ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆ ನಿಷ್ಪಕ್ಷಪಾತ ಅಧ್ಯಯನ ಹೇಗೆ ಸಾಧ್ಯ..? ಕೇಂದ್ರದ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಕಿಡಿ…

ಬೆಂಗಳೂರು,ಸೆಪ್ಟಂಬರ್, 16,2020(www.justkannada.in): ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯಲ್ಲಿ ಮಹಿಳೆಯರು ಮತ್ತು ದಕ್ಷಿಣ ಭಾರತೀಯರಿಗೆ ಸ್ಥಾನ ನೀಡದಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಮತ್ತೊಂದು ಟ್ವೀಟ್ ಮಾಡಿ ಕೇಂದ್ರದ ವಿರುದ್ದ ಹರಿಹಾಯ್ದಿರುವ ಹೆಚ್.ಡಿ ಕುಮಾರಸ್ವಾಮಿ,  ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾದುವೆ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ..? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ..? ಎಂದು ಕಿಡಿಕಾರಿದ್ದಾರೆ.

ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ…

ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ, ಉತ್ತರ ಭಾರತೀಯರೇ ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Key words: Women – South Indians – experts committee-culture study-Former CM- HD Kumaraswamy