೆ, ಜೊತೆಗೆ ಜನರನ್ನು ರಕ್ಷಿಸುವಲ್ಲಿಯೂ ಸಹಾಯವಾಗಲಿದೆ,” ಎಂದರು. ಈ ಏಣಿಯನ್ನು ಖರೀದಿಸಲು ೨೦೨೦ರಿಂದಲೂ ಪ್ರಯತ್ನಗಳು ನಡೆದಿದ್ದವು. ಆದರೆ ಕೋವಿಡ್ ಸಾಂಕ್ರಾಮಿದಿಂದಾಗಿ ವಿಳಂಬವಾಯಿತು.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಕುರಿತು ಮಾತನಾಡಿ, ಈ ಎಎಲ್‌ ಪಿಯನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದು, ಅಗ್ನಿಶಾಮಕ ಇಲಾಖೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. “ನಾವು ಅಗ್ನಿಶಾಮಕ ದಳವನ್ನು ಬಲಪಡಿಸಲು ಯೋಜಿಸಿದ್ದೇವೆ. ಸುಮಾರು ೨,೦೦೦ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜೊತೆಗೆ ಪ್ರತಿ ತಾಲ್ಲೂಕಿನಲ್ಲಿಯೂ ಅಗ್ನಿಶಾಮಕ ಇಲಾಖೆಯ ಶಾಖೆಗಳನ್ನು ತೆರೆಯಲಾಗುವುದು,” ಎಂದು ಮಾಹಿತಿ ನೀಡಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: 295 feet -high ladder – Bangalore -Fire -Department.