ಭ್ರಷ್ಟಾಚಾರ ಕಳಂಕಿತಗೆ ಪ್ರಮಾಣವಚನಕ್ಕಾಗಿ ‘ಝಿರೋ ಟ್ರಾಫಿಕ್’ ವ್ಯವಸ್ಥೆ ಮಾಡಿದ್ದು ಬಿಜೆಪಿಯ ಬಣ್ಣಬಯಲುಗೊಳಿಸಿದೆ- ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್  

ಮೈಸೂರು,ಆಗಸ್ಟ್,5,2021(www.justkannada.in):  ಬಿಜೆಪಿ ಸಚಿವ ಸಂಪುಟ ಸೇರ್ಪಡೆಗೆ ಭ್ರಷ್ಟಾಚಾರವೇ ಮಾನದಂಡವಾಗಿದೆ. ನಾವು ಪ್ರಾಮಾಣಿಕರು ಸತ್ಚಾರಿತ್ರ್ಯವಂತರು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಬಣ್ಣ ಈಗ ಬಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಎ ವೆಂಕಟೇಶ್ ಹೇಳಿದ್ದಿಷ್ಟು….

ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿಬಂದಿದ್ಧ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ತಾನು ಭ್ರಷ್ಟರ ಪರ ಎಂಬುದನ್ನು ರುಜುವಾತುಪಡಿಸಿದೆ. ಶಶಿಕಲಾ ಜೊಲ್ಲೆ ಪ್ರಮಾಣವಚನ ಸ್ವೀಕಾರಕ್ಕಾಗಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್ ನ ವಿಶೇಷ ವ್ಯವಸ್ಥೆ ಮೂಲಕ ರಾಜಭವನಕ್ಕೆ ಧಾವಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಝೀರೋ ಟ್ರಾಫಿಕ್ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನು ನೀಡಿದ್ದು ಎಷ್ಟು ಸರಿ..? ಎಂದು ಪ್ರಶ್ನಿಸಿದರು.

ಮಹಿಳಾ ಕೋಟಾದಿಂದ ಸಚಿವ ಸ್ಥಾನಕ್ಕೆ ಹಿಂದುಳಿದ ಸಮುದಾಯದ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿ ಪ್ರಮಾಣವಚನಕ್ಕೆ ಸಿದ್ಧರಾಗಿ ಎಂದು ಸಂದೇಶ ಕಳುಹಿಸಿ ಕಡೇ ಕ್ಷಣದಲ್ಲಿ ಪೂರ್ಣಿಮಾ ಅವರ ಹೆಸರನ್ನು ಕೈ ಬಿಟ್ಟಿದ್ದು ಏಕೆ..? ಶಶಿಕಲಾ ಜೊಲ್ಲೆ ಅವರನ್ನ  ಮಂತ್ರಿ ಮಂಡಲಕ್ಕೆ ಸೇರ್ಪಡೆಗೊಳಿಸಲೇ ಬೇಕು ಎಂದು ಪ್ರಭಾವ ಬೀರಿದವರು ಯಾರು ಎಂದು ಪ್ರಶ್ನಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಂಪುಟ ರಚನೆಯ ವೇಳೆ ಪ್ರಾದೇಶಿಕ, ಸಾಮಾಜಿಕ ನ್ಯಾಯವೇ ಮಾಯವಾಗಿದೆ. ಸಂಪುಟ ರಚನೆಯ ವೇಳೆ 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ಉಳಿದ 13 ಜಿಲ್ಲೆಗಳನ್ನ ಕಡೆಗಣಿಸಲಾಗಿದೆ. ಈ ಮೂಲಕ ಪ್ರಾದೇಶಿಕ ಮತ್ತು ಸಾಮಾಜಿಕವಾಗಿ ಅನ್ಯಾಯವೆಸಗಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದರು.

ಬಿಎಸ್ ವೈ ಅವರನ್ನ ವಯಸ್ಸಿನ ಕಾರಣದಿಂದ ಇಳಿಸಿಲ್ಲ. ಅವರನ್ನು ಇಳಿಸಲಿಕ್ಕೆ ಬೇರೆ ಕಾರಣ ಇತ್ತು. ಭ್ರಷ್ಟಾಚಾರದ ಹಣ ಅವರ ಸುತ್ತನೇ ಸುತ್ತುತ್ತಿತ್ತು. ಹೀಗಾಗಿ ಬಿಎಸ್ ವೈ ಅವರನ್ನ ಕೆಳಗಿಳಿಸಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಹೇಳಿದರು.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಹೆಚ್.ಎ ವೆಂಕಟೇಶ್,  ಬಿಜೆಪಿಗೆ ಇದೊಂದು ಅಸ್ತ್ರ. ಎಲ್ಲವೂ ಕೇಂದ್ರ ಸರ್ಕಾರದ ಏಜೆನ್ಸಿಗಳು. ಬಿಜೆಪಿ ವಿರುದ್ಧ ಮಾತನಾಡಿದರೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ವೈಯುಕ್ತಿಕ ದ್ವೇಷದಿಂದ ಈ ರೀತಿಯ ದಾಳಿಗಳನ್ನು ಮಾಡಬಾರದು ಎಂದು  ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಹೇಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Key words: Zero traffic- corruption- scandal-minister- KPCC spokesperson -HA Venkatesh