ವಾರದೊಳಗೆ ಯಕ್ಷಗಾನ ಪಠ್ಯಪುಸ್ತಕ ಸಿದ್ಧ

ಬೆಂಗಳೂರು:ಜುಲೈ-18: ಯಕ್ಷಗಾನವನ್ನು ಕ್ರಮಬದ್ಧವಾಗಿ ಕಲಿಸುವ ಉದ್ದೇಶದಿಂದ ಪಠ್ಯಪುಸ್ತಕ ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಈಗ ಮುದ್ರಣ ಕಾರ್ಯವೂ ಪೂರ್ಣಗೊಂಡಿದ್ದು, ವಾರದೊಳಗೆ ಪಠ್ಯಪುಸ್ತಕ ಬಿಡುಗಡೆಗೆ ಸಿದ್ಧಗೊಳ್ಳಲಿದೆ. ಇದರೊಂದಿಗೆ ಯಕ್ಷಗಾನ ಅಕಾಡೆಮಿಯ 12 ವರ್ಷಗಳ ಹಿಂದಿನ ಕನಸೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಂಘಕ್ಕೆ ಈ ಯಕ್ಷಗಾನ ಪಠ್ಯ ಪುಸ್ತಕವನ್ನು ಮುದ್ರಣ ಮಾಡುವ ಹೊಣೆ ವಹಿಸಲಾಗಿದ್ದು, 5-6 ತಿಂಗಳ ಹಿಂದೆಯೇ ಈ ಕುರಿತಂತೆ ಸರಕಾರದಿಂದ ಆದೇಶವೂ ಬಂದಿದೆ. ಈಗಾಗಲೇ ಪ್ರತ್ಯೇಕವಾಗಿ ಇದಕ್ಕೊಂದು ಪಠ್ಯಪುಸ್ತಕ ರಚನೆ ಸಮಿತಿಯನ್ನು ರಚಿಸಲಾಗಿತ್ತು.

12 ವರ್ಷಗಳ ಹಿಂದಿನ ಯೋಜನೆ: 2007ರಲ್ಲಿ ಕುಂಬ್ಳೆ ಸುಂದರ್‌ ರಾವ್‌ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಯಕ್ಷಗಾನವನ್ನು ವ್ಯವಸ್ಥಿತ ರೀತಿಯಲ್ಲಿ ಕಲಿಯಲು ಇಚ್ಛಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಪುಸ್ತಕವೊಂದನ್ನು ರಚಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಆ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೂ ಪ್ರಸ್ತಾವನೆ ಕಳುಹಿಸಿದ್ದರು.

ಅವರ ಅವಧಿ ಮುಗಿದ ಬಳಿಕ ಅಧ್ಯಕ್ಷರಾದ ಎಂ.ಎಲ್‌. ಸಾಮಗ ಅವರು ಸಹ ಇದರ ಕುರಿತಂತೆ ಸಾಕಷ್ಟು ಪ್ರಯತ್ನ ಮುಂದುವರಿಸಿದ್ದರು. ಬಳಿಕ ಪಠ್ಯಪುಸ್ತಕ ರಚನೆ ಸಂಬಂಧ ಯಕ್ಷಗಾನ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಈಗ ಬಿಡುಗಡೆ ಹೊಸ್ತಿಲಲ್ಲಿರುವ ಪಠ್ಯಪುಸ್ತಕ ಸುಮಾರು 12 ವರ್ಷಗಳ ಹಿಂದಿನ ಯೋಜನೆಯಾಗಿದೆ.

ಸ್ವರೂಪ ಹೇಗೆ?: ಪಠ್ಯಪುಸ್ತಕವು ಜೂನಿಯರ್‌ ಹಾಗೂ ಸೀನಿಯರ್‌ ಎನ್ನುವ ಎರಡು ಬೇರೆ ಬೇರೆ ಸಿಲೆಬಸ್‌ ಇಟ್ಟುಕೊಂಡು ಸಿದ್ಧಪಡಿಸಲಾಗುತ್ತಿದೆ. ಯಕ್ಷಗಾನದ ಸಾಹಿತ್ಯ ಚರಿತ್ರೆ, ಬಯಲಾಟದ ಪ್ರಕಾರಗಳ ಸ್ವರೂಪ, ವಿವೇಚನೆಗಳ ಬಗ್ಗೆ ಈ ಪುಸ್ತಕದಲ್ಲಿರಲಿದೆ. ಕರಾವಳಿಯ ತೆಂಕು ತಿಟ್ಟು, ಬಡಗು ತಿಟ್ಟು ಯಕ್ಷಗಾನ ಪ್ರಕಾರ, ಉತ್ತರ ಕನ್ನಡದ ಬಯಲಾಟಕ್ಕೆ ಸಂಬಂಧಿಸಿದ ಪಠ್ಯವನ್ನು ಇದು ಒಳಗೊಂಡಿರಲಿದೆ.

ಈವರೆಗೆ ಯಕ್ಷಗಾನ ತರಬೇತಿ ನೀಡುವವರು ತಾವೇ ಒಂದು ಮಾದರಿ ಇಟ್ಟುಕೊಂಡು ಕಲಿಸುತ್ತಿದ್ದರು. ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಪರೀಕ್ಷೆ ಬರೆಯುವವರಿಗೆ ಇದು ಅನುಕೂಲವಾಗಲಿದೆ. ಆದರೆ ಈ ಪಠ್ಯಪುಸ್ತಕದಿಂದ ಯಕ್ಷಗಾನ ಕಲಿಕೆಗೆ ಅನುಕೂಲವಾಗಲಿದೆ. ಈ ಪುಸ್ತಕದ ಕುರಿತು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಭವಿಷ್ಯದಲ್ಲಿ ಶಾಲಾ -ಕಾಲೇಜು ಮಟ್ಟದಲ್ಲಿಯೂ ಇದನ್ನೊಂದು ಪಠ್ಯವಾಗಿ ಕಲಿಸಲು ಕೂಡ ಅನುಕೂಲವಾಗುತ್ತದೆ.

ಕೇಂದ್ರ ಕಚೇರಿ ಸ್ಥಳಾಂತರವಿಲ್ಲ..!: ಬೆಂಗಳೂರಿನಲ್ಲಿರುವ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಕುರಿತಂತೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯ ಈ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಉಮಾಶ್ರೀ ಅವರು ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಕುರಿತು ಮೌಖೀಕ ಆದೇಶ ನೀಡಿದ್ದರು.

ಆದರೆ ಈ ಅಕಾಡೆಮಿ ಅಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಪಡುವಲಪಾಯ ಕಲಾವಿದರು ಮಾತ್ರವಲ್ಲದೆ ಬೆಂಗಳೂರು, ತುಮಕೂರು, ಮೈಸೂರು ಸೇರಿ ಸುಮಾರು 12 ಜಿಲ್ಲೆಗಳ ಮೂಡಲಪಾಯ, ಘಟ್ಟದ ಕೋರೆ, ಕೇಳಿಕೆ ಪ್ರಕಾರಗಳು ಕೂಡ ಬರುವುದರಿಂದ ಸ್ಥಳಾಂತರ ಮಾಡಿದರೆ ಅಕಾಡೆಮಿ ಕೆಲಸಕ್ಕೆ ಬರುವವರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಅಕಾಡೆಮಿಯಿಂದಲೂ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಇದರಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಕೈಬಿಡಲಾಗಿದ್ದು, ಇದರ ಅಧಿಕೃತ ಆದೇಶ ಮಾತ್ರ ಇನ್ನಷ್ಟೇ ಹೊರಬೀಳಬೇಕಿದೆ.

ಈಗಾಗಲೇ ಪಠ್ಯಪುಸ್ತಕ ಪ್ರಕ್ರಿಯೆ ಅಂತಿಮಗೊಂಡು, ಮುದ್ರಣ ಕೆಲಸವೂ ಅಂತಿಮ ಹಂತದಲ್ಲಿದೆ. ತ್ವರಿತಗತಿಯಲ್ಲಿ ಮುದ್ರಣ ಕಾರ್ಯ ಮುಗಿಸಲು ಯಕ್ಷಗಾನ ಅಕಾಡೆಮಿ ವತಿಯಿಂದ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಯಕ್ಷಗಾನ ಪಠ್ಯಪುಸ್ತಕ ಬಿಡುಗಡೆಗೆ ಸಿದ್ಧಗೊಳ್ಳಲಿದೆ. ಇದರಿಂದ ಯಕ್ಷಗಾನ ತರಬೇತಿ ನೀಡುವವರಿಗೆ, ಯಕ್ಷಗಾನ ಕಲಿಕೆಗೆ ಪ್ರಯೋಜನವಾಗಲಿದೆ.
-ಎಂ.ಎಂ. ಹೆಗಡೆ, ಅಧ್ಯಕ್ಷರು, ರಾಜ್ಯ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಪಠ್ಯಪುಸ್ತಕ ಮುದ್ರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ವಾರದೊಳಗೆ ಈ ಕುರಿತ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿದ್ದು, ಮುಂದಿನ ಸಭೆಯಲ್ಲಿ ಈ ಅಂತಿಮಗೊಳಿಸಲಾಗುವುದು. ಪ್ರಥಮ ಹಂತದಲ್ಲಿ 5 ಸಾವಿರ ಪುಸ್ತಕ ಮುದ್ರಣಗೊಳಿಸಲಾಗಿದೆ.
-ಗೋಪಾಲಕೃಷ್ಣ ಎಚ್‌.ಎನ್‌., ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಪಠ್ಯಪುಸ್ತಕ ಸಂಘ
ಕೃಪೆ:ಉದಯವಾಣಿ

ವಾರದೊಳಗೆ ಯಕ್ಷಗಾನ ಪಠ್ಯಪುಸ್ತಕ ಸಿದ್ಧ

yakshagana-textbook-ready-within-a-week