ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ನಿಮ್ಮ ಕೂದಲಿಗೆ ಚಿನ್ನದ ರೇಟ್ ಇದೆ

ಮೊನ್ನೆ ಕೂದಲಿಲ್ಲದವರ ಕಥೆ ಬರೆದೆ.
ಈಗ ಕೂದಲಿನದ್ದೇ ಕಥೆ..
‘ಬೆಟ್ಟದ ಮೇಲಿನ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು’ ಇದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದೆ.

ಎದುರಿಗಿದ್ದವರು ‘ಸಂವಾದ’ದ ವಿದ್ಯಾರ್ಥಿಗಳು. ಹೇಳಿ ಕೇಳಿ ಸಂವಾದ ನಡೆಸುವುದರ ಮೂಲಕವೇ ಸಮಾಜವನ್ನು ಅರಿಯಲು ಯತ್ನಿಸುತ್ತಿದ್ದವರು.

ನನ್ನ ಪ್ರಶ್ನಾರ್ಥಕ ನೋಟ ಎಲ್ಲೆರೆಡೆಗೆ ಹೊರಳುತ್ತಿದ್ದಂತೆಯೇ ಮೂಲೆಯಲ್ಲಿದ್ದ ನಾಗರಾಜ್ ಹಾಗೂ ಭವ್ಯ ‘ತಿರುಪತಿ ಹಾಗೂ ಹಾಲಿವುಡ್’ ಎಂದು ಉತ್ತರಿಸಿದರು.

ನನ್ನ ಪ್ರಶ್ನೆಗೆ ಹಲವಾರು ರೀತಿಯ ಉತ್ತರ ಖಂಡಿತಾ ಬರುತ್ತದೆ ಎಂದು ಗೊತ್ತಿತ್ತು ಆದರೆ ಈ ರೀತಿಯ ಉತ್ತರಕ್ಕಂತೂ ನಾನು ಸಜ್ಜಾಗಿರಲಿಲ್ಲ.

ನನ್ನ ಪ್ರಶ್ನೆಗೂ ಈ ಉತ್ತರಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ? ಎನಿಸಿತು.

ಅದು ಹೇಗೆ? ಎನ್ನುವ ನನ್ನ ಪ್ರಶ್ನೆಯನ್ನು ಅರ್ಥ ಮಾಡಿಕೊಂಡವರಂತೆ ಆ ಇಬ್ಬರೂ ‘ಹಾಲಿವುಡ್ ನ ಬಹುತೇಕ ಎಲ್ಲ ನಟ ನಟಿಯರ ತಲೆಯಲ್ಲಿ ಇರುವುದು ತಿರುಪತಿಯ ಕೂದಲು’ ಎಂದರು.

ನೀವು ಒಂದು ಫಿಲಂ ಹೆಸರು ಹೇಳಿ, ನಾವು ಆ ಸಿನೆಮಾದ ಯಾವ ನಟರ ತಲೆಯಲ್ಲಿ ತಿರುಪತಿ ಕೂದಲು ಇದೆ ಅಂತ ಹೇಳ್ತೀವಿ’ ಅಂದರು.

ಸುಮ್ಮನೆ ಕಾಗಕ್ಕ ಗೂಬಕ್ಕನ ಕಥೆ ಹೇಳ್ಬೇಡಿ ಎನ್ನುವ ಪರಿಸ್ಥಿತಿಯಲ್ಲಂತೂ ನಾನಿರಲಿಲ್ಲ

ಏಕೆಂದರೆ ಅವರು ಕಳೆದ ವಾರವಷ್ಟೇ ಕೊಪ್ಪಳದ ಮೂಲೆ ಮೂಲೆ ತಿರುಗಿ ಬಂದಿದ್ದರು. ಕೂದಲು ಆಯುವವರಿಂದ ಹಿಡಿದು ಕೂದಲು ಫ್ಯಾಕ್ಟರಿ ಮಾಲೀಕರವರೆಗೆ ಅನೇಕರನ್ನು ಭೇಟಿಯಾಗಿದ್ದರು.

ಕೂದಲು ಕೊಡುವವರು, ಕೊಳ್ಳುವವರು, ಪರಿಷ್ಕರಿಸುವವರು, ಎಲ್ಲೆಲ್ಲಿಗೋ ಕಳಿಸುವವರು ಎಲ್ಲರನ್ನೂ ಮಾತನಾಡಿಸಿ ಬಂದಿದ್ದರು. ಅವರು ಹೊತ್ತು ತಂದಿದ್ದ ಫೋಟೋಗಳು, ವಿಡಿಯೋಗಳು ಈ ಎಲ್ಲಕ್ಕೂ ಸಾಕ್ಷ್ಯ ನುಡಿಯುತ್ತಿತ್ತು.

ತಿರುಪತಿಯಲ್ಲಿ 600ಕ್ಕೂ ಹೆಚ್ಚು ಕ್ಷೌರಿಕರಿದ್ದಾರೆ. ಹಲವಾರು ಬೃಹತ್ ಕೊಠಡಿಗಳಲ್ಲಿ ಹರಡಿಕೊಂಡಿರುವ ಇವರು ಪ್ರತೀ ದಿನ ಸಾವಿರಾರು ಭಕ್ತರ ತಲೆಗೂದಲನ್ನು ಸವರಿಹಾಕುತ್ತಾರೆ.

your-hair-is-rated-gold

ದೇವರಿಗೆ ಮುಡಿ ಕೊಡಬೇಕೆಂದರೆ ಟೋಕನ್ ಪಡೆದು ಏನಿಲ್ಲೆಂದರೂ ಐದು ಗಂಟೆ ಸರತಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ.

ಒಂದು ದಿನದಲ್ಲಿ ಕೂದಲಿನ ಬೆಟ್ಟವೇ ಬೆಳೆದು ನಿಲ್ಲುತ್ತದೆ. ಇಲ್ಲಿ ಕೂದಲು ನೆಲಕ್ಕೆ ಬೀಳುತ್ತಿದ್ದಂತೆಯೇ ಅದನ್ನು ಗುಡಿಸಿ ತೆಗೆಯುವ ನೌಕರರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಹಾಜರಾಗುವ ಈ ನೌಕರರು ಕೂದಲನ್ನು ಒಟ್ಟು ಮಾಡಿ ಬೃಹದಾಕಾರದ ಗೋಡೌನ್ ಗಳಲ್ಲಿ ಶೇಖರಿಸುತ್ತಾರೆ.

ಇದು ಒಂದು ದಿನದ ಕಥೆ. ಹಾಗೆ ವರ್ಷವಿಡೀ ಸಂಗ್ರಹವಾಗುವ ಕೂದಲು ನಂತರ ಏನಾಗುತ್ತದೆ?.

‘ಇದು ಚಿನ್ನ, ಕಪ್ಪು ಚಿನ್ನ’ ಅಂತ ಉದ್ಘರಿಸಿದ್ದು ಅಮೇರಿಕಾ.
ತಿರುಪತಿಗೆ ಹೋಗಿ ಕೇಜಿಗಟ್ಟಲೆ ಚಿನ್ನ ಕೊಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆವರು ಸಾಕಷ್ಟು ಸುದ್ದಿಯೂ ಆಗುತ್ತಿದ್ದಾರೆ.

ಆದರೆ ಅದೇ ತಿರುಪತಿಯಿಂದ ಕೇಜಿಗಟ್ಟಲೆ ‘ಕಪ್ಪು ಚಿನ್ನ’ ಫ್ಯಾಶನ್ ಜಗತ್ತಿನ ಮಡಿಲು ಸೇರುತ್ತಿದೆ.

ಫ್ಯಾಶನ್ ಜಗತ್ತಿನಲ್ಲಿ ಕೇವಲ ಕೂದಲೊಂದೇ ಇಂದು 900 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ.

ಇದು ಖಂಡಿತಾ ಚಿನ್ನವೇ ಎಂದು ಗೊತ್ತಾಬೇಕಾದರೆ ತಿರುಪತಿಯಲ್ಲಿ ನಡೆಯುವ ಈ ಕೂದಲಿನ ಹರಾಜನ್ನೊಮ್ಮೆ ನೋಡಬೇಕು.

ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಶನ್ ಸಂಸ್ಥೆಗಳಿಗೆ ಕೂದಲು ಒದಗಿಸಲು ಹರಾಜು ಕೂಗುವವರು ಇಲ್ಲಿ ಪೈಪೋಟಿಗೆ ಬೀಳುತ್ತಾರೆ.

’ಅಮೆರಿಕದವನು ಭೂಮಂಡಲದ ಚೆಂಡನ್ನು ಎತ್ತ ಒದ್ದರೂ ಗೋಲ್ ಅವನದೇ..’ ಎಂದು ಎಲ್ ಬಸವರಾಜು ಬರೆದಿದ್ದರು. ಆದರೆ ಕೂದಲಿನ ವಿಚಾರದಲ್ಲಿ ಮಾತ್ರ ಅದು ಸುಳ್ಳು. ಎಲ್ಲಾ ವಿಚಾರದಲ್ಲೂ ಅಮೇರಿಕಾ ಜಗತ್ತಿನ ದೊಡ್ದಣ್ಣನಾಗಿರಬಹುದು. ಆದರೆ ಕೂದಲಿನ ವಿಚಾರ ಬಂದಾಗ ಮಾತ್ರ ಭಾರತದ ಕೂದಲು ಒಮ್ಮೆ ಅಮೆರಿಕಾದ ಕಡೆಗೆ ಹೋಗದೆ ನಿಂತುಬಿಟ್ಟರೆ ಅಮೆರಿಕಾದ ಅನೇಕರ ತಲೆ ಭೂಮಂಡಲದ ಚೆಂಡಿನಂತೆಯೇ ಬೋಳಾಗಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಅಮೇರಿಕಾ ಮಾತ್ರವಲ್ಲ, ಇಂಗ್ಲೆಂಡ್, ಇಟಲಿ, ಫ್ರಾನ್ಸ್,,ಆಫ್ರಿಕಾ, ಆಸ್ಟ್ರೇಲಿಯಾ ದೇಶಗಳ ತಲೆಯೂ ಬೋಳಾಗಬೇಕಾದ ಸ್ಥಿತಿ ಇದೆ.

ಭಾರತದ ಕೂದಲಿಗೆ ಈ ಬೇಡಿಕೆ ಬಂದದ್ದಾದರೂ ಹೇಗೆ?

ಇಡೀ ಜಗತ್ತಿನ ಫ್ಯಾಶನ್ ಕೈಗಾರಿಕೆ ಶರವೇಗದಲ್ಲಿ ಬೆಳೆಯುತ್ತಿದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಹುಚ್ಚು ಎಲ್ಲರಿಗೂ ಬಹುತೇಕ ತಗುಲಿಕೊಂಡ ನಂತರ ಅಂಟಿಕೊಂಡಿರುವ ಇನ್ನೊಂದು ಹುಚ್ಚು ದಿನಕ್ಕೊಂದರಂತೆ ಕೂದಲಿನ ವೇಷ ಬದಲಿಸಿಕೊಳ್ಳುವುದು. ಇದ್ದ ಕೂದಲಿನ ಜೊತೆಗೆ ಇನ್ನೂ ಹಲವು ರೀತಿಯ ಕೂದಲನ್ನು ಸೇರಿಸಿ ದಿನಕ್ಕೊಂದು ರೀತಿಯಂತೆ ಕಾಣಿಸಿಕೊಳ್ಳುವ ಫ್ಯಾಶನ್ ಹೆಚ್ಚುತ್ತಿದೆ. ಅದು ಹೆಚ್ಚಾದಷ್ಟೂ ಕೂದಲಿಗೂ ಇನ್ನಿಲ್ಲದ ಬೇಡಿಕೆ ಹೆಚ್ಚುತ್ತಿದೆ.

ಆದರೆ ಕೂದಲು ಸಹಾ ಕಿಡ್ನಿ, ರಕ್ತದಂತೆ ಬೇಕೆಂದಾಗ ಸೃಷ್ಟಿಸಲು ಸಾಧ್ಯವಿಲ್ಲವಲ್ಲ. ಹಾಗಾಗಿ ಹೊಸ ಹೊಸ ರೀತಿಯ ಫ್ಯಾಶನ್ ಬೆಳೆಯುತ್ತಾ ಅದಕ್ಕೆ ಬೇಕಾದ ಕೂದಲಿನ ಪೂರೈಕೆ ಬೆಳೆಯದೆ ಹೋದ ಕಾರಣ ಕೂದಲಿಗೆ ಚಿನ್ನದ ಬೆಲೆ ಬಂತು.

ಎಲ್ಲಾ ರಂಗದಲ್ಲೂ ಇಣುಕಿ ಒಂದು ಕೈ ನೋಡೇಬಿಡುವ ಎನ್ನುವ ಚೈನಾ ಇಲ್ಲೂ ಸಹಾ ಹೆಜ್ಜೆ ಹಾಕಿತು. ಕೃತಕ ಸಿಂಥೆಟಿಕ್ ಕೂದಲನ್ನು ತಯಾರು ಮಾಡಿ ಫ್ಯಾಶನ್ ಜಗತ್ತನ್ನು ಗೆದ್ದುಕೊಂಡೂಬಿಟ್ಟಿತು. ಆದರೆ ಒಂದಷ್ಟು ವರ್ಷ ಅಷ್ಟೇ. ಈ ಕೃತಕ ಕೂದಲು ಒರಟು ಅನಿಸಿದ್ದಷ್ಟೇ ಅಲ್ಲ, ಅದನ್ನು ಗುಂಗುರಾಗಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಾಗಿ ಹೋಯಿತು.

ಅಸಾಧ್ಯ ಸೆಖೆ ಜೊತೆಗೆ ಚರ್ಮದ ಅಲರ್ಜಿ ಸಹಾ ಇದಕ್ಕೆ ಪೆಟ್ಟು ನೀಡಿತು. ಅದನ್ನು ನೀಟಾಗಿ ಸಂಬಾಳಿಸುವುದೇ ದೊಡ್ಡ ಕೆಲಸ ಅನಿಸಿಬಿಟ್ಟಿತು. ಹಾಗಾಗಿ ದಿಡ್ಹೀರನೆ ಮೇಲಕ್ಕೇರಿದ ಕೃತಕ ಕೂದಲು ಹಾಗೆಯೇ ನೆಲ ಕಚ್ಚಿತು.

ಈ ಮಧ್ಯೆ ಚೈನಾ ತನ್ನ ದೇಶದವರ ನೈಜ ಕೂದಲನ್ನೇ ಸರಬರಾಜು ಮಾಡಲು ಆರಂಭಿಸಿತು. ಚೈನಾ ಕೂದಲು ದಪ್ಪ ಎಂದು ಫ್ಯಾಶನ್ ಇಂಡಸ್ಟ್ರಿ ಮುಖ ತಿರುಗಿಸಿ ಕುಳಿತುಬಿಟ್ಟಿತು.

ಭಾರತದ ಕೂದಲಿನ ಕೋಮಲತೆಯೇ ಜಗತ್ತಿನ ಮನಸ್ಸನ್ನು ಸೆಳೆದುಬಿಟ್ಟಿದೆ.

ಭಾರತದ ಕೂದಲು ಎಷ್ಟು ಕೋಮಲವೆಂದರೆ ಅದನ್ನು ಹೇಗೆ ಬೇಕಾದರೂ ಬಗ್ಗಿಸಬಹುದು, ಒಗ್ಗಿಸಿಕೊಳ್ಳಬಹುದು ಎನ್ನುವುದು ಫ್ಯಾಶನ್ ಜಗತ್ತಿಗೆ ಗೊತ್ತಾಗಿಬಿಟ್ಟಿದೆ.

ಈ ಕೂದಲಿಗಿರುವ ಕಡುಗಪ್ಪು ಬಣ್ಣ, ಈ ಕೂದಲಿನ ಉದ್ದವೇ ಜಗತ್ತಿನ ಪೈಪೋಟಿಯನ್ನು ಮೆಟ್ಟಿ ನಿಲ್ಲಲು ಕಾರಣವಾಗಿರುವುದು.

ಭಾರತದ ಕೂದಲನ್ನು ಜಗತ್ತಿನ ಫ್ಯಾಶನ್ ಇಂಡಸ್ಟ್ರಿ ‘ವರ್ಜಿನ್ ಹೇರ್’ ‘ರೆಮಿ ಹೇರ್’ ಎಂದೇ ಗುರುತಿಸುತ್ತದೆ.

ಕೂದಲನ್ನು ಮೊದಲ ಬಾರಿ ಕತ್ತರಿಸಿರುವುದು ಒಂದು ಅಂಶವಾದರೆ, ಕೂದಲ ಬುಡದಿಂದಲೇ ಕತ್ತರಿಸುವುದು ಇನ್ನೊಂದು ಕಾರಣ. ತಿರುಪತಿಯಂತಹ ದೇವಸ್ಥಾನದಲ್ಲಿ ಮುಡಿ ಕೊಡುವವರು ಕೂದಲನ್ನು ಡೈ ಮಾಡಿಸಿಕೊಳ್ಳದಿರುವವರು ಎನ್ನುವ ಅಂಶ ಸಹಾ ಮನಸ್ಸು ಗೆಲ್ಲಲು ಕಾರಣ. ಇನ್ನೂ ಎಷ್ಟೋ ಜನ ಸೀಗೆ ಕಾಯಿ ಬಳಸುತ್ತಾರೆಯೇ ಹೊರತು ಶಾಂಪೂ ಬಳಸುವುದಿಲ್ಲ ಎನ್ನುವುದೂ ಭಾರತದ ಕೂದಲಿಗೆ ಜಗತ್ ಮನ್ನಣೆ ಸಿಗಲು ಇರುವ ಕಾರಣಗಳು

ಹಾಗಾದರೆ ಜಗತ್ತಿನಲ್ಲಿ ಭಾರತದಂತಹ ಒಳ್ಳೆಯ ಕೂದಲೇ ಇಲ್ಲವೇ?

ಇದೆ. ಯೂರೋಪಿನ ಹಲವು ದೇಶಗಳ ಕೂದಲು ಭಾರತದ ಕೂದಲಿಗೆ ಪೈಪೋಟಿ ನೀಡುವಂತೆಯೇ ಇದೆ. ಆದರೆ ಜಗತ್ತು ಈ ಕೂದಲನ್ನು ‘ನೈತಿಕ ಕೂದಲು’ ಎಂದು ಭಾವಿಸಿಲ್ಲ.

ಆಶ್ಚರ್ಯ ಆದರೂ ನಿಜ.

ಕೂದಲ ಲೋಕದಲ್ಲೂ ನೈತಿಕ, ಅನೈತಿಕ ಎನ್ನುವ ಬೇಧವಿದೆ.

ಯೂರೋಪಿನಿಂದ ಬರುವ ಕೂದಲಿನ ಬಗ್ಗೆ ಫ್ಯಾಶನ್ ಕೈಗಾರಿಕೆಗೆ ಭಾರೀ ಸಂಶಯವಿದೆ. ಜೈಲುಗಳಲ್ಲಿರುವ ಕೈದಿಗಳ ಕೂದಲನ್ನು ಕತ್ತರಿಸಿ, ಇಲ್ಲವೇ ರಸ್ತೆಯಲ್ಲಿ ಆಕ್ರಮಣ ಮಾಡಿ ಕೂದಲು ಎಗರಿಸಿ, ಬೆದರಿಸಿ ಕೂದಲು ಹರಣ ಮಾಡುವ ದಂಧೆಯೇ ಇದೆ. ಹಾಗಾಗಿ ಈ ಕೂದಲು ಸಾಕಷ್ಟು ಚೆನ್ನಾಗಿದ್ದರೂ ಅದು ಯಾವ ಮೂಲದ್ದೋ ಎನ್ನುವ ಸಂಶಯವೂ ಇದೆ.

ಇದರ ಜೊತೆಗೆ ಯುರೋಪಿಯನ್ನರು ಶಾಂಪೂ, ಹೇರ್ ಡೈ ಬಳಸುವುದರಿಂದ ಬೇಡಿಕೆ ಕಡಿಮೆ. ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿನ ಬಹುತೇಕ ಕೂದಲು ಬರುವುದು ತಿರುಪತಿಯಿಂದ ಇಲ್ಲವೇ ತಮಿಳುನಾಡಿನ ಮುರುಗ ದೇವಸ್ಥಾನಗಳಿಂದ. ಹಾಗಾಗಿ ಇಲ್ಲಿನ ಕೂದಲು ನೈತಿಕವಾದದ್ದು ಎನ್ನುವ ಗೌರವವಿದೆ.

ಭಾರತದ ಕೂದಲಿನ ಕೈಗಾರಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ.

ಸುಮಾರು 25 ಲಕ್ಷ ಮಂದಿ ಈ ಕೂದಲ ಕೈಗಾರಿಕೆಯಲ್ಲಿದ್ದಾರೆ.

ತಿರುಪತಿಯೊಂದರಲ್ಲೇ ಒಂದು ತಿಂಗಳಿಗೆ 1 ಲಕ್ಷ ಪೌಂಡ್ ಕೂದಲು ಶೇಖರವಾಗುತ್ತದೆ ಎನ್ನುವುದು ಭಾರತದ ಕೂದಲಿನ ಕೈಗಾರಿಕೆಯ ಅಗಾಧತೆಗೆ ಕನ್ನಡಿ.

ಅಮೇರಿಕಾ ಕಳೆದ ವರ್ಷ 47 ಮಿಲಿಯನ್ ಡಾಲರ್ ಮೌಲ್ಯದ ಕೂದಲನ್ನು ಆಮದುಮಾಡಿಕೊಂಡಿದೆ. ಬ್ರಿಟನ್ ನಲ್ಲಿ ಕಳೆದ 5 ವರ್ಷಗಳಲ್ಲಿ ಕೂದಲ ಮಾರುಕಟ್ಟೆ ಶೇಖಡಾ 70ರಷ್ಟು ವೇಗವಾಗಿ ಬೆಳೆದಿದೆ. ದೆಹಲಿ, ಮದ್ರಾಸ್, ಬೆಂಗಳೂರಿನಲ್ಲಿ ತಲೆ ಎತ್ತಿರುವ ಕೂದಲು ಸಂಗ್ರಹ ಕೇಂದ್ರಗಳು, ಶುದ್ಧೀಕರಣ ಘಟಕಗಳು ಜಗತ್ತಿನ ಕೂದಲು ಕೈಗಾರಿಕೆ ಬೆಳೆಯುತ್ತಿರುವ ರೀತಿಯನ್ನು ತೋರಿಸುತ್ತದೆ.

ಸರಿ ಹಾಗಾದರೆ ನೀವು ಕೊಪ್ಪಳಕ್ಕೆ ಹೋಗಿದ್ದು ಏಕೆ? ಎಂದೆ.

ನಾಗರಾಜ್, ಭವ್ಯ ಕೂದಲಿನ ಇನ್ನೊಂದು ಲೋಕವನ್ನು ಬಿಚ್ಚಿಡುತ್ತಾ ಹೋದರು.

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಕೂದಲು ಕೊಳ್ಳುವವರು ಬರುತ್ತಾರೆ. ಬಾಚಣಿಗೆಯನ್ನೋ, ಹೇರ್ ಕ್ಲಿಪ್ ಅನ್ನೋ ನೀಡಿ ಮನೆಯವರು ಕೂದಲು ಬಾಚುವಾಗ ಉದುರಿದ ಕೂದಲನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರಿದ್ದಾರೆ ಚಿಂದಿ ಆಯುವವರು. ಅವರು ಪ್ರತೀ ದಿನಾ ಕಸದ ತೊಟ್ಟಿಯನ್ನು ಕೆದರಿ ಅಲ್ಲಿ ಕೂದಲು ಹೆಕ್ಕುತ್ತಾರೆ.

ಈ ಎಲ್ಲವೂ ನಂತರ ಕೂದಲು ಕೈಗಾರಿಕೆ ಇರುವವರ ಬಳಿ ಬರುತ್ತದೆ. ಅದನ್ನು ತೊಳೆದು, ನೇರ ಮಾಡಿ, ಒಣಗಿಸಿ ಇಡುತ್ತಾರೆ ಈ ಕೂದಲು ಸೇರುವುದು ಆಫ್ರಿಕಾದ ದೇಶಗಳನ್ನು. ಆ ನಂತರವೂ ಉಳಿಯುವ ಕೂದಲನ್ನು ತೋಟಕ್ಕೆ ಬೇಕಾದ ಗೊಬ್ಬರವಾಗಿ, ಇಲ್ಲವೇ ಆಹಾರ ಪದಾರ್ಥಗಳಿಗೆ ಬೇಕಾದ ಅಗತ್ಯ ವಸ್ತುಗಳಾಗಿ ಬದಲಾಗುತ್ತವೆ.

ಎಲ್ಲಿಯ ಕೂದಲು? ಎಲ್ಲಿಯ ಆಹಾರವಪ್ಪಾ? ಎನಿಸಿತು.

ಗೂಗಲ್ ಮೊರೆ ಹೊಕ್ಕೆ.

ಬ್ರೆಡ್ ಮಾಡಲು L-Cystine ಎಂಬ ಅಮಿನೊ ಆಸಿಡ್ ಆಗಿ ಕೂದಲನ್ನು ಪರಿವರ್ತಿಸಲಾಗುತ್ತದೆ ಎಂಬ ಮಾಹಿತಿ ಹೊರಬಿತ್ತು.

ಒಂದು ಕೂದಲಿನಲ್ಲಿ ಎಷ್ಟೆಲ್ಲಾ ಅಡಗಿದೆ, ಒಂದೇ ಒಂದು ಕೂದಲಿನಲ್ಲಿ…ಅನಿಸಿತು.