ಗಗನಕ್ಕೇರಿದ ಸಗಟು ಶುಂಠಿ ಬೆಲೆ: ಉತ್ಪಾದನೆ ಕುಸಿತ ಹಿನ್ನೆಲೆ, ಹೊಸ ಶುಂಠಿ ಬರಲು ಕನಿಷ್ಠ ಮೂರು ತಿಂಗಳು ಬೇಕು

ಬೆಂಗಳೂರು:ಜುಲೈ-15: ಆಯುರ್ವೆದ ಔಷಧದಿಂದ ಮೊದಲ್ಗೊಂಡು ಮಾಂಸಾಹಾರಿ ಅಡುಗೆವರೆಗೆ ಅತ್ಯವಶ್ಯಕವಾದ ಶುಂಠಿ ಬೆಲೆ ಗಗನಕ್ಕೇರಿದೆ. ಕೆ.ಜಿ.ಗೆ ಪ್ರತಿವರ್ಷ 50-60 ರೂ. ಇರುತ್ತಿದ್ದ ಸಗಟು ಶುಂಠಿ ಬೆಲೆ ಈ ವರ್ಷ 100-158 ರೂ.ಗೆ ಹೆಚ್ಚಳವಾಗಿದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ 120-170 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಷ್ಟು ಶುಂಠಿ ಲಭ್ಯವಿಲ್ಲದಿರುವುದು ಬೆಲೆ ಹೆಚ್ಚಾಗಲು ಕಾರಣ. ಉತ್ತಮ ದರ್ಜೆ ಶುಂಠಿ 60 ಕೆ.ಜಿ. ಚೀಲಕ್ಕೆ 6,000-6,500 ರೂ., ಮಧ್ಯಮ ದರ್ಜೆಯದ್ದು 4,000-4,500 ರೂ. ಇದ್ದದ್ದು ಈಗ 6,000-9,500 ರೂ.ವರೆಗೆ ಏರಿಕೆ ದಾಖಲಿಸಿದೆ.

ಉತ್ಪಾದನೆ ಕಡಿಮೆ: ಹಾಸನ ಜಿಲ್ಲೆಯಲ್ಲಿ ಹೆಚ್ಚು ಶುಂಠಿ ಬೆಳೆಯಲಾಗುತ್ತದೆ. 2017-2018ರಲ್ಲಿ 6,722 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿತ್ತು. 69,008 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. 60 ಕೆ.ಜಿ. ಚೀಲಕ್ಕೆ 800-900 ರೂ. ಲಭಿಸಿತ್ತು. 2018-2019 ಸಾಲಿನಲ್ಲಿ 5,026 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದ್ದು, 51,690 ಮೆಟ್ರಿಕ್ ಟನ್ ಇಳುವರಿ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಳೇ ಶುಂಠಿ ದಾಸ್ತಾನು ಖಾಲಿಯಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ದಿನಂಪ್ರತಿ ಅಂದಾಜು 1,200-1,500 ಚೀಲ ಬರುತ್ತಿದ್ದ ಶುಂಠಿ ಈಗ 300-400 ಚೀಲಗಳಷ್ಟು ಬಂದರೆ ಹೆಚ್ಚು ಎನ್ನುತ್ತಾರೆ ಶುಂಠಿ ಮಂಡಿ ವ್ಯಾಪಾರಿಗಳು. ಹೊಸ ಶುಂಠಿ ಬರಲು ಇನ್ನೂ 3 ತಿಂಗಳಾದರೂ ಬೇಕು.

ಶುಂಠಿ ದಾಸ್ತಾನು ಶೇ. 80 ಖಾಲಿಯಾಗಿದೆ. ಹೊಸ ಬೆಳೆ ಬರಲು ಇನ್ನು 3 ತಿಂಗಳು ಬೇಕು. ಹೊರ ರಾಜ್ಯದ ಶುಂಠಿ ಕೂಡ ಖಾಲಿಯಾಗಿದೆ. ಹೀಗಾಗಿ ಉತ್ತರ ಭಾರತದಲ್ಲಿ ರಾಜ್ಯದ ಶುಂಠಿಗೆ ಭಾರಿ ಬೇಡಿಕೆ ಉಂಟಾಗಿದೆ. ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ.

| ಪರ್ವೆಜ್ ಬೆಂಗಳೂರು ಎಪಿಎಂಸಿ ಶುಂಠಿ ಮಂಡಿ ವ್ಯಾಪಾರಿ

ಬೆಳ್ಳುಳ್ಳಿ ದರವೂ ಏರಿಕೆ

ಶುಂಠಿ ಬೆಲೆ ಏರಿಕೆ ಬೆನ್ನಲ್ಲೆ ಈಗ ಬೆಳ್ಳುಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಬೆಳ್ಳುಳ್ಳಿ ಇಳುವರಿ ಕೊರತೆ ಮತ್ತು ಅಧಿಕ ಬೇಡಿಕೆ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ಕ್ವಿಂಟಾಲ್​ಗೆ 6,000-9,000 ರೂ. ಇದ್ದ ಬೆಲೆ ಈಗ 7000-10,000 ರೂ. ಗೆ ಹೆಚ್ಚಳವಾಗಿದೆ.
ಕೃಪೆ:ವಿಜಯವಾಣಿ

ಗಗನಕ್ಕೇರಿದ ಸಗಟು ಶುಂಠಿ ಬೆಲೆ: ಉತ್ಪಾದನೆ ಕುಸಿತ ಹಿನ್ನೆಲೆ, ಹೊಸ ಶುಂಠಿ ಬರಲು ಕನಿಷ್ಠ ಮೂರು ತಿಂಗಳು ಬೇಕು

wholesale-ginger-prices-goes-high