ಯಾರು ಜಾಮೀನು ಪಡೆಯಬಹುದು ಹಾಗೂ ಎಷ್ಟು ಬೇಗ ದೊರೆಯುತ್ತದೆ..? ಕೆಲವು ಕುತೂಹಲಭರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ನವದೆಹಲಿ, ನವೆಂಬರ್ 3, 2021 (www.justkannada.in): ಮಾದಕವಸ್ತುಗಳ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಂತಹ ಬಾಲಿವುಡ್ ನಟ ಶಾರೂಖ್ ಖಾನ್‌ ನ ಮಗ ಆರ್ಯನ್ ಖಾನ್ ಕೊನೆಗೂ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಎರಡು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ ಮತ್ತು ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಕೊನೆಗೂ ಜಾಮೀನು ಲಭಿಸಿದೆ. ಈ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದ ವಕೀಲ ಸಾಗರ್ ಜಿ. ನಹರ್ ಅವರು ಜಾಮೀನಿಗೆ ಸಂಬಂಧಪಟ್ಟ ಕೆಲವು ಸಾರ್ವಜನಿಕರ ಕುತೂಹಲಭರಿತ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಿದ್ದಾರೆ.

ಇತರೆ ಪ್ರಕರಣಗಳಿಗೆ ಹೋಲಿಸಿದಂತೆ ಕೆಲವು ಪ್ರಕರಣಗಳಲ್ಲಿ ಜಾಮೀನು ಸುಲಭವಾಗಿ ಲಭಿಸುವುದೇ?

ಬಹುಪಾಲು ಅಪರಾಧಗಳು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಬರುತ್ತವೆ. ಎರಡು ವರ್ಷ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯ ಬಂಧನದ ಸಂಭವ ಇರುವಂತಹ ಅಪರಾಧ ಪ್ರಕರಣಗಳಲ್ಲಿ ಕೂಡಲೇ ಜಾಮೀನು ಸಿಗುತ್ತದೆ. ಅದಕ್ಕಾಗಿ ನೀವು ನ್ಯಾಯಾಲಯಕ್ಕೇ ಹೋಗಬೇಕೆಂದಿಲ್ಲ – ಸಂಬಂಧಪಟ್ಟ ಪೋಲಿಸ್ ಠಾಣೆಯ ಪ್ರಭಾರ ಅಧಿಕಾರಿಯೇ ಅಗತ್ಯ ಬಾಂಡ್ ಪಡೆದು ಜಾಮೀನನ್ನು ಅನುಮೋದಿಸಬಹುದು. ಮಾನನಷ್ಟ ಮೊಕದ್ದಮೆ, ಅಪರಾಧದ ಉಲ್ಲಂಘನೆ, ಇತ್ಯಾಧಿ ಪ್ರಕರಣಗಳು ಇದರಲ್ಲಿ ಸೇರಿವೆ.

ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಅಪಾಯ ಉಂಟು ಮಾಡಬಹುದಾಗಿರುವಂತಹ ಹಾಗೂ ರ್ಯಾಶ್  ಡ್ರೈವಿಂಗ್ ನಿಂದಾಗಿ ಸಾವುಂಟಾಗಿ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯ ಬಂಧನದ ಶಿಕ್ಷೆ ಎದುರಿಸಬಹುದಾಗಿರುವಂತಹ ಐಪಿಸಿ ಅಪರಾಧಗಳಲ್ಲಿ ನೀವು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು.

ಆದರೆ ಆರ್ಯನ್ ಖಾನ್ ಅವರ ಪ್ರಕರಣ Narcotic Drugs and Psychotropic Substances (NDPS) Act, 1985 ಗೆ ಸೇರಿದೆ. ಹಾಗಾಗಿ ಈ ಪ್ರಕರಣದಲ್ಲಿ ಜಾಮೀನು ಪ್ರಕ್ರಿಯೆ ಬೇರೆಯೇ ರೀತಿ ಕಾರ್ಯನಿರ್ವಹಿಸುತ್ತದೆ.

ಈ ಪ್ರಕರಣದಲ್ಲಿ ಇರುವಂತಹ ತೊಡಕುಗಳೇನು?

ಎನ್‌ಡಿಪಿಎಸ್ ಕಾಯ್ದೆಯ ಕಲಂ ೩೭ ರ ಪ್ರಕಾರ ಈ ಕಾಯ್ದೆಯ ವ್ಯಾಪ್ತಿಯಡಿ ಬರುವ ಎಲ್ಲಾ ಅಪರಾಧಗಳೂ ಸಹ ಗುರುತಿಸಬಹುದಾಗಿರುವಂತಹ ಹಾಗೂ ಜಾಮೀನುರಹಿತ ಪ್ರಕರಣಗಳಾಗಿವೆ. ಅಂದರೆ ಇದರರ್ಥ ಯಾವುದೇ ಪ್ರಮಾಣದ ಶಿಕ್ಷೆಯಾಗಿದ್ದರೂ ಸಹ ನೀವು ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಓರ್ವ ಸಾರ್ವಜನಿಕ ಅಭಿಯೋಜಕರಿಗೆ ನಿಮ್ಮ ಜಾಮೀನಿನ ಅರ್ಜಿಯನ್ನು ವಿರೋಧಿಸುವ ಅವಕಾಶ ನೀಡುವವರೆಗೂ ನಿಮ್ಮನ್ನು ಬಿಡುಗಡೆ ಮಾಡುವಂತಿಲ್ಲ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಕೇವಲ ಮಾದವಕವಸ್ತುಗಳನ್ನು ಸೇವಿಸಿದ್ದರೆ ಆಗ ಜಾಮೀನು ದೊರೆಯುತಿತ್ತು ಹಾಗೂ ತನ್ನ ತಪ್ಪನ್ನು ಒಪ್ಪಿಕೊಂಡು ರೂ.೧೦,೦೦೦ ದಂಡ ಕಟ್ಟಬೇಕಾಗುತಿತ್ತು. ಆದರೆ ಆತನ ವಿರುದ್ಧ ಈ ಪ್ರಕರಣದಲ್ಲಿ ಮಾದಕವಸ್ತುಗಳ ಖರೀದಿ, ಮಾರಾಟ, ಸಂಗ್ರಹ ಹಾಗೂ ಸಾರಿಗೆ ಒಳಗೊಂಡಂತೆ ಪ್ರಚೋದನೆ ಮತ್ತು ಅಪರಾಧಕ್ಕೆ ಪಿತೂರಿ ನೀಡುರುವ ಆರೋಪಗಳೂ ಸೇರಿವೆ.

ಈತನ ಜಾಮೀನು ಅನುಮೋದನೆಯನ್ನು ಬೇಕಂತಲೇ ವಿಳಂಬಗೊಳಿಸಲಾಯಿತೇ?

ಇಲ್ಲ. ಇಂತಹ ಪ್ರಕರಣಗಳಲ್ಲಿ ಆರು ತಿಂಗಳ ಒಳಗೆ ಜೈಲಿನಿಂದ ಹೊರಗೆ ಬಂದಂತಹ ಪ್ರಕರಣಗಳನ್ನು ನಾನು ಈವರೆಗೆ ಕಂಡಿಲ್ಲ. ಏಕೆಂದರೆ ಎನ್‌ಡಿಪಿಎಸ್ ಪೋಲಿಸರಿಗೆ ಇಂತಹ ಪ್ರಕರಣಗಳಲ್ಲಿ ತಪಾಸಣೆ ಮಾಡಲು ಹಾಗೂ ಚಾರ್ಜ್ ಶೀಟ್ ಅನ್ನು ದಾಖಲಿಸಲು ಆರು ತಿಂಗಳ ಕಾಲಾವಧಿಯನ್ನು ನೀಡುತ್ತದೆ, ಏಕೆಂದರೆ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲು ಸಮಯ ಹಿಡಿಸುತ್ತದೆ. ಐಪಿಸಿ ಅಪರಾಧಗಳಿಗೆ ಮೂರು ತಿಂಗಳ ಕಾಲಾವಕಾಶವಿರುತ್ತದೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್‌ ಗೆ ಬೇಗನೆ ಜಾಮೀನು ಲಭಿಸುತಿತ್ತು, ಆದರೆ ಆತನ ಕಾನೂನಿನ ತಂಡದವರು ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಲ್ಲಿ ತಪ್ಪು ಮಾಡಿದರು. ಎನ್‌ ಡಿಪಿಎಸ್ ಅಥವಾ ಯುಎಪಿಎ, ಭಯೋತ್ಪಾದನಾ ವಿರೋಧಿ ಕಾನೂನಿನಂತಹ ವಿಶೇಷ ಕಾಯ್ದೆಗಳಡಿ ಜಾಮೀನಿನ ಅರ್ಜಿಗಳನ್ನು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸುತ್ತವೆ.

ಎಷ್ಟು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು?

ಪ್ರಕರಣದ ಪ್ರತಿ ಹಂತದಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ.

ಜಾಮೀನು ನ್ಯಾಯಾಂಗ ವಿವೇಚನೆಗೆ ಒಳಪಟ್ಟಿದೆಯೇ?

ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು, “ಜಾಮೀನು ಒಂದು ನಿಯಮ, ಬಂಧನ ಒಂದು ವಿನಾಯಿತಿ,” ಎಂದಿದೆ. ಅಂದರೆ, ಯಾವುದೇ ಒಬ್ಬ ವ್ಯಕ್ತಿ ಅತ್ಯಾಚಾರ ಅಥವಾ ಕೊಲೆಯಂತಹ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಹ ದೊಡ್ಡ ಮಟ್ಟದ ಅಪರಾಧವನ್ನು ಮಾಡಿರದ ಹೊರತು ಅಥವಾ ಅಪರಾಧಿಯನ್ನು ಬಿಟ್ಟುಬಿಟ್ಟರೆ ಸಮಾಜಕ್ಕೆ ಅಪಾಯವನ್ನು ಉಂಟು ಮಾಡುವ ಸಂಭವ ಇರುವ ಸನ್ನಿವೇಶವಿದ್ದರೆ, ಅಂತಹ ಪ್ರಕರಣಗಳಲ್ಲಿ ನ್ಯಾಯವಾದಿಗಳು ಕೂಲಂಕುಷವಾಗಿ ತಪಾಸಣೆ ನಡೆಸಿದ ನಂತರ ಮಾತ್ರವೇ ಜಾಮೀನನ್ನು ನೀಡಬಹುದು.

ನಿಮ್ಮ ಫೋನ್‌ ನ ಪಾಸ್‌ವರ್ಡ್ ಗಳನ್ನು ಪೋಲಿಸರಿಗೆ ನೀಡಬೇಡಿ

ತಪಾಸಣೆ ನಡೆಸುವ ಅಧಿಕಾರಿಗಳು ನಿಮಗೆ ನಿಮ್ಮ ಮೊಬೈಲ್ ದೂರವಾಣಿಯನ್ನು ಅನ್‌ ಲಾಕ್ ಮಾಡುವಂತೆ ಹಾಗೂ ನಿಮ್ಮ ಸಾಮಾಜಿಕ ಮಾಧ್ಯಮದ ಚಾಟ್‌ ಗಳನ್ನು ತೋರಿಸುವಂತೆಯೂ ಬಲವಂತಪಡಿಸುವಂತಿಲ್ಲ. ಏಕೆಂದರೆ ಅದು ನಿಮ್ಮ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ, ಎನ್ನುವುದು ವಕೀಲ ಸಾಗರ್ ಜಿ. ನಹರ್ ಅವರ ಅಭಿಪ್ರಾಯವಾಗಿದೆ.

ಒಂದು ವಿಶೇಷ ಎನ್‌ ಡಿಪಿಎಸ್ ನ್ಯಾಯಾಲಯವು ಆರ್ಯನ್ ಖಾನ್‌ ನ ವಾಟ್ಸ್ಆ್ಯಪ್‌ನಲ್ಲಿ ‘ bulk quantity ‘ ಎಂಬಂತಹ ದೋಷಾರೋಪಣಾ ಸಂದೇಶಗಳಿದ್ದ ಕಾರಣದಿಂದಾಗಿ ಆತನ ಜಾಮೀನಿನ ಅರ್ಜಿಯನ್ನು ತಿರಸ್ಕರಿಸಿತು.

ಒಂದು ವೇಳೆ ಪೋಲಿಸರು ನಿಮಗೆ ಪಾಸ್‌ ವರ್ಡ್ ನೀಡುವಂತೆ ಬಲವಂತಪಡಿಸಿದರೆ ನೀವು ನನಗೆ ಅದು ಮರೆತುಹೋಗಿದೆ ಎಂದು ಉತ್ತರಿಸಬಹುದು, ಎನ್ನುತ್ತಾರೆ ವಕೀಲ ಸಾಗರ್. “ಪೋಲಿಸರು ನಿಮಗೆ ತೊಂದರೆ ನೀಡಿದರೂ ಸಹ ನೀವು ಪಾಸ್‌ವರ್ಡ್ ನೀಡಬೇಡಿ. ಏಕೆಂದರೆ ಫೋನ್ ಅನ್ನು ಅನ್‌ಲಾಕ್ ಮಾಡಿಸುವುದು ಹಾಗೂ ಅದರಲ್ಲಿರುವಂತಹ ವಿಷಯವನ್ನು ಗಮನಿಸುವುದು ಸೈಬರ್ ಅಪರಾಧ ಅಥವಾ ವಿಧಿವಿಜ್ಞಾನ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ.”

ಭಾರತದ ಸಂವಿಧಾನದ ಪರಿಚ್ಛೇದ ೨೦ರ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿನ ಚಾಟ್‌ ಗಳನ್ನು ಬಲವಂತವಾಗಿ ಬಹಿರಂಗಪಡಿಸುವಂತೆ ಮಾಡಿ, ಆರೋಪಿಯನ್ನು ಸ್ವತಃ ಸಾಕ್ಷಿ ಹೇಳುವಂತೆ ಮಾಡುವಂತಿಲ್ಲ ಎಂದು ಉದಾಹರಣೆಯ ಸಮೇತ ವಕೀಲ ಸಾಗರ್ ಅವರು ವಿವರಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Who- can- get- bail – how- soon-drug case- Aryan khan