ಹಾವಿಗೂ ಬಂತು ರೇಡಿಯೊ ಟೆಲಿಮೀಟರ್: ಹುಣಸೂರಿನ ರತ್ನಪುರಿಯಲ್ಲಿ ವಿಶೇಷ ಪ್ರಯೋಗ, ಕೊಳಕುಮಂಡಲ ಚಲನವಲನ ಅಧ್ಯಯನ

ಬೆಂಗಳೂರು: ಹುಲಿ ಆಯ್ತು, ಆನೆ ಆಯ್ತು.. ಈಗ ಹಾವಿಗೂ ರೇಡಿಯೊ ಟೆಲಿಮೀಟರ್ ಅಳವಡಿಸಿ ಅದರ ಚಲನವಲನ ಅಧ್ಯಯನ ಮಾಡುವ ಹೊಸ ಪ್ರಯೋಗ ನಡೆಸಲಾಗುತ್ತಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಹ್ಯೂಮನ್ ಸೊಸೈಟಿ ಇಂಟರ್​ನ್ಯಾಷನಲ್ ಇಂಡಿಯಾ ಮತ್ತು ಜೆರ್ರಿ ಮಾರ್ಟಿನ್ ಪ್ರಾಜೆಕ್ಟ್ ಮೂಲಕ ಒಂದು ತಂಡ ‘ಕೊಳಕು ಮಂಡಲ’ ಹಾವಿನ ಚಲನವಲನಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಇದನ್ನು ದೇಶದಲ್ಲೇ ಪ್ರಥಮ ಎನ್ನಲಾಗಿದೆ.

ಜೆರ್ರಿ ಮಾರ್ಟಿನ್, ಸೊಸೈಟಿಯ ವೈಲ್ಡ್​ಲೈಫ್ ಕ್ಯಾಂಪೇನ್ ಮ್ಯಾನೇಜರ್ ಸುಮಂತ್ ಬಿಂದುಮಾಧವ್, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಆಗಿ ಪೃಥ್ವಿರಾಮ್ ಭುವನ್, ಲೀಸಾ, ಚಾಂದಿನಿ ಚಪ್ರ, ಮರೀನಾ ಜೂಲಿಯಟ್ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ.

ಅಧ್ಯಯನಕ್ಕೆ ಕಾರಣ: ಪ್ರತಿವರ್ಷ ದೇಶದಲ್ಲಿ 10 ಲಕ್ಷ ಮಂದಿ ಹಾವು ಕಡಿತಕ್ಕೆ ಒಳಗಾಗುತ್ತಿದ್ದು, ರಿಜಿಸ್ಟರ್ ಜನರಲ್ ಆಫ್ ಇಂಡಿಯಾದ 2011ರ ಅಧ್ಯಯನದ ಪ್ರಕಾರ ವರ್ಷಕ್ಕೆ 40-50 ಸಾವಿರ ಜನರು ಮೃತಪಡುತ್ತಿದ್ದಾರೆ. ಅದರಲ್ಲಿ ಕೊಳಕುಮಂಡಲ ಹಾವಿನಿಂದ ಕಡಿತಕ್ಕೆ ಒಳಗಾದವರೇ ಹೆಚ್ಚು. ಆದ್ದರಿಂದ ಅಧ್ಯಯನಕ್ಕೆ ಆ ಜಾತಿಯ ಹಾವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

ರತ್ನಪುರಿ ಗ್ರಾಮದ ಸುತ್ತಮುತ್ತ ತೋಟ-ಹೊಲಗಳಲ್ಲಿ ಕಾಣಿಸಿಕೊಳ್ಳುವ ಕೊಳಕುಮಂಡಲ ಹಾವುಗಳನ್ನು ಸೆರೆ ಹಿಡಿದು, ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ರೇಡಿಯೊ ಟೆಲಿಮೀಟರ್ ಅಳವಡಿಸಿ ಹಿಡಿದ ಜಾಗದಲ್ಲೇ ಬಿಡಲಾಗಿದೆ. ಮೂರು ವರ್ಷ ಪ್ರತಿದಿನ ಟ್ರ್ಯಾಕ್ ಮಾಡಿ ಚಲನವಲನ ದಾಖಲಿಸಿಕೊಳ್ಳಲಾಗುತ್ತದೆ. ಅರಣ್ಯ ಇಲಾಖೆ 30 ಕೊಳಕುಮಂಡಲ ಹಾವುಗಳಿಗೆ ಮಾತ್ರ ರೇಡಿಯೊ ಟೆಲಿಮೀಟರ್ ಅಳವಡಿಕೆಗೆ ಅನುಮತಿ ನೀಡಿದ್ದು, 20 ಹಾವುಗಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ಅನುಮತಿ ಸಿಕ್ಕಿದೆ ಎಂದು ಮೈಸೂರು ಡಿಸಿಎಫ್ ಡಾ.ಪ್ರಶಾಂತ್​ಕುಮಾರ್ ಸ್ಪಷ್ಟಪಡಿಸಿದ್ದಾರೆ.

ರೇಡಿಯೊ ಟೆಲಿಮೀಟರ್ ಉಪಕರಣ

ಆನೆಗಳಿಗೆ ತೊಡಿಸುವ ರೇಡಿಯೊ ಕಾಲರ್ ಜಿಪಿಎಸ್ ಮೂಲಕ ಕಾರ್ಯನಿರ್ವಹಿಸುವುದರಿಂದ ಮಾಹಿತಿ ಮೊಬೈಲ್​ಫೋನ್ ಆಪ್ ಮೂಲಕ ಲಭ್ಯವಾಗುತ್ತದೆ. ಆದರೆ ಹಾವುಗಳಿಗೆ ತೊಡಿಸುವ ವಿಎಚ್​ಎಫ್ ರೇಡಿಯೊ ಟ್ರಾನ್ಸ್ ಮೀಟರ್ ಆಂಟೆನಾ ಮತ್ತು ರಿಸೀವರ್ ಸಿಗ್ನಲ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಉಪಕರಣ ಒಂದು ಮೈಕ್ರೋಚಿಪ್ ಮತ್ತು ಬ್ಯಾಟರಿ ಹೊಂದಿದ್ದು, 13 ಗ್ರಾಂ ತೂಕವಿದೆ. ರೇಡಿಯೊ ಟೆಲಿಮೀಟರ್ ತೊಡಿಸಿದ ಹಾವಿನಿಂದ ಕನಿಷ್ಠ 500 ಮೀ. ಅಥವಾ 1 ಕಿ.ಮೀ. ವ್ಯಾಪ್ತಿಯಲ್ಲಿ ಇರಬೇಕು. ಆಗ ಟ್ರ್ಯಾಕ್ ಮಾಡಿಕೊಂಡು ಹೋದಾಗ ಹಾವಿರುವ ಜಾಗದ ಬಳಿ ಸಿಗ್ನಲ್ ಶಬ್ದ ಜೋರಾಗುತ್ತದೆ. ಸಮೀಪದಲ್ಲಿ ಬಿಲ ಅಥವಾ ಪೊದೆಯಲ್ಲಿ ಹುಡುಕಿದರೆ ಹಾವು ಕಂಡುಬರುತ್ತದೆ.

ವಿಶೇಷ ಸಂಗತಿಗಳು ಬಯಲು

ಅಧ್ಯಯನ ಪ್ರಾರಂಭಿಸಿ 10 ತಿಂಗಳಾಗಿವೆ. ಜೂನ್ ತಿಂಗಳಲ್ಲಿ ಹಲವು ಹಾವುಗಳು ಗರ್ಭ ಧರಿಸಿದ್ದು, ಈಗ ಅವೆಲ್ಲ ಮರಿ ಮಾಡಿವೆ. ಹಿಡಿದು ಬಿಟ್ಟ ಹಾವುಗಳು 150200 ಚದರಮೀಟರ್ ಪ್ರದೇಶದಲ್ಲೇ ವಾಸಿಸುತ್ತಿದ್ದು, ಆಹಾರ, ನೀರು ಮತ್ತು ಬಚ್ಚಿಟ್ಟುಕೊಳ್ಳಲು ಜಾಗ ಸಿಕ್ಕಿರುವುದರಿಂದ ಅವು ಹೆಚ್ಚು ದೂರ ಕ್ರಮಿಸಿಲ್ಲ. ಹಾವು ಗರ್ಭ ಧರಿಸಿದಾಗ ಅದರ ದೇಹ ದಪ್ಪವಾಗಿದ್ದು, ಒಂದೇ ಬಿಲದಲ್ಲಿರುವುದರಿಂದ ಹೆಚ್ಚು ದೂರ ಹೋಗುವುದಿಲ್ಲ. ಆದರೆ ಮರಿ ಹಾಕಿದ ಮೇಲೆ ಎಲ್ಲ ಹೆಣ್ಣಾವುಗಳ ಆಹಾರ ಅನ್ವೇಷಣೆ ಚುರುಕಾಗಿದೆ. ತಂಡದ ಸದಸ್ಯರು ದಿನ ಟ್ರ್ಯಾಕ್ ಮಾಡುವುದರಿಂದ ಚಲನವಲನ ಗೊತ್ತಾಗಿ ಜನ-ಜಾನುವಾರುಗಳಿಂದ ಎಷ್ಟು ದೂರದಲ್ಲಿದೆ ಎಂಬ ಮಾಹಿತಿ ತಿಳಿಯುತ್ತದೆ. ರೈತರೊಂದಿಗೆ ಆ ಮಾಹಿತಿ ಹಂಚಿಕೊಳ್ಳುವ ಮೂಲಕ ಅವರನ್ನು ಜಾಗೃತಗೊಳಿಸಲಾಗುತ್ತಿದೆ.

ರೈತರಿಗೆ ಮಾಹಿತಿ ರವಾನೆ

ಇತ್ತೀಚೆಗೆ ರೈತರೊಬ್ಬರು ಹಸು ಕಟ್ಟಿದ್ದ ಜಾಗದಿಂದ 2 ಮೀ. ದೂರದಲ್ಲಿ ರೇಡಿಯೊ ಟೆಲಿಮೀಟರ್ ತೊಡಿಸಿದ್ದ ಕೊಳಕುಮಂಡಲ ಹಾವಿತ್ತು. ತಕ್ಷಣ ಆ ರೈತರಿಗೆ ಮಾಹಿತಿ ನೀಡಿ ಹಸುವನ್ನು ಬೇರೆಡೆ ಕಟ್ಟಲು ತಿಳಿಸಿದೆವು. ಹಾವು ಮನೆ ಅಥವಾ ಶಾಲೆಯ ಪಕ್ಕದಲ್ಲಿದ್ದರೆ ಮಕ್ಕಳಿಗೆ ಅತ್ತ ಹೋಗದಿರಲು ತಿಳಿಸುತ್ತೇವೆ. ಕೃಷಿ ಕೆಲಸ ಮಾಡುವಾಗ ಚಪ್ಪಲಿ, ಶೂ ಧರಿಸಿ ರಾತ್ರಿ ವೇಳೆಯಲ್ಲಿ ಓಡಾಡುವಾಗ ಕಡ್ಡಾಯವಾಗಿ ಟಾರ್ಚ್ ಬಳಸಿ ಎಂಬ ಮಾಹಿತಿ ನೀಡುತ್ತೇವೆ ಎನ್ನುತ್ತಾರೆ ಸುಮಂತ್ ಮತ್ತು ಪೃಥ್ವಿರಾಮ್

ಹಾವು ಕಚ್ಚಿದ ತಕ್ಷಣ…

ವಾಚು-ಬಳೆ ಏನಿದ್ದರೂ ತೆಗೆಯಬೇಕು.
ಕಾಲು ಅಥವಾ ಕೈಯನ್ನು ಒಂದೇ ಸ್ಥಿತಿಯಲ್ಲಿಟ್ಟುಕೊಳ್ಳಬೇಕು.
ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು.
ಹಾವು ಕಡಿದ ಸಮಯ, ನಂತರ ಚಟುವಟಿಕೆಗಳನ್ನು ಬರೆದಿಟ್ಟು ವೈದ್ಯರಿಗೆ ಮಾಹಿತಿ ನೀಡಬೇಕು.
ಹಾವುಗಳ ಕುರಿತ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಹಾವುಗಳ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಹಾವಿನ ಕಡಿತದ ಬಗ್ಗೆ ರತ್ನಪುರಿ ಸುತ್ತಮುತ್ತ ಮನೆ ಮನೆ ಸರ್ವೆ ನಡೆಸುತ್ತಿದ್ದು, ನಿಖರ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹಾವಿನ ಕಡಿತದ ಚಿಕಿತ್ಸೆ ಕುರಿತು ವೈದ್ಯರಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳುವ ಯೋಜನೆ ಇದೆ. ಜತೆಗೆ ಹಾವು ಹಿಡಿಯುವವರಿಗೆ ಮೈಸೂರು ಮೃಗಾಲಯದ ಮೂಲಕ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ.

| ಸುಮಂತ್ ಬಿಂದುಮಾಧವ್, ಪೃಥ್ವಿರಾಮ್ ಅಧ್ಯಯನಕಾರರು

ಮಕ್ಕಳಿಗೆ ವಿಶೇಷ ಜಾಗೃತಿ

ರೇಡಿಯೊ ಟೆಲಿಮೀಟರ್ ಅಳವಡಿಕೆ ಜತೆಗೆ ರತ್ನಪುರಿ ಸುತ್ತಮುತ್ತಲ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರತಿ 2-3 ವಾರಗಳಿಗೊಮ್ಮೆ ಶನಿವಾರ ಅಥವಾ ಭಾನುವಾರ ಕಾರ್ಯಾಗಾರ ನಡೆಸಲಾಗುತ್ತಿದೆ. ನಾಗರಹಾವು, ಕೊಳಕುಮಂಡಲ, ಗರಗಸ ಮಂಡಲ ಮತ್ತು ಕಟ್ಟುಹಾವು ಈ 4 ಬಗೆಯ ಹಾವುಗಳು ಮಾತ್ರ ವಿಷಪೂರಿತವಾಗಿದ್ದು, ಅವುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ 200 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಕೃಪೆ:ವಿಜಯವಾಣಿ

ಹಾವಿಗೂ ಬಂತು ರೇಡಿಯೊ ಟೆಲಿಮೀಟರ್: ಹುಣಸೂರಿನ ರತ್ನಪುರಿಯಲ್ಲಿ ವಿಶೇಷ ಪ್ರಯೋಗ, ಕೊಳಕುಮಂಡಲ ಚಲನವಲನ ಅಧ್ಯಯನ

world-snake-day-snake-poison-snake-bite