ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ.

ಮೈಸೂರು,ಅಕ್ಟೋಬರ್,15,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಸಿಂಗಾರ ಮಾಡಲಾಗಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಆರು ಆನೆಗಳು ಪಾಲ್ಗೊಳ್ಳುತ್ತಿದ್ದು  ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗಾರ ಮಾಡಲಾಗಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಗಜಪಡೆ ಸಿದ್ಧವಾಗಿವೆ.ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಿದೆ.

750 ಕೆಜಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಅಕ್ಕಪಕ್ಕದಲ್ಲಿ ಕಾವೇರಿ, ಚೈತ್ರ ಆನೆಗಳು ಸಾಥ್ ನೀಡಲಿದ್ದು, ನಿಶಾನೆ ಆನೆಯಾಗಿ ಧನಂಜಯ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಹಾಮ ಕೂಡ ಸಾಥ್ ನೀಡಲಿದ್ದಾನೆ.

ಇನ್ನು ಚಿನ್ನದ ಅಂಬಾರಿಗೆ ಪುಷ್ಪಗಳಿಂದ ಅಲಂಕರಿಸಲಿದ್ದು , ತಾಯಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಕಂಗೊಳಿಸಲಿದ್ದಾಳೆ. ಈ ವೇಳೆ ಭಕ್ತರು ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇನ್ನು ಈ ಬಾರಿ ಅರಮನೆ ಅಂಗಳಕ್ಕಷ್ಟೆ ಮೆರವಣಿಗೆ ಸೀಮಿತವಾಗಿದ್ದು, ಕೇವಲ 500 ಮಂದಿ ಮಾತ್ರ ಜಂಬೂ ಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ.

Key words: Jumbo ride- mysore dasara-Abhimanyu – Colors